ಐಸಿಸಿ ಟಿ20 ವಿಶ್ವಕಪ್ನ (T20 World Cup) ಅರ್ಹತಾ ಸುತ್ತಿನ ಪಂದ್ಯಗಳು ಮುಕ್ತಾಯಗೊಂಡಿದ್ದು ಇಂದು ಅಧಿಕೃತವಾಗಿ ಟೂರ್ನಿಗೆ ಚಾಲನೆ ಸಿಗಲಿದೆ. ಶನಿವಾರ ನಡೆಯಲಿರುವ ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡ ಮುಖಾಮುಖಿ ಆಗಲಿದೆ. ಅಕ್ಟೋಬರ್ 23 ರಂದು ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (India vs Pakistan) ವಿರುದ್ಧ ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇದಕ್ಕಾಗಿ ಗುರುವಾರವೇ ರೋಹಿತ್ ಪಡೆ ಎಮ್ಸಿಜಿಗೆ ಕಾಲಿಟ್ಟಿದ್ದು ಶುಕ್ರವಾರ ಕೆಲ ಆಟಗಾರರು ಅಭ್ಯಾಸ ನಡೆಸಿದರು. ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಹಾಗೂ ಶಾರ್ದೂಲ್ ಠಾಕೂರ್ ಮೈದಾನದಲ್ಲಿರುವುದು ಕಂಡು ಬಂದರೆ. ವಿರಾಟ್ ಕೊಹ್ಲಿ (Virat Kohli) ಪ್ರ್ಯಾಕ್ಟೀಸ್ನಲ್ಲಿ ಪಾಲ್ಗೊಳ್ಳಲಿಲ್ಲ. ಇಂದು ಎಲ್ಲ ಆಟಗಾರರು ಕಡ್ಡಾಯವಾಗಿ ಅಭ್ಯಾಸ ನಡೆಸಬೇಕಿದೆ. ಇದರ ನಡುವೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದು ಕೆಲ ವಿಚಾರಗಳಲ್ಲಿ ಹಂಚಿಕೊಳ್ಳುವ ಸಾಧ್ಯತೆಯಿದೆ.
ಯಾವುದೇ ಮಹತ್ವದ ಪಂದ್ಯ ನಡೆಯುವ ಮುನ್ನ ಆ ತಂಡದ ನಾಯಕರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ತಂಡದ ಸ್ಥಿತಿ-ಗತಿ ಬಗ್ಗೆ ಕೆಲ ಮಾಹಿತಿಯನ್ನು ಹಂಚಿಕೊಳ್ಳುವುದು ವಾಡಿಕೆ. ಅದರಂತೆ ಇಂದು ಬೆಳಗ್ಗೆ ರೋಹಿತ್ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಖ್ಯವಾಗಿ ಇಲ್ಲಿ ರೋಹಿತ್ ಶರ್ಮಾಗೆ ಪ್ಲೇಯಿಂಗ್ ಇಲೆವೆನ್ ಕುರಿತ ಪ್ರಶ್ನೆಗಳು ಎದುರಾಗಲಿದೆ. ರಿಷಭ್ ಪಂತ್ಗೆ ಸ್ಥಾನ ಇದೆಯೇ?, ಭಾರತದ ಎರಡನೇ ಸ್ಪಿನ್ನರ್ ಯಾರು?, ಮೊಹಮ್ಮದ್ ಶಮಿ ಫುಲ್ ಫಿಟ್ ಆಗಿದ್ದಾರಾ? ಹೀಗೆ ಕೆಲ ಅಗತ್ಯ ಪ್ರಶ್ನೆಗಳಿಗೆ ರೋಹಿತ್ ಉತ್ತರಿಸಲಿದ್ದಾರೆ.
ಪಂತ್ ಔಟ್-ಕಾರ್ತಿಕ್ ಇನ್?:
ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಬಲಿಷ್ಠ ಆಟಗಾರರನ್ನು ಕಣಕ್ಕಿಳಿಸುವ ಯೋಜನೆ ಮಾಡಿರುವ ಕೋಚ್ ಹಾಗು ನಾಯಕ ಹಿರಿಯ, ಕಿರಿಯ ಎಂದು ನೋಡದೆ ಫಾರ್ಮ್ನಲ್ಲಿರುವ ಪ್ಲೇಯರ್ಸ್ಗೆ ಮಣೆ ಹಾಕಲು ಮುಂದಾಗಿದ್ದಾರೆ. ಇದೀಗ ಬಂದಿರುವ ಮಾಹಿತಿಯ ಪ್ರಕಾರ ಪಾಕ್ ವಿರುದ್ಧದ ಪಂದ್ಯದಿಂದ ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್ ಅವರನ್ನು ಹೊರಗಿಡುವ ನಿರ್ಧಾರವನ್ನು ಭಾರತ ತೆಗೆದುಕೊಂಡಿದೆ ಎನ್ನಲಾಗಿದೆ. ಪಂತ್ ಬದಲು ದಿನೇಶ್ ಕಾರ್ತಿಕ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರಂತೆ.
ಟಿ20 ವಿಶ್ವಕಪ್ಗಾಗಿ ಕಾಂಗರೂಗಳ ನಾಡಿಗೆ ಬಂದ ಬಳಿಕ ಭಾರತ ನಾಲ್ಕು ಅಭ್ಯಾಸ ಪಂದ್ಯಗಳ ಪೈಕಿ ಒಟ್ಟು ಮೂರು ಪಂದ್ಯವನ್ನು ಆಡಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧದ ಎರಡೂ ವಾರ್ಮ್-ಅಪ್ ಮ್ಯಾಚ್ನಲ್ಲಿ ಪಂತ್ 9 ರನ್ ಗಳಿಸಿ ಔಟಾಗಿದ್ದರು. ಫಾರ್ಮ್ನಲ್ಲಿ ಇಲ್ಲದ ಪಂತ್ ಅವರನ್ನು ನಂತರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಬೆಂಚ್ ಕಾಯಿಸಲಾಯಿತು. ಇತ್ತ ದಿನೇಶ್ ಕಾರ್ತಿಕ್ ಅಜೇಯ 19, 10 ಹಾಗೂ 20 ರನ್ ಗಳಿಸಿದ್ದಾರೆ. ಹೀಗಾಗಿ ಫಿನಿಶರ್ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಕಾರ್ತಿಕ್ ಆರಂಭದ ಕೆಲವು ಪಂದ್ಯಗಳಲ್ಲಿ ಪಂತ್ ಬದಲು ಆಡಬಹುದು.
ಪಾಕ್ ವಿರುದ್ಧದ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI:
ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತದ ಆಡುವ ಬಳಗ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ ಮತ್ತು ಅಕ್ಷರ್ ಪಟೇಲ್ ತಂಡದಲ್ಲಿ ಇರುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ. ಜೊತೆಗೆ ಯುಜ್ವೇಂದ್ರ ಚಹಲ್, ಅರ್ಶ್ದೀಪ್ ಸಿಂಗ್, ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳಬಹುದು. ಹರ್ಷಲ್ ಪಟೇಲ್ಗೆ ಸ್ಥಾನ ಸಿಗುವುದು ಅನುಮಾನ. ರಿಷಭ್ ಪಂತ್, ದೀಪಕ್ ಹೂಡ, ಹಾಗೂ ಆರ್. ಅಶ್ವಿನ್ ಅವರನ್ನು ಟೂರ್ನಿಯ ಮಧ್ಯದಲ್ಲಿ ಆಡಿಸಬಹುದು. ಆರಂಭದ ಕೆಲ ಪಂದ್ಯಗಳಿಗೆ ಭಾರತದ ಪ್ಲೇಯಿಂಗ್ ಇಲೆವೆನ್ ಈರೀತಿ ಇರಬಹುದು ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯ.
Published On - 8:37 am, Sat, 22 October 22