ಭಾರತ ತಂಡದಲ್ಲಿರಬೇಕಾ? ದೇಶೀಯ ಟೂರ್ನಿ ಆಡಲೇಬೇಕು: ಗೌತಮ್ ಗಂಭೀರ್ ಖಡಕ್ ಸೂಚನೆ
India vs Australia: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಭಾರತ ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಈ ಮೂಲಕ ಭಾರತ ತಂಡದಲ್ಲಿರಬೇಕಿದ್ದರೆ, ದೇಶೀಯ ಅಂಗಳದಲ್ಲಿ ಕಣಕ್ಕಿಳಿಯುವುದು ಕಡ್ಡಾಯ ಎಂದು ತಿಳಿಸಿದ್ದಾರೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಭಾರತೀಯ ಆಟಗಾರರಿಗೆ ಖಡಕ್ ಸೂಚನೆ ನೀಡಿದ್ದಾರೆ. ಸಿಡ್ನಿ ಟೆಸ್ಟ್ ಪಂದ್ಯದ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಗಂಭೀರ್, ಟೀಮ್ ಇಂಡಿಯಾ ಆಟಗಾರರು ದೇಶೀಯ ಟೂರ್ನಿ ಆಡಲೇಬೇಕು ಎಂದು ಪುನರುಚ್ಚರಿಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಈ ಬಗ್ಗೆ ಮಾನಾಡಿದ ಗಂಭೀರ್, ಎಲ್ಲರೂ ದೇಶೀಯ ಕ್ರಿಕೆಟ್‌ನಲ್ಲಿ ಆಡಬೇಕೆಂದು ನಾನು ಯಾವಾಗಲೂ ಬಯಸುತ್ತೇನೆ. ನೀವು ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಆಡುವ ಬದ್ದತೆ ಹೊಂದಿದ್ದರೆ, ದೇಶೀಯ ಕ್ರಿಕೆಟ್ ಆಡುತ್ತೀರಿ. ಹೀಗಾಗಿ ಯಾರೆಲ್ಲಾ ಫ್ರೀ ಇರುತ್ತಾರೊ ಅವರು ದೇಶೀಯ ಅಂಗಳದಲ್ಲಿ ರೆಡ್ ಬಾಲ್ ಕ್ರಿಕೆಟ್ ಆಡಬೇಕೆಂದು ಟೀಮ್ ಇಂಡಿಯಾ ಕೋಚ್ ಸೂಚಿಸಿದ್ದಾರೆ.
ಪ್ರಸ್ತುತ ತಂಡದಲ್ಲಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ದೇಶೀಯ ಟೂರ್ನಿ ಆಡಿ ವರ್ಷಗಳೇ ಕಳೆದಿವೆ. ಅದರಲ್ಲೂ ಭಾರತೀಯ ಅಂಗಳದ ರೆಡ್ ಬಾಲ್ ಕ್ರಿಕೆಟ್ ಆಗಿರುವ ರಣಜಿ ಟೂರ್ನಿಯಲ್ಲಿ ಈ ಇಬ್ಬರು ಕಾಣಿಸಿಕೊಳ್ಳುತ್ತಿಲ್ಲ.
ಇತ್ತ ಕಳಪೆ ಫಾರ್ಮ್ನಲ್ಲಿದ್ದರೂ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ರಣಜಿ ಟೂರ್ನಿ ಆಡದಿರುವ ಬಗ್ಗೆ ಹಲವು ಮಾಜಿ ಆಟಗಾರರು ಪ್ರಶ್ನೆಗಳೆನ್ನೆತ್ತಿದ್ದಾರೆ. ಇದೀಗ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಕೂಡ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೆ ದೇಶೀಯ ಟೂರ್ನಿ ಆಡಲೇಬೇಕೆಂದು ಸೂಚಿಸಿದ್ದಾರೆ.
ಈ ಮೂಲಕ ಕಳೆದ ಕೆಲ ವರ್ಷಗಳಿಂದ ದೇಶೀಯ ಟೂರ್ನಿ ಆಡದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಗೌತಮ್ ಗಂಭೀರ್ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಈ ಸಂದೇಶದೊಂದಿಗೆ ದೇಶೀಯ ಟೂರ್ನಿಯಲ್ಲಿ ಕಾಣಿಸಿಕೊಳ್ಳದ ಆಟಗಾರರನ್ನು ಟೆಸ್ಟ್ ತಂಡಕ್ಕೆ ಪರಿಗಣಿಸುವುದಿಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.
ಇದೀಗ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ನೀಡಿರುವ ಸಂದೇಶವನ್ನು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಗಂಭೀರವಾಗಿ ಪರಿಗಣಿಸುತ್ತಾರಾ ಎಂಬುದೇ ಪ್ರಶ್ನೆ. ಏಕೆಂದರೆ ಜನವರಿ 23 ರಿಂದ ರಣಜಿ ಟೂರ್ನಿಯ ದ್ವಿತೀಯಾರ್ಧ ಶುರುವಾಗಲಿದ್ದು, ಈ ಟೂರ್ನಿಯಲ್ಲಿ ರೋಹಿತ್ ಶರ್ಮಾ ಮುಂಬೈಯನ್ನು, ವಿರಾಟ್ ಕೊಹ್ಲಿ ದೆಹಲಿ ತಂಡಗಳನ್ನು ಪ್ರತಿನಿಧಿಸಲಿದ್ದಾರಾ ಕಾದು ನೋಡಬೇಕಿದೆ.
ಇದನ್ನೂ ಓದಿ: WTC Final: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ರೇಸ್ನಿಂದ ಹೊರಬಿದ್ದ ಟೀಮ್ ಇಂಡಿಯಾ
ಆಸ್ಟ್ರೇಲಿಯಾಗೆ ಸರಣಿ ಜಯ:
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ ತಂಡವು 3-1 ಅಂತರದಿಂದ ವಶಪಡಿಸಿಕೊಂಡಿದೆ. ಈ ಸರಣಿಯ ಮೊದಲ ಮ್ಯಾಚ್ನಲ್ಲಿ ಟೀಮ್ ಇಂಡಿಯಾ 295 ರನ್ಗಳ ಜಯ ಸಾಧಿಸಿತ್ತು. ಇದಾದ ಬಳಿಕ ಆಸ್ಟ್ರೇಲಿಯಾ 2ನೇ ಪಂದ್ಯದಲ್ಲಿ 10 ವಿಕೆಟ್ಗಳ ಜಯ, ಮೂರನೇ ಪಂದ್ಯದಲ್ಲಿ ಡ್ರಾ ಮತ್ತು ನಾಲ್ಕನೇ, 5ನೇ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸರಣಿಯನ್ನು ಗೆದ್ದುಕೊಂಡಿದೆ.
Published On - 10:52 am, Sun, 5 January 25