
ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ರಾಸ್ ಟೇಲರ್ (Ross Taylor) ಮೂರು ವರ್ಷಗಳ ನಂತರ ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದಾರೆ. 2022 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಟೇಲರ್ ಇದೀಗ ತಮ್ಮ 41ನೇ ವಯಸ್ಸಿನಲ್ಲಿ ಹೊಸ ತಂಡದ ಪರ ಆಡುವುದಾಗಿ ಘೋಷಿಸಿದ್ದಾರೆ. 16 ವರ್ಷಗಳ ಕಾಲ ನ್ಯೂಜಿಲೆಂಡ್ ತಂಡದ ಪರ ಆಡಿದ್ದ ಟೇಲರ್ ಇದೀಗ ಸಮೋವಾ ತಂಡದ ಪರ ಆಡುವುದನ್ನು ಕಾಣಬಹುದು. ಸ್ವತಃ ಈ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಟೇಲರ್ ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.
ನಿವೃತ್ತಿ ಹಿಂಪಡೆದಿರುವ ರಾಸ್ ಟೇಲರ್ ಸಮೋವಾ ಕ್ರಿಕೆಟ್ ತಂಡದ ಜೆರ್ಸಿಯೊಂದಿಗೆ ತಮ್ಮ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ‘ಇದು ಅಧಿಕೃತ – ನಾನು ನೀಲಿ ಬಣ್ಣದ ಜೆರ್ಸಿಯನ್ನು ಧರಿಸಿ ಕ್ರಿಕೆಟ್‌ನಲ್ಲಿ ಸಮೋವಾವನ್ನು ಪ್ರತಿನಿಧಿಸುತ್ತೇನೆ ಎಂದು ಘೋಷಿಸಲು ನನಗೆ ಹೆಮ್ಮೆಯಾಗುತ್ತದೆ. ಇದು ನಾನು ಪ್ರೀತಿಸುವ ಕ್ರೀಡೆಗೆ ಮರಳುವುದು ಮಾತ್ರವಲ್ಲ, ನನ್ನ ಪರಂಪರೆ, ಸಂಸ್ಕೃತಿ, ಹಳ್ಳಿಗಳು ಮತ್ತು ಕುಟುಂಬವನ್ನು ಪ್ರತಿನಿಧಿಸುವುದು ನನಗೆ ಸಿಕ್ಕ ದೊಡ್ಡ ಗೌರವವಾಗಿದೆ. ಆಟಕ್ಕೆ ಏನನ್ನಾದರೂ ಮರಳಿ ನೀಡಲು, ತಂಡವನ್ನು ಸೇರಲು ಮತ್ತು ಮೈದಾನದ ಒಳಗೆ ಮತ್ತು ಹೊರಗೆ ನನ್ನ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶಕ್ಕಾಗಿ ನಾನು ಉತ್ಸುಕನಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದ ನ್ಯೂಜಿಲೆಂಡ್ ತಂಡದ ಸದಸ್ಯರಾಗಿದ್ದ ರಾಸ್ ಟೇಲರ್, ಇದೀಗ ಅಕ್ಟೋಬರ್‌ನಲ್ಲಿ ಓಮನ್‌ನಲ್ಲಿ ನಡೆಯಲಿರುವ ವಿಶ್ವಕಪ್ ಏಷ್ಯಾ-ಪೆಸಿಫಿಕ್ ಅರ್ಹತಾ ಸರಣಿಯಲ್ಲಿ ಸಮೋವಾ ತಂಡವನ್ನು ಪ್ರತಿನಿಧಿಸಲಿದ್ದಾರೆ. ಗ್ರೂಪ್-3 ರಲ್ಲಿ ಸ್ಥಾನ ಪಡೆದಿರುವ ಸಮೋವಾ, ಆತಿಥೇಯ ಓಮನ್ ಮತ್ತು ಪಪುವಾ ನ್ಯೂಗಿನಿಯಾ ವಿರುದ್ಧ ಪಂದ್ಯಗಳನ್ನು ಆಡಲಿದೆ.
ಅರ್ಹತಾ ಪಂದ್ಯಾವಳಿಯು ತಲಾ ಮೂರು ತಂಡಗಳ ಮೂರು ಗುಂಪುಗಳನ್ನು ಒಳಗೊಂಡಿದೆ, ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್ ಸಿಕ್ಸ್‌ಗೆ ಮುನ್ನಡೆಯುತ್ತವೆ. ಈ ಪಂದ್ಯಾವಳಿಯು ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಅಗ್ರ ಮೂರು ತಂಡಗಳನ್ನು ನಿರ್ಧರಿಸುತ್ತದೆ.
ವಾಸ್ತವವಾಗಿ 2006 ರಲ್ಲಿ ನ್ಯೂಜಿಲೆಂಡ್ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ರಾಸ್ ಟೇಲರ್ 2022 ರಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಇದರ ನಂತರ ಅವರು ನಿವೃತ್ತಿ ಘೋಷಿಸಿದ್ದರು. ನ್ಯೂಜಿಲೆಂಡ್ ಪರ 112 ಟೆಸ್ಟ್ ಪಂದ್ಯಗಳನ್ನು ಆಡಿರುವ ಟೇಲರ್ 196 ಇನ್ನಿಂಗ್ಸ್‌ಗಳಲ್ಲಿ 44.66 ಸರಾಸರಿಯಲ್ಲಿ 7683 ರನ್ ಗಳಿಸಿದ್ದಾರೆ. ಇದರಲ್ಲಿ 19 ಶತಕಗಳು ಮತ್ತು 35 ಅರ್ಧಶತಕಗಳು ಸೇರಿವೆ. ಇದಲ್ಲದೆ, ಅವರು 236 ಏಕದಿನ ಪಂದ್ಯಗಳಲ್ಲಿ 47.55 ಸರಾಸರಿಯಲ್ಲಿ 8607 ರನ್ ಗಳಿಸಿದ್ದಾರೆ. ಇದರಲ್ಲಿ 21 ಶತಕಗಳು ಮತ್ತು 51 ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:17 pm, Fri, 5 September 25