ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ರಾಯಲ್ ಲಂಡನ್ ಕಪ್ ಏಕದಿನ ಟೂರ್ನಿಯಲ್ಲಿ 19ರ ಯುವ ಬ್ಯಾಟ್ಸ್ಮನ್ ಟಾಮ್ ಪ್ರೆಸ್ಟ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಟೂರ್ನಿಯ ಗ್ರೂಪ್-ಬಿ ನಲ್ಲಿ ನಡೆದ ಪಂದ್ಯದಲ್ಲಿ ಕೆಂಟ್ ಹಾಗೂ ಹ್ಯಾಂಪ್ಶೈರ್ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಕೆಂಟ್ ತಂಡದ ನಾಯಕ ಅಲೆಕ್ಸ್ ಬ್ಲೇಕ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಹ್ಯಾಂಪ್ಶೈರ್ ಪರ ನಾಯಕ ಗುಬ್ಬಿನ್ಸ್ 107 ಎಸೆತಗಳಲ್ಲಿ 117 ರನ್ ಬಾರಿಸುವ ಮೂಲಕ ಭರ್ಜರಿ ಆರಂಭ ಒದಗಿಸಿದ್ದರು.
ಮೊದಲ ವಿಕೆಟ್ ಪತನದ ಬಳಿಕ ಕ್ರೀಸ್ಗೆ ಆಗಮಿಸಿದ 19ರ ಹರೆಯದ ಟಾಮ್ ಪ್ರೆಸ್ಟ್ ಇಡೀ ಪ್ರೇಕ್ಷಕರನ್ನು ದಂಗಾಗಿಸಿದ್ದರು. ಏಕೆಂದರೆ ಅನುಭವಿ ವೇಗಿಗಳನ್ನು ಒಳಗೊಂಡ ಕೆಂಟ್ ತಂಡದ ಬೌಲರ್ಗಳನ್ನು ಟಾಮ್ ಲೀಲಾಜಾಲವಾಗಿ ಎದುರಿಸಿದ್ದರು.
ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳನ್ನು ಸಿಡಿಸಿದ ಟಾಮ್ ಪ್ರೆಸ್ಟ್ ಶತಕ ಪೂರೈಸಿ ಬ್ಯಾಟ್ ಮೇಲೆಕ್ಕೆತ್ತಿದರು.
ಸೆಂಚುರಿ ಬೆನ್ನಲ್ಲೇ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಯುವ ಬ್ಯಾಟ್ಸ್ಮನ್ 150 ರನ್ಗಳ ಗಡಿದಾಟಿದರು. ಅಂತಿಮವಾಗಿ ಪ್ರೆಸ್ಟ್ 138 ಎಸೆತಗಳಲ್ಲಿ 14 ಬೌಂಡರಿ ಹಾಗೂ 7 ಸಿಕ್ಸರ್‌ಗಳ ನೆರವಿನಿಂದ 181 ರನ್ ಸಿಡಿಸಿದರು. ಅಂದರೆ ಸಿಕ್ಸ್-ಫೋರ್ಗಳ ನೆರವನಿಂದ ಕೇವಲ 21 ಎಸೆತಗಳಲ್ಲಿ ಬರೋಬ್ಬರಿ 92 ರನ್ ಚಚ್ಚಿದ್ದರು.
ಈ ಸ್ಪೋಟಕ 181 ರನ್ಗಳೊಂದಿಗೆ ರಾಯಲ್ ಲಂಡನ್ ಕಪ್ನಲ್ಲಿ ಅತ್ಯಧಿಕ ರನ್ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್ಮನ್ ಎಂಬ ವಿಶೇಷ ದಾಖಲೆಯನ್ನು ಟಾಮ್ ಪ್ರೆಸ್ಟ್ ನಿರ್ಮಿಸಿದ್ದಾರೆ. ಇನ್ನು ಪ್ರೆಸ್ಟ್ ಅವರ ಈ ಶತಕದ ನೆರವಿನಿಂದ ಹ್ಯಾಂಪ್ಶೈರ್ ತಂಡವು ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 396 ರನ್ ಕಲೆಹಾಕಿತು.
ಈ ಬೃಹತ್ ಗುರಿಯನ್ನು ಬೆನ್ನತ್ತಿದ ಕೆಂಟ್ ತಂಡದ ಪರ ನಾಯಕ ಅಲೆಕ್ಸ್ ಬ್ಲೇಕ್ (62) ಅರ್ಧಶತಕ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್ಮನ್ಗಳಿಂದ ನಿರೀಕ್ಷಿತ ಆಟ ಮೂಡಿಬಂದಿರಲಿಲ್ಲ. ಪರಿಣಾಮ ಕೆಂಟ್ ತಂಡವು 39.2 ಓವರ್ಗಳಲ್ಲಿ 233 ರನ್ಗಳಿಗೆ ಸರ್ಪಪತನ ಕಂಡಿತು. ಇದರೊಂದಿಗೆ ಹ್ಯಾಂಪ್ಶೈರ್ ತಂಡ ಬರೋಬ್ಬರಿ 163 ರನ್ಗಳ ಭರ್ಜರಿ ಜಯ ಸಾಧಿಸಿತು.