ಕೆರಿಬಿಯನ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ಭರ್ಜರಿ ಪ್ರದರ್ಶನ ತೋರುತ್ತಿದೆ. ಏಕದಿನ ಸರಣಿಯನ್ನು ಕ್ಲೀನ್ಸ್ವೀಪ್ ಮಾಡಿದ್ದ ಟೀಮ್ ಇಂಡಿಯಾ (Team India) ಇದೀಗ ಟಿ20 ಸರಣಿಯನ್ನು ಕೂಡ ವಶಪಡಿಸಿಕೊಂಡಿದೆ. ಫ್ಲೋರಿಡಾದ ಸೆಂಟ್ರಲ್ ಬ್ರೊವಾರ್ಡ್ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ (India vs West Indies) ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ರೋಹಿತ್ ಪಡೆ 59 ರನ್ಗಳ ಅಮೋಘ ಗೆಲುವು ಕಾಣುವ ಮೂಲಕ 3-1 ಅಂತರದಿಂದ ಸರಣಿ ತನ್ನದಾಗಿಸಿಕೊಂಡಿದೆ. ರಿಷಭ್ ಪಂತ್ ಹಾಗೂ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಒಂದುಕಡೆಯಾದರೆ, ಟೀಮ್ ಇಂಡಿಯಾ ಬೌಲರ್ಗಳು ಮತ್ತೊಮ್ಮೆ ಸಂಘಟಿತ ಪ್ರದರ್ಶನ ತೋರಿದರು. ಮಳೆಯಿಂದಾಗಿ ಪಂದ್ಯ ಕೊಂಚ ತಡವಾಗಿ ಆರಂಭವಾದರೂ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಅದರಲ್ಲೂ ಪಂದ್ಯ ಮುಗಿದ ಬಳಿಕ ಭಾರತದ ನಾಯಕ ರೋಹಿತ್ ಶರ್ಮಾ (Rohit Sharma) ಗೆಲುವನ್ನು ವಿಶೇಷವಾಗಿ ಸಂಭ್ರಮಿಸಿದರು.
ಟೀಮ್ ಇಂಡಿಯಾ ಜಯ ಸಾಧಿಸಿದ ನಂತರ ರೋಹಿತ್ ಶರ್ಮಾ ಭಾರತದ ಅಭಿಮಾನಿಗಳಿದ್ದ ಸ್ಟೇಡಿಯಂ ಕಡೆ ತೆರಳಿದ್ದಾರೆ. ಬ್ಯಾರಿಕೇಡ್ ಹತ್ತಿರಬಂದು ಅಲ್ಲಿದ್ದ ಭಾರತದ ಅಭಿಮಾನಿಗಳ ಕೈ ಮುಟ್ಟುತ್ತಾ ವಿಶೇಷವಾಗಿ ಗೆಲುವನ್ನು ಸಂಭ್ರಮಾಚರಣೆ ಮಾಡಿದ್ದಾರೆ. ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಹಿಟ್ಮ್ಯಾನ್ ನಡೆಗೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿದೆ.
Fans were so eager to give @ImRo45 a high five after @BCCI India’s win over @windiescricket in Florida today that a small crush of fans fell through a barricade in the west side grandstand. They were too happy to be hurt. pic.twitter.com/fLyyZdjM3k
— Peter Della Penna (@PeterDellaPenna) August 6, 2022
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸ್ಫೋಟಕ ಆರಂಭ ಪಡೆದುಕೊಂಡಿತು. ಓಪನರ್ಗಳಾದ ನಾಯಕ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಪವರ್ ಪ್ಲೇಯಲ್ಲಿ ಮನಬಂದಂತೆ ಬ್ಯಾಟ್ ಬೀಸಿದರು. ಎಷ್ಟರ ಮಟ್ಟಿಗೆ ಎಂದರೆ 5 ಓವರ್ಗು ಮುನ್ನವೇ ತಂಡದ ಮೊತ್ತ 50ರ ಗಡಿ ದಾಟಿತು. ಹಿಟ್ಮ್ಯಾನ್ ಕೇವಲ 16 ಎಸೆತಗಳಲ್ಲಿ 2 ಫೋರ್, 3 ಸಿಕ್ಸರ್ ಸಿಡಿಸಿ 33 ರನ್ ಚಚ್ಚಿದರೆ, ಸೂರ್ಯಕುಮಾರ್ 14 ಎಸೆತಗಳಲ್ಲಿ 1 ಫೋರ್, 2 ಸಿಕ್ಸರ್ನೊಂದಿಗೆ 24 ರನ್ ಬಾರಿಸಿದರು.
ದೀಪಕ್ ಹೂಡ 19 ಎಸೆತಗಳಲ್ಲಿ 21 ರನ್ಗಳ ಕಾಣಿಕೆ ನೀಡಿದರು. ರಿಷಭ್ ಪಂತ್ ಕಡೆಯಿಂದ ಒಂದೊಳ್ಳೆ ಇನ್ನಿಂಗ್ಸ್ ಮೂಡಿಬಂತು. 31 ಎಸೆತಗಳಲ್ಲಿ 6 ಫೋರ್ ಬಾರಿಸಿ 30 ರನ್ ಗಳಿಸಿದರು. ಅಕ್ಷರ್ ಪಟೇಲ್ 8 ಎಸೆತಗಳಲ್ಲಿ ಅಜೇಯ 20 ರನ್ ಸಿಡಿಸಿದರು. ಪರಿಣಾಮ ಭಾರತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಕಲೆಹಾಕಿತು. ವಿಂಡೀಸ್ ಪರ ಒಬೆಡ್ ಮೆಕಾಯ್ ಹಾಗೂ ಅಲ್ಜರಿ ಜೋಸೆಫ್ ತಲಾ 2 ವಿಕೆಟ್ ಪಡೆದರು.
ಕಠಿಣ ಟಾರ್ಗೆಟ್ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಈ ಬಾರಿ ಕೂಡ ಭಾರತದ ಸಂಘಟಿತ ಬೌಲಿಂಗ್ ದಾಳಿಗೆ ಕುಸಿಯಿತು. ತಂಡದ ಪರ ನಾಯಕ ನಿಕೋಲಸ್ ಪೂರನ್ ಹಾಗೂ ರೋಮನ್ ಪೋವೆಲ್ ತಲಾ 24 ರನ್ ಗಳಿಸಿದ್ದೇ ಹೆಚ್ಚು. 19.1 ಓವರ್ನಲ್ಲಿ 132 ರನ್ಗೆ ಕೆರಿಬಿಯನ್ನರು ಆಲೌಟ್ ಆದರು. ಭಾರತ ಪರ ಆವೇಶ್ ಖಾನ್ 4 ಓವರ್ಗೆ 17 ರನ್ ನೀಡಿ 2 ವಿಕೆಟ್ ಕಿತ್ತರೆ, ಅರ್ಶ್ದೀಪ್ ಸಿಂಗ್ 3.1 ಓವರ್ನಲ್ಲಿ 12 ನೀಡಿ 3 ವಿಕೆಟ್ ಪಡೆದರು. ಅಕ್ಷರ್ ಪಟೇಲ್ ಹಾಗೂ ರವಿ ಬಿಷ್ಟೋಯ್ ಕೂಡ ತಲಾ 2 ವಿಕೆಟ್ ಬಾಜಿಕೊಂಡರು.
Published On - 9:38 am, Sun, 7 August 22