ಬಿಸಿಸಿಐ ಕೇಂದ್ರ ಒಪ್ಪಂದ: ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಹಿಂಬಡ್ತಿ ಸಾಧ್ಯತೆ
BCCI Central Contract 2025: ಪ್ರತಿ ವರ್ಷ ಬಿಸಿಸಿಐ ಟೀಮ್ ಇಂಡಿಯಾ ಆಟಗಾರರ ಜೊತೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಈ ಒಪ್ಪಂದದ ಅನುಸಾರ ಆಟಗಾರರಿಗೆ ವಾರ್ಷಿಕ ಮೊತ್ತವನ್ನು ಪಾವತಿಸಲಾಗುತ್ತದೆ. ಇಲ್ಲಿ ಆಟಗಾರರನ್ನು ಎ, ಬಿ, ಸಿ ಮತ್ತು ಡಿ ಗ್ರೇಡ್ ಎಂದು ವಿಂಗಡಿಸಲಾಗುತ್ತಿದ್ದು, ಈ ಮೂಲಕ ಕೋಟಿ ರೂ. ಮೊತ್ತದ ವೇತನವನ್ನು ಪಾವತಿಸಲಾಗುತ್ತದೆ.

ಟೀಮ್ ಇಂಡಿಯಾ ಆಟಗಾರರ ಜೊತೆಗಿನ 2025ರ ಕೇಂದ್ರ ಒಪ್ಪಂದಕ್ಕೆ ಬಿಸಿಸಿಐ ಸಿದ್ಧತೆಗಳನ್ನು ಶುರು ಮಾಡಿದೆ. ಈ ಬಾರಿಯ ಒಪ್ಪಂದದಲ್ಲಿ ಕೆಲ ಮಹತ್ವದ ಬದಲಾವಣೆ ಕಂಡು ಬರಲಿದೆ. ಈ ಬದಲಾವಣೆಯೊಂದಿಗೆ ಟೀಮ್ ಇಂಡಿಯಾದ ದಿಗ್ಗಜರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಹಿಂಬಡ್ತಿ ನೀಡುವ ಸಾಧ್ಯತೆಯಿದೆ.
ಬಿಸಿಸಿಐನ ಪ್ರಸ್ತುತ ಕೇಂದ್ರ ಒಪ್ಪಂದದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾ ಗ್ರೇಡ್ ಎ ಪ್ಲಸ್ನಲ್ಲಿದ್ದಾರೆ. ಅದರಂತೆ ಈ ನಾಲ್ವರು ಆಟಗಾರರು ವಾರ್ಷಿಕವಾಗಿ ತಲಾ 7 ಕೋಟಿ ರೂ. ಪಡೆಯುತ್ತಿದ್ದಾರೆ.
ಆದರೆ ಇದೀಗ ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಹಾಗೂ ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ. ಹೀಗಾಗಿ ಈ ಮೂವರನ್ನು ಗ್ರೇಡ್ ಎ ಪ್ಲಸ್ ಶ್ರೇಣಿಯಿಂದ ಕೈ ಬಿಡುವ ಸಾಧ್ಯತೆಯಿದೆ. ಅಲ್ಲದೆ ಹೊಸ ಒಪ್ಪಂದದಲ್ಲಿ ಈ ಮೂವರನ್ನು ಎ ಗ್ರೇಡ್‌ಗೆ ಸೇರಿಸುತ್ತಾರೋ ಅಥವಾ ಬಿ ಗ್ರೇಡ್‌ಗೆ ಪರಿಗಣಿಸುತ್ತಾರೋ ಎಂಬುದೇ ಈಗ ಕುತೂಹಲ.
ಅಶ್ವಿನ್ ಔಟ್, ಸಿರಾಜ್ಗೆ ಹಿಂಬಡ್ತಿ:
ಬಿಸಿಸಿಐನ ಪ್ರಸ್ತುತ ಕೇಂದ್ರ ಒಪ್ಪಂದದಲ್ಲಿ ಒಟ್ಟು 6 ಆಟಗಾರರು ಎ ಗ್ರೇಡ್ನಲ್ಲಿದ್ದಾರೆ. ಅವರೆಂದರೆ ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಕೆಎಲ್ ರಾಹುಲ್, ಶುಭ್ಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ. ಈ ದರ್ಜೆಯ ಆಟಗಾರರು ಬಿಸಿಸಿಐನಿಂದ ವಾರ್ಷಿಕವಾಗಿ 5 ಕೋಟಿ ರೂ. ಪಡೆಯುತ್ತಿದ್ದಾರೆ. ಆದರೆ ಈಗಾಗಲೇ ನಿವೃತ್ತರಾಗಿರುವ ಅಶ್ವಿನ್ ಅವರನ್ನು ಹೊಸ ಒಪ್ಪಂದದಿಂದ ಕೈ ಬಿಡಲಿದ್ದಾರೆ. ಇನ್ನು ಮೊಹಮ್ಮದ್ ಸಿರಾಜ್ ಅವರನ್ನು ಎ ದರ್ಜೆಯಿಂದ ಬಿ ದರ್ಜೆಗೆ ಇಳಿಸುವ ಸಾಧ್ಯತೆಯಿದೆ.
ಅದೇ ರೀತಿ, ಬಿಸಿಸಿಐನ ಪ್ರಸ್ತುತ ಕೇಂದ್ರ ಒಪ್ಪಂದದಲ್ಲಿ, ಗ್ರೇಡ್ ಬಿ ನಲ್ಲಿ 5 ಆಟಗಾರರು ಮತ್ತು ಗ್ರೇಡ್ ಸಿ ನಲ್ಲಿ ಒಟ್ಟು 15 ಆಟಗಾರರಿದ್ದಾರೆ. ಈ ಎರಡೂ ದರ್ಜೆಗಳಲ್ಲಿ ಒಟ್ಟು 4 ಆಟಗಾರರು ಹೊಸ ಒಪ್ಪಂದದಿಂದ ಹೊರಗುಳಿಯುವ ಸಾಧ್ಯತೆಯಿದೆ. ಅದರಂತೆ ಕೆ.ಎಸ್. ಭರತ್, ಆವೇಶ್ ಖಾನ್, ರಜತ್ ಪಾಟಿದಾರ್ ಮತ್ತು ಜಿತೇಶ್ ಶರ್ಮಾ ಅವರನ್ನು ಕೈ ಬಿಟ್ಟರೂ ಅಚ್ಚರಿಪಡಬೇಕಿಲ್ಲ.
ಯಾರಿಗೆ ಬಂಪರ್?
ಬಿಸಿಸಿಐ ಹೊರಡಿಸಲಿರುವ ಟೀಮ್ ಇಂಡಿಯಾದ ಹೊಸ ಕೇಂದ್ರ ಒಪ್ಪಂದದಲ್ಲಿ ಗ್ರೇಡ್ ಎ ಪ್ಲಸ್ನಲ್ಲಿ ಸ್ಥಾನ ಪಡೆಯುವವರು ಯಾರು? ಎಂಬುದೇ ಈಗ ಕುತೂಹಲ. ಏಕೆಂದರೆ ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಅಕ್ಷರ್ ಪಟೇಲ್ ಭಾರತ ತಂಡದ ಖಾಯಂ ಸದಸ್ಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಮೂವರಿಗೆ ಮುಂಬಡ್ತಿ ಸಿಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಮುಂದಿನ ವಿಶ್ವಕಪ್ಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇಲ್ಲ..!
ಇವರಲ್ಲದೆ ಕಳೆದ ಬಾರಿಯ ಒಪ್ಪಂದದಿಂದ ಕೈ ಬಿಡಲಾಗಿದ್ದ, ಶ್ರೇಯಸ್ ಅಯ್ಯರ್ ಅವರನ್ನು ಈ ಬಾರಿ ಸೆಂಟ್ರಲ್ ಕಾಂಟ್ರಾಕ್ಟ್ಗೆ ಪರಿಗಣಿಸಲಿದ್ದಾರೆ ಎಂದು ತಿಳಿದ ಬಂದಿದೆ. ಇನ್ನು ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ ಕೂಡ ಹೊಸ ಕೇಂದ್ರ ಒಪ್ಪಂದದಲ್ಲಿ ಸ್ಥಾನ ಪಡೆಯುವುದು ಖಚಿತ ಎನ್ನಬಹುದು.
Published On - 11:55 am, Wed, 12 March 25