- Kannada News Sports Cricket news Team India's Champions Trophy Win: Rohit, Gill, Kohli Top ICC ODI Rankings
ICC ODI Rankings: ಭರ್ಜರಿ ಮುಂಬಡ್ತಿ ಪಡೆದ ರೋಹಿತ್, ಜಾರಿದ ಕೊಹ್ಲಿ..! ಟಾಪ್ 5 ರಲ್ಲಿ ಮೂವರು ಭಾರತೀಯರು
ICC ODI Rankings: ಅರಬ್ ದೇಶದಲ್ಲಿ ನಡೆದ 2025ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ಬೀಗಿದ ಟೀಂ ಇಂಡಿಯಾ ಆಟಗಾರರು ಇದೀಗ ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ರೋಹಿತ್ ಶರ್ಮಾ, ಶುಭ್‌ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಏಕದಿನ ಶ್ರೇಯಾಂಕದಲ್ಲಿ ಟಾಪ್ 5 ರೊಳಗೆ ಸ್ಥಾನ ಪಡೆದಿದ್ದಾರೆ. ಗಿಲ್ ಮೊದಲ ಸ್ಥಾನದಲ್ಲಿದ್ದರೆ, ರೋಹಿತ್ ಮೂರನೇ ಮತ್ತು ಕೊಹ್ಲಿ ಐದನೇ ಸ್ಥಾನದಲ್ಲಿದ್ದಾರೆ.
Updated on: Mar 12, 2025 | 3:19 PM

ಅರಬ್ಬರ ನಾಡಿನಲ್ಲಿ ನಡೆದಿದ್ದ 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಜೇಯವಾಗಿ ಫೈನಲ್ಗೇರಿ, ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದ ಟೀಂ ಇಂಡಿಯಾ, ನಿನ್ನೆಯಷ್ಟೇ ಭಾರತಕ್ಕೆ ಬಂದಿಳಿದಿದೆ. ತಂಡದ ಈ ಶ್ರೇಷ್ಠ ಸಾಧನೆಗೆ ಅದರ ಸಾಂಘಿಕ ಪ್ರದರ್ಶನವೇ ಪ್ರಮುಖ ಕಾರಣವಾಗಿತ್ತು.

ಬ್ಯಾಟಿಂಗ್, ಬೌಲಿಂಗ್ ಸೇರಿದಂತೆ ಎಲ್ಲಾ ವಿಭಾಗದಲ್ಲೂ ಪ್ರತಿಯೊಬ್ಬ ಆಟಗಾರನೂ ತನ್ನ ಅತ್ಯುತ್ತಮ ಪ್ರದರ್ಶನ ನೀಡಿದ ಫಲವಾಗಿಯೇ ಟೀಂ ಇಂಡಿಯಾ 2013 ರ ಬಳಿಕ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಕ್ಕಿತ್ತು. ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲಿನ ಅಮೋಘ ಪ್ರದರ್ಶನಕ್ಕೆ ಐಸಿಸಿ ಕೂಡ ಟೀಂ ಇಂಡಿಯಾ ಆಟಗಾರರಿಗೆ ಭರ್ಜರಿ ಗಿಫ್ಟ್ ನೀಡಿದೆ.

ವಾಸ್ತವವಾಗಿ ಇಂದು ಬಿಡುಗಡೆಯಾಗಿರುವ ಐಸಿಸಿ ನೂತನ ಏಕದಿನ ರ್ಯಾಂಕಿಂಗ್ನಲ್ಲಿ ಟೀಂ ಇಂಡಿಯಾದ ಮೂವರು ಆಟಗಾರರು ಟಾಪ್ ಐದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂವರು ಆಟಗಾರರಲ್ಲಿ ತಂಡದ ನಾಯಕ ರೋಹಿತ್ ಶರ್ಮಾ, ಉಪನಾಯಕ ಶುಭ್‌ಮನ್ ಗಿಲ್ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಸೇರಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ರೋಹಿತ್ ಶರ್ಮಾ ಅದ್ಭುತ ಬ್ಯಾಟಿಂಗ್ ಮಾಡುವ ಮೂಲಕ ತಂಡವನ್ನು ಚಾಂಪಿಯನ್ ಆಗಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅದರ ಲಾಭ ಪಡೆದುಕೊಂಡಿರುವ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಹಾಗೂ ಹೆನ್ರಿಚ್ ಕ್ಲಾಸೆನ್ ಅವರನ್ನು ಹಿಂದಿಕ್ಕಿ 756 ರೇಟಿಂಗ್ ಪಾಯಿಂಟ್ಗಳೊಂದಿಗೆ ಮೂರನೇ ಸ್ಥಾನಕ್ಕೇರಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದಿದ್ದರೂ, ತಂಡಕ್ಕೆ ಬೇಕಾದ ಆರಂಭ ನೀಡುವಲ್ಲಿ ಕೊಂಚ ಸಮಾಧಾನಕರ ಪ್ರದರ್ಶನ ನೀಡಿದ್ದ ತಂಡದ ಉಪನಾಯಕ ಶುಭ್‌ಮನ್ ಗಿಲ್ 784 ರೇಟಿಂಗ್ ಪಾಯಿಂಟ್ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

ಉಳಿದಂತೆ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ 770 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಒಂದಂಕಿಗೆ ಸುಸ್ತಾಗಿದ್ದ ವಿರಾಟ್ ಕೊಹ್ಲಿ ಅದರ ಪರಿಣಾಮವೆಂಬಂತೆ ಒಂದು ಸ್ಥಾನ ಕುಸಿದು 5 ನೇ ಸ್ಥಾನಕ್ಕೆ ಜಾರಿದ್ದಾರೆ.
























