ಒಂದೆಡೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ನಡೆಯುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸಹ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಉಭಯ ತಂಡಗಳ ನಡುವೆ ಇಂದಿನಿಂದ ಅಂದರೆ ಡಿಸೆಂಬರ್ 26 ರಿಂದ ಪ್ರಾರಂಭವಾಗಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬೌಲಿಂಗ್ ಆಯ್ದುಕೊಂಡಿದೆ. ಹೀಗಾಗಿ ಟಾಸ್ ಸೋತ ಪಾಕಿಸ್ತಾನ ಮೊದಲ ಇನ್ನಿಂಗ್ಸ್ ಆರಂಭಿಸಿದ್ದು ಇದುವರೆಗೆ ಉಭಯ ತಂಡಗಳಿಂದ ಸಮಬಲದ ಹೋರಾಟ ಕಂಡುಬಂದಿದೆ. ಇದೇ ವೇಳೆ ಆಫ್ರಿಕಾ ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ವೇಗದ ಬೌಲರ್ ಕಾರ್ಬಿನ್ ಬಾಷ್ ತಮ್ಮ ವೃತ್ತಿಜೀವನದ ಮೊದಲ ಎಸೆತದಲ್ಲೇ ವಿಕೆಟ್ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ನಡುವೆ ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಟೆಸ್ಟ್ನಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಪಾಕಿಸ್ತಾನ ತಂಡಕ್ಕೆ ಆರಂಭಿಕರಿಬ್ಬರು ಉತ್ತಮ ಆರಂಭ ಒದಗಿಸಿಕೊಟ್ಟರು. ಹೀಗಾಗಿ ವಿಕೆಟ್ಗಾಗಿ ಹಾತೊರೆಯುತ್ತಿದ್ದ ಆಫ್ರಿಕಾ ನಾಯಕ ಟೆಂಬಾ ಬವುಮಾ ತಂಡದ ಪ್ರಮುಖ ಬೌಲಿಂಗ್ ಅಸ್ತ್ರಗಳಾದ ಕಗಿಸೊ ರಬಾಡ ಮತ್ತು ಅನುಭವಿ ವೇಗಿ ಮಾರ್ಕೊ ಯಾನ್ಸನ್ರನ್ನು ಒಬ್ಬರ ಹಿಂದೆ ಒಬ್ಬರಂತೆ ಬೌಲಿಂಗ್‌ನಲ್ಲಿ ಬಳಸಿದರೂ ಅವರಿಗೆ ವಿಕೆಟ್ ಸಿಗಲಿಲ್ಲ.
ಹೀಗಾಗಿ ದಕ್ಷಿಣ ಆಫ್ರಿಕಾಕ್ಕೆ ಪಂದ್ಯದ ಮೊದಲ ಗಂಟೆಯಲ್ಲಿ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ೀ ವೇಳೆ ಬೌಲಿಂಗ್‌ನಲ್ಲಿ ಬದಲಾವಣೆ ಮಾಡಿದ ಬವುಮಾ ವೇಗಿ ಡ್ಯಾನ್ ಪ್ಯಾಟರ್ಸನ್ ಅವರನ್ನು ಕಣಕ್ಕಿಳಿಸಿದರು. ಆದರೂ ತಂಡಕ್ಕೆ ವಿಕೆಟ್ ಸಿಗಲಿಲ್ಲ. ನಂತರ 15 ನೇ ಓವರ್‌ನಲ್ಲಿ ಮತ್ತೊಮ್ಮೆ ಬೌಲಿಂಗ್‌ನಲ್ಲಿ ಬದಲಾವಣೆ ಮಾಡಿದ ಬವುಮಾ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ವೇಗಿ ಕಾರ್ಬಿನ್ ಬಾಷ್ ಅವರನ್ನು ದಾಳಿಗಿಳಿಸಿದರು. ನಾಯಕನ ಆಣತಿಯಂತೆ ದಾಳಿಗಿಳಿದ ಕಾರ್ಬಿನ್ ಬಾಷ್ ತಾವು ಬೌಲ್ ಮಾಡಿದ ಮೊದಲ ಎಸೆತದಲ್ಲಿಯೇ ಪಾಕ್ ನಾಯಕ ಮಸೂದ್ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಅಮೋಘ ಯಶಸ್ಸು ತಂದುಕೊಟ್ಟರು.
We as a nation can still learn so much from our sportsman. After a difficult morning with countless plays and misses for Rabada, Bosch gets a wicket with his first ball in test cricket and he absolutely steams in to congratulate his new teammate. Special players #SAvPAK pic.twitter.com/GhQ0CLPROG
— ChristoDuPlessis (@ChristoDuPless2) December 26, 2024
ಇದರೊಂದಿಗೆ, ಕಾರ್ಬಿನ್ ಬಾಷ್ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ತಮ್ಮ ಮೊದಲ ಎಸೆತದಲ್ಲಿ ವಿಕೆಟ್ ಪಡೆದ ದಕ್ಷಿಣ ಆಫ್ರಿಕಾದ ಐದನೇ ಬೌಲರ್ ಎನಿಸಿಕೊಂಡರು. ಅವರಿಗಿಂತ ಮೊದಲು, ಬರ್ಟ್ ವೋಗ್ಲರ್ (1906), ಡಾನ್ ಪೀಟ್ (2014), ಹಾರ್ಡಸ್ ವಿಲ್ಹೌನ್ (2016) ಮತ್ತು ತ್ಶೆಪೊ ಮೊರೆಕಿ (2024) ಅವರು ಚೊಚ್ಚಲ ಟೆಸ್ಟ್ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪಡೆದಿದ್ದರು. ಆದರೆ ಬಾಷ್ ಅವರ ಚೊಚ್ಚಲ ವಿಕೆಟ್ ಸಾಧನೆ ಐತಿಹಾಸಿಕವಾಗಿದ್ದು, ದಕ್ಷಿಣ ಆಫ್ರಿಕಾದ 135 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ ವೇಗಿಯೊಬ್ಬ ತಾನು ಬೌಲ್ ಮಾಡಿದ ಮೊದಲ ಎಸೆತದಲ್ಲೇ ವಿಕೆಟ್ ಪಡೆದಿರುವುದು ಇದೇ ಮೊದಲು. ಹೀಗಾಗಿ ಬಾಷ್ ದಕ್ಷಿಣ ಆಫ್ರಿಕಾ ತಂಡದ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಇದಾದ ಬಳಿಕವೂ ತಮ್ಮ ವಿಕೆಟ್ ಬೇಟೆ ಮುಂದುವರೆಸಿರುವ ಬಾಷ್, ಸೌದ್ ಶಕೀಲ್ ಅವರ ವಿಕೆಟ್ ಕೂಡ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ