AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AUS vs SA: ಮಳೆಯಿಂದ ಆಟ ಸ್ಥಗಿತ; ಪಂದ್ಯ ರದ್ದಾದರೆ ಯಾವ ತಂಡಕ್ಕೆ ಫೈನಲ್ ಟಿಕೆಟ್?

AUS vs SA, ICC World Cup 2023: ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಹೀಗಾಗಿ ಆಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

AUS vs SA: ಮಳೆಯಿಂದ ಆಟ ಸ್ಥಗಿತ; ಪಂದ್ಯ ರದ್ದಾದರೆ ಯಾವ ತಂಡಕ್ಕೆ ಫೈನಲ್ ಟಿಕೆಟ್?
ಆಸ್ಟ್ರೇಲಿಯಾ- ದಕ್ಷಿಣ ಆಫ್ರಿಕಾ
ಪೃಥ್ವಿಶಂಕರ
|

Updated on:Nov 16, 2023 | 3:50 PM

Share

ಕೋಲ್ಕತ್ತಾದ ಈಡನ್ ಗಾರ್ಡನ್ಸ್ (Eden Gardens in Kolkata) ಮೈದಾನದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ (South Africa vs Australia) ನಡುವಿನ ಎರಡನೇ ಸೆಮಿಫೈನಲ್ ಪಂದ್ಯಕ್ಕೆ ಮಳೆ (Rain) ಅಡ್ಡಿಪಡಿಸಿದೆ. ಹೀಗಾಗಿ ಆಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ರಿಕಾ ನಾಯಕ ತೆಂಬ ಬವುಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆದರೆ ನಾಯಕನ ಆಯ್ಕೆ ತಪ್ಪು ಎಂಬುದು ಆಟ ಆರಂಭವಾದ ಕೆಲವೇ ನಿಮಿಷಗಳಲ್ಲಿ ಬಹಿರಂಗಗೊಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಆಫ್ರಿಕಾ, ಆಸೀಸ್ ಬೌಲರ್​ಗಳ ದಾಳಿಗೆ ತತ್ತರಿಸಿ 14 ಓವರ್​ಗಳಲ್ಲಿ ಕೇವಲ 44 ರನ್ ಕಲೆ ಹಾಕಿ ಬರೋಬ್ಬರಿ 4 ವಿಕೆಟ್ ಕಳೆದುಕೊಂಡಿದೆ. ಈ ವೇಳೆ ಮಳೆ ಬೀಳಲಾರಂಭಿಸಿದ್ದರಿಂದ ಪಂದ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿ, ಪಂದ್ಯ ರದ್ದಾದರೆ ಯಾರು ಫೈನಲ್​ಗೆ ಹೊಗುತ್ತಾರೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಆ ಪ್ರಶ್ನೆಗೆ ಉತ್ತರ ಇಲ್ಲಿದೆ.

ಮೀಸಲು ದಿನ ನಿಗದಿ

ವಾಸ್ತವವಾಗಿ ಮಳೆಯ ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು ಐಸಿಸಿ ಈಗಾಗಲೆ ಸೆಮಿಫೈನಲ್ ಪಂದ್ಯಗಳಿಗೆ ಮೀಸಲು ದಿನವನ್ನು ಇರಿಸಿದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ಯಾವುದೇ ಅಡ್ಡಿ ಇಲ್ಲದೆ ಪೂರ್ಣಗೊಂಡಿತ್ತು. ಆದರೆ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ನಡುವಿನ ಕಾಳಗಕ್ಕೆ ವರುಣನ ಅವಕೃಪೆ ಎದುರಾಗಿದೆ. ಹೀಗಾಗಿ ಇಂದು ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ಮೀಸಲು ದಿನದಂದು ಅಂದರೆ ನಾಳೆ ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ.

ಆಫ್ರಿಕಾ ತಂಡಕ್ಕೆ ಲಾಭ

ಒಂದು ವೇಳೆ ಮೀಸಲು ದಿನದಂದು ಪಂದ್ಯ ಕೊನೆಗೊಳ್ಳದಿದ್ದರೆ ವಿಜೇತರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ? ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಒಂದು ವೇಳೆ ಮಳೆಯಿಂದಾಗಿ ಮೀಸಲು ದಿನವೂ ಪಂದ್ಯ ಪೂರ್ಣಗೊಳದ ಪರಿಸ್ಥಿತಿ ಬಂದರೆ ಅದು ದಕ್ಷಿಣ ಆಫ್ರಿಕಾ ತಂಡಕ್ಕೆ ಲಾಭವಾಗಲಿದೆ. ನಿಯಮಗಳ ಪ್ರಕಾರ, ಮೀಸಲು ದಿನದಂದು ಪಂದ್ಯವನ್ನು ಪೂರ್ಣಗೊಳಿಸದಿದ್ದರೆ, ಪಾಯಿಂಟ್ ಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿರುವ ತಂಡವು ಫೈನಲ್‌ ಆಡುವ ಅವಕಾಶವನ್ನು ಪಡೆಯುತ್ತದೆ. ಹೀಗಾಗಿ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ತಂಡ ಫೈನಲ್ ತಲುಪಲಿದೆ.

ಸಂಕಷ್ಟದಲ್ಲಿ ಆಫ್ರಿಕಾ

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಆಫ್ರಿಕಾ ತಂಡದ ಲೆಕ್ಕಾಚಾರವನ್ನೇ ಆಸೀಸ್ ಬೌಲರ್​ಗಳು ಬುಡಮೇಲು ಮಾಡಿದ್ದಾರೆ. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ತೆಂಬ ಬವುಮಾ ಹಾಗೂ ಕ್ವಿಂಟನ್ ಡಿ ಕಾಕ್ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಇಡೀ ಟೂರ್ನಿಯಲ್ಲಿ ಸತತ ವೈಫಲ್ಯಗಳಿಂದ ಬಳಲುತ್ತಿರುವ ಬವುಮಾ ಈ ಪಂದ್ಯದಲ್ಲೂ ಫ್ಲಾಪ್ ಆದರು. ಬವುಮಾಗೆ ಈ ಪಂದ್ಯದಲ್ಲಿ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.  ಇನ್ನೊಂದೆಡೆ ಟೂರ್ನಿಯಲ್ಲಿ 4 ಶತಕ ಸಿಡಿಸಿ ಅದ್ಭುತ ಫಾರ್ಮ್​ನಲ್ಲಿದ್ದ ಡಿ ಕಾಕ್ ಕೂಡ ಕೇವಲ 3 ರನ್​ಗಳಿಗೆ ಸುಸ್ತಾದರು. ಡುಸೇನ್ 6 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ಆಫ್ರಿಕಾ ತಂಡದ ನಂಬಿಕಸ್ಥ ಬ್ಯಾಟರ್ ಐಡೆನ್ ಮಾರ್ಕ್ರಾಮ್ 10 ರನ್​ಗಳಿಗೆ ಬ್ಯಾಟ್ ಎತ್ತಿಟ್ಟಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:26 pm, Thu, 16 November 23