ಟೀಮ್ ಇಂಡಿಯಾದ (Team India) ಯಶಸ್ವಿ ಆರಂಭಿಕ ಜೋಡಿ ಸಚಿನ್ ತೆಂಡೂಲ್ಕರ್ – ಸೌರವ್ ಗಂಗೂಲಿಯ ದಾಖಲೆಯನ್ನು ರೋಹಿತ್ ಶರ್ಮಾ-ಶಿಖರ್ ಧವನ್ (Rohit Sharma-Shikhar Dhawan) ಮುರಿಯಲಿದ್ದಾರಾ? ಇಂತಹದೊಂದು ಪ್ರಶ್ನೆಗೆ ಕಾರಣವಾಗಿದ್ದು ಶಿಖರ್ ಧವನ್ ಅವರ ಕಂಬ್ಯಾಕ್. ಹೌದು, ಇಂಗ್ಲೆಂಡ್ ವಿರುದ್ದದ ಏಕದಿನ ಸರಣಿಯ ಮೂಲಕ ಶಿಖರ್ ಧವನ್ ಮತ್ತೆ ಟೀಮ್ ಇಂಡಿಯಾ ಏಕದಿನ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಮೊದಲ ಪಂದ್ಯದಲ್ಲೇ ಧವನ್-ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅದರಲ್ಲೂ ಏಕದಿನ ಪಂದ್ಯವನ್ನು ಟೀಮ್ ಇಂಡಿಯಾ ವಿಕೆಟ್ ನಷ್ಟವಿಲ್ಲದೆ ಗೆದ್ದುಕೊಂಡಿತು. ಈ ಪಂದ್ಯದಲ್ಲಿ 114 ರನ್‌ಗಳ ಜೊತೆಯಾಟವಾಡಿದ ಈ ಜೋಡಿ ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಬಳಿಕ ಟೀಮ್ ಇಂಡಿಯಾ ಪರ ಅತ್ಯಧಿಕ ರನ್ಗಳಿಸಿದ ಆರಂಭಿಕರು ಎನಿಸಿಕೊಂಡರು.
ಅಂದರೆ ಏಕದಿನ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಪರ 5 ಸಾವಿರ ರನ್‌ಗಳ ಆರಂಭಿಕ ಜೊತೆಯಾಟವಾಡಿದ ವಿಶೇಷ ದಾಖಲೆಯನ್ನು ರೋಹಿತ್ ಶರ್ಮಾ-ಶಿಖರ್ ಧವನ್ ನಿರ್ಮಿಸಿದ್ದಾರೆ. ಅಲ್ಲದೆ ಈ ಮೈಲಿಗಲ್ಲನ್ನು ದಾಟಿದ ವಿಶ್ವದ ನಾಲ್ಕನೇ ಆರಂಭಿಕ ಜೋಡಿ ಎನಿಸಿಕೊಂಡಿದ್ದಾರೆ. ಇನ್ನು ಟೀಮ್ ಇಂಡಿಯಾ ಪರ ಈ ಸಾಧನೆ ಮಾಡಿದ 2ನೇ ಆರಂಭಿಕ ಜೋಡಿ ಎನ್ನುವ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್-ಸೌರವ್ ಜೋಡಿ ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕ ಪಾಲುದಾರರಾಗಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಇಬ್ಬರೂ 136 ಇನ್ನಿಂಗ್ಸ್‌ಗಳಲ್ಲಿ ಜೊತೆಯಾಗಿ 49.32 ಸರಾಸರಿಯಲ್ಲಿ 6609 ರನ್ ಗಳಿಸಿದ್ದಾರೆ.
ಇದೀಗ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಆರಂಭಿಕ ಪಾಲುದಾರರಾಗಿ 113 ಇನ್ನಿಂಗ್ಸ್‌ಗಳಲ್ಲಿ 5112 ರನ್‌ಗಳನ್ನು ಕಲೆಹಾಕಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ ಅತ್ಯಧಿಕ ರನ್ ಕಲೆಹಾಕಿದ 2ನೇ ಆರಂಭಿಕ ಜೋಡಿ ಎನಿಸಿಕೊಂಡಿದ್ದಾರೆ. ಇನ್ನು ಈ ವಿಶ್ವ ದಾಖಲೆ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್-ಸೌರವ್ ಗಂಗೂಲಿ ಜೋಡಿ ಅಗ್ರಸ್ಥಾನದಲ್ಲಿದ್ದು, ಟೀಮ್ ಇಂಡಿಯಾದ ಈ ಇಬ್ಬರು ಮಾಜಿ ಓಪನರ್ಗಳು ಒಟ್ಟು 6609 ರನ್ ಕಲೆಹಾಕಿದ್ದಾರೆ. ಹಾಗೆಯೇ 2ನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಆ್ಯಡಮ್ ಗಿಲ್‌ಕ್ರಿಸ್ಟ್-ಮ್ಯಾಥ್ಯೂ ಹೇಡನ್ ಇದ್ದು, ಈ ಜೋಡಿ 114 ಇನ್ನಿಂಗ್ಸ್‌ಗಳಲ್ಲಿ 5372 ರನ್‌ಗಳ ಜೊತೆಯಾಟವಾಡಿದ್ದಾರೆ. ವೆಸ್ಟ್ ಇಂಡೀಸ್ನ ಮಾಜಿ ಆರಂಭಿಕ ಜೋಡಿ ಗ್ರೀನಿಡ್ಜ್-ಹಾನ್ಸ್ 102 ಇನ್ನಿಂಗ್ಸ್‌ಗಳಲ್ಲಿ 5150 ರನ್ ಕಲೆಹಾಕಿ ಮೂರನೇ ಸ್ಥಾನದಲ್ಲಿದ್ದಾರೆ.
ಅಂದರೆ, ಗ್ರೀನಿಡ್ಜ್-ಹಾನ್ಸ್ ಜೋಡಿಯ ದಾಖಲೆಯನ್ನು ಮುರಿಯಲು ರೋಹಿತ್-ಶಿಖರ್ ಈಗ ಕೇವಲ 39 ರನ್ ಗಳಿಸಬೇಕಾಗಿದೆ. ರೋಹಿತ್-ಧವನ್ 265 ರನ್‌ಗಳ ಜೊತೆಯಾಟವಾಡಿದ್ದಲ್ಲಿ ಗಿಲ್‌ಕ್ರಿಸ್ಟ್ ಮತ್ತು ಹೇಡನ್ ಜೋಡಿಯ ದಾಖಲೆಯನ್ನೂ ಸಹ ಮುರಿಯಬಹುದು. ಹೀಗಾಗಿ ವಿಶ್ವದ 2ನೇ ಬಲಿಷ್ಠ ಆರಂಭಿಕ ಜೋಡಿಯಾಗಿ ರೋಹಿತ್ ಶರ್ಮಾ-ಶಿಖರ್ ಧವನ್ ಗುರುತಿಸಿಕೊಳ್ಳಲಿದ್ದಾರೆ ಎಂದೇ ಹೇಳಬಹುದು. ಇದಾಗ್ಯೂ ಸಚಿನ್ ತೆಂಡೂಲ್ಕರ್-ಸೌರವ್ ಗಂಗೂಲಿ ಹೆಸರಿನಲ್ಲಿರುವ 6,609 ರನ್‌ಗಳ ವಿಶ್ವ ದಾಖಲೆಯನ್ನು ಮುರಿಯುವುದು ಕಷ್ಟಸಾಧ್ಯ ಎನ್ನಬಹುದು. ಏಕೆಂದರೆ ಹಿಟ್ಮ್ಯಾನ್-ಗಬ್ಬರ್ ಜೋಡಿಗೆ ಈ ದಾಖಲೆ ಮುರಿಯಲು 1,497 ರನ್‌ಗಳ ಅವಶ್ಯಕತೆಯಿದೆ. ಆದರೆ 36 ವರ್ಷವಾಗಿರುವ ಶಿಖರ್ ಧವನ್ ಮುಂಬರುವ ಪಂದ್ಯಗಳಲ್ಲಿ ವಿಫಲರಾದರೆ ತಂಡದಿಂದ ಹೊರಬೀಳುವುದು ಖಚಿತ. ಹೀಗಾಗಿ ಸಚಿನ್ ತೆಂಡೂಲ್ಕರ್-ಸೌರವ್ ಗಂಗೂಲಿ ದಾಖಲೆಯನ್ನು ಮುರಿಯುವುದು ಕಷ್ಟಸಾಧ್ಯ ಎನ್ನಬಹುದು.
Published On - 1:25 pm, Sat, 16 July 22