SA vs NZ: 1931ರ ನಂತರ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ನ್ಯೂಜಿಲೆಂಡ್..!
SA vs NZ: ಇಂದು ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 7 ವಿಕೆಟ್‌ಗಳಿಂದ ಸೋಲಿಸಿ ಸರಣಿ ವಶಪಡಿಸಿಕೊಂಡಿರುವ ನ್ಯೂಜಿಲೆಂಡ್ ತಂಡ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ದಾಖಲೆ ಬರೆದಿದೆ.
ಹ್ಯಾಮಿಲ್ಟನ್ನ ಸೆಡನ್ ಪಾರ್ಕ್ನಲ್ಲಿ (Seddon Park) ನಡೆದ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ (South Africa vs New Zealand) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯವನ್ನು ನ್ಯೂಜಿಲೆಂಡ್ ತಂಡ 7 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಅಲ್ಲದೆ ಈ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಇತಿಹಾಸ ಸೃಷ್ಟಿಸಿರುವ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಸುಮಾರು 100 ವರ್ಷಗಳ ಬರ ನೀಗಿಸಿಕೊಂಡಿದೆ. ಅಂದರೆ ಇದು ಕ್ರಿಕೆಟ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್‌ನ ಮೊದಲ ಟೆಸ್ಟ್ ಸರಣಿ ಜಯವಾಗಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 242 ರನ್ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ತಂಡದ ಪರ ರುವಾನ್ ಡಿ ಸ್ವಾರ್ಡ್ ಅರ್ಧಶತಕ ಸಿಡಿಸಿದನ್ನು ಬಿಟ್ಟರೆ ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಹೊರಬರಲಿಲ್ಲ. ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ 211 ರನ್ಗಳಿಗೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಫ್ರಿಕಾ 235 ರನ್ಗಳಿಗೆ ಆಲೌಟ್ ಆಗುವ ಮೂಲಕ ನ್ಯೂಜಿಲೆಂಡ್ಗೆ 267 ರನ್ ಟಾರ್ಗೆಟ್ ನೀಡಿತು.
ವಿಲಿಯಮ್ಸನ್ ಗೆಲುವಿನ ಶತಕ
ನ್ಯೂಜಿಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಕೇನ್ ವಿಲಿಯಮ್ಸನ್ ತಂಡದ ಎರಡನೇ ಇನ್ನಿಂಗ್ಸ್‌ನಲ್ಲಿ ಗೆಲುವಿನ ಶತಕ ಸಿಡಿಸಿದರು. ಅಜೇಯ 133 ರನ್‌ಗಳ ಇನ್ನಿಂಗ್ಸ್ ಆಡಿದ ಕೇನ್, ನ್ಯೂಜಿಲೆಂಡ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಗೆಲುವಿಗೆ 267 ರನ್‌ಗಳ ಗುರಿ ಪಡೆದ ನ್ಯೂಜಿಲೆಂಡ್ ತಂಡ ಕೇವಲ 3 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಇದರೊಂದಿಗೆ ನ್ಯೂಜಿಲೆಂಡ್ 1931ರ ನಂತರ ಹಾಗೂ 17 ಟೆಸ್ಟ್ ಸರಣಿಗಳಲ್ಲಿ ಸೋತ ಬಳಿಕ ಈ ಗೆಲುವು ಸಾಧಿಸಿದೆ. ಈ 17 ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ತಂಡ 13 ಪಂದ್ಯಗಳಲ್ಲಿ ಸೋತಿದ್ದು, ನಾಲ್ಕು ಪಂದ್ಯಗಳು ಡ್ರಾಗೊಂಡಿವೆ.
ಸಾಥ್ ನೀಡಿದ ವಿಲ್ ಯಂಗ್
ನ್ಯೂಜಿಲೆಂಡ್ ಗೆಲುವಿನಲ್ಲಿ ವಿಲಿಯಮ್ಸನ್ ಹೊರತಾಗಿ ವಿಲ್ ಯಂಗ್ ಕೂಡ ಪ್ರಮುಖ ಪಾತ್ರ ವಹಿಸಿದ್ದರು. ವಿಲಿಯಮ್ಸನ್ ಅವರೊಂದಿಗೆ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಒಟ್ಟು 152 ರನ್‌ಗಳ ಜೊತೆಯಾಟ ನಡೆಸಿದರು. ಅದರಲ್ಲಿ 60 ರನ್‌ಗಳು ಯಂಗ್ ಬ್ಯಾಟ್‌ನಿಂದ ಬಂದವು. ಇಂಜುರಿಯಿಂದ ಚೇತರಿಸಿಕೊಂಡು ಅಖಾಡಕ್ಕಿಳಿದಿರುವ ವಿಲಿಯಮ್ಸನ್ ಸತತ 7 ನೇ ಟೆಸ್ಟ್ ಪಂದ್ಯದಲ್ಲಿ 7 ನೇ ಶತಕ ದಾಖಲಿಸಿದರು. ಇದು ವಿಲಿಯಮ್ಸನ್ ಅವರ ವೃತ್ತಿ ಜೀವನದ 32ನೇ ಶತಕವಾಗಿದೆ. ಮೌಂಟ್ ಮೌಂಗನುಯಿಯಲ್ಲಿ ನಡೆದ ಈ ಸರಣಿಯ ಮೊದಲ ಟೆಸ್ಟ್ ಪಂದ್ಯವದಲ್ಲೂ ವಿಲಿಯಮ್ಸನ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ್ದರು. ಆ ಪಂದ್ಯವನ್ನು ಕಿವೀಸ್ 281 ರನ್‌ಗಳಿಂದ ಗೆದ್ದಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:51 pm, Fri, 16 February 24