SA vs SL: ಲಂಕಾ ವಿರುದ್ಧ ಸರಣಿ ಗೆದ್ದು ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಆಫ್ರಿಕಾ
SA vs SL: ಸೇಂಟ್ ಜಾರ್ಜ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾವನ್ನು 109 ರನ್‌ಗಳಿಂದ ಸೋಲಿಸಿದೆ. ಇದರೊಂದಿಗೆ ದಕ್ಷಿಣ ಆಫ್ರಿಕಾ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಹಾಗೆಯೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಪಟ್ಟಿಯಲ್ಲೂ ಆಫ್ರಿಕಾ ಅಗ್ರಸ್ಥಾನಕ್ಕೇರಿದೆ.

ಶ್ರೀಲಂಕಾ ವಿರುದ್ಧ ಸೇಂಟ್ ಜಾರ್ಜ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಬರೋಬ್ಬರಿ 109 ರನ್‌ಗಳಿಂದ ಗೆದ್ದುಕೊಂಡಿರುವ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ಗೆಲುವಿಗೆ 348 ರನ್‌ಗಳ ಗುರಿ ಪಡೆದಿದ್ದ ಶ್ರೀಲಂಕಾ ಐದನೇ ದಿನದಾಟದ ಮೊದಲ ಸೆಷನ್ನಲ್ಲೇ 238 ರನ್ಗಳಿಗೆ ಆಲೌಟ್ ಆಗುವುದರೊಂದಿಗೆ 109 ರನ್‌ಗಳ ಹೀನಾಯ ಸೋಲು ಅನುಭವಿಸಿತು. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಲ್ಲಿ ಭರ್ಜರಿ ಮುಂಬಡ್ತಿ ಪಡೆದಿದ್ದು, ನಿನ್ನೆಯಷ್ಟೇ ಅಗ್ರಸ್ಥಾನಕ್ಕೇರಿದ್ದ ಆಸ್ಟ್ರೇಲಿಯವನ್ನು ಹಿಂದಿಕ್ಕುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್-1 ಸ್ಥಾನವನ್ನು ವಶಪಡಿಸಿಕೊಂಡಿದೆ.
ಗೆಲುವು ತಂದ ಬೌಲರ್ಸ್
ಡಬ್ಲ್ಯುಟಿಸಿ ಫೈನಲ್ ದೃಷ್ಟಿಯಿಂದ ಈ ಪಂದ್ಯದ ಗೆಲುವು ದಕ್ಷಿಣ ಆಫ್ರಿಕಾಕ್ಕೆ ಅತ್ಯಂತ ಮಹತ್ವದ್ದಾಗಿತ್ತು. ಹೀಗಾಗಿ ಗೆಲ್ಲಲೇಬೇಕಾದ ಈ ಪಂದ್ಯದಲ್ಲಿ ಇಡೀ ತಂಡ ಸಾಂಘೀಕ ಪ್ರದರ್ಶನ ನೀಡಿ ಲಂಕಾ ತಂಡವನ್ನು ಮಣಿಸಿತು. ಒಂದು ಹಂತದಲ್ಲಿ 219 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಲಂಕಾ ತಂಡ 19 ರನ್‌ಗಳ ಅಂತರದಲ್ಲಿ ಉಳಿದ 4 ವಿಕೆಟ್ಗಳನ್ನು ಕಳೆದುಕೊಂಡಿತು. ಲಂಕಾದ ಈ ಪೆವಿಲಿಯನ್ ಪರೇಡ್ಗೆ ಮುನ್ನುಡಿ ಬರೆದ ಆಫ್ರಿಕಾ ಸ್ಪಿನ್ನರ್ ಕೇಶವ್ ಮಹಾರಾಜ್ ಅತ್ಯಧಿಕ 5 ವಿಕೆಟ್ ಪಡೆದರೆ, ಕಗಿಸೊ ರಬಾಡ ಮತ್ತು ಡಾನ್ ಪೀಟರ್ಸನ್ ತಲಾ 2 ವಿಕೆಟ್ ಪಡೆದರು. ಮಾರ್ಕೊ ಯಾನ್ಸನ್ ಕೂಡ 1 ವಿಕೆಟ್ ಪಡೆದರು.
ಕೈಹಿಡಿದ ಬ್ಯಾಟಿಂಗ್ ವಿಭಾಗ
ಒಂದೆಡೆ ಬೌಲರ್ಗಳು ಲಂಕಾ ತಂಡವನ್ನು ಗುರಿ ಬೆನ್ನಟ್ಟದಂತೆ ತಡೆದರೆ ಅದಕ್ಕೂ ಮೊದಲು ತಂಡದ ಬ್ಯಾಟಿಂಗ್ ವಿಭಾಗ ಲಂಕಾ ಬೌಲರ್‌ಗಳನ್ನು ಹೈರಾಣಾಗಿಸಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ತೆಂಬಾ ಬಾವುಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ಈ ನಿರ್ಧಾರವನ್ನು ಸಮರ್ಥಿಸಿಕೊಂಡ ರಿಯಾನ್ ರಿಕೆಲ್ಟನ್ ಮತ್ತು ಕೈಲ್ ವೆರೀನ್ ಶತಕ ಬಾರಿಸಿದರೆ, ನಾಯಕ ಬವುಮಾ ಕೂಡ ಅರ್ಧಶತಕ ದಾಖಲಿಸಿದರು. ಈ ಮೂವರ ಇನ್ನಿಂಗ್ಸ್ನ ಆಧಾರದ ಮೇಲೆ ಆಫ್ರಿಕಾ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 358 ರನ್‌ಗಳ ದೊಡ್ಡ ಸ್ಕೋರ್ ಗಳಿಸುವಲ್ಲಿ ಯಶಸ್ವಿಯಾಯಿತು.
ಪಂದ್ಯ ಶ್ರೇಷ್ಠ ಪೀಟರ್ಸನ್
ಇದಕ್ಕೆ ಉತ್ತರವಾಗಿ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 328 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ನಂತರ ಎರಡನೇ ಇನ್ನಿಂಗ್ಸ್‌ನಲ್ಲೂ ಬ್ಯಾಟಿಂಗ್ನಲ್ಲಿ ಅಬ್ಬರಿಸಿದ ದಕ್ಷಿಣ ಆಫ್ರಿಕಾ ತಂಡ ನಾಯಕ ಬವುಮಾ ಮತ್ತು ಏಡೆನ್ ಮಾರ್ಕ್ರಾಮ್ ಅವರ ಅರ್ಧಶತಕಗಳ ನೆರವಿನಿಂದ 317 ರನ್ ಕಲೆಹಾಕಿತು. ಇದರ ಜೊತೆಗೆ ಮೊದಲ ಇನಿಂಗ್ಸ್‌ನಲ್ಲಿ 30 ರನ್‌ಗಳ ಮುನ್ನಡೆಯ ನೆರವಿನಿಂದ ಲಂಕಾ ತಂಡಕ್ಕೆ ಒಟ್ಟು 348 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡವನ್ನು 238 ರನ್‌ಗಳ ಆಲೌಟ್ ಮಾಡುವ ಮೂಲಕ ಆತಿಥೇಯ ತಂಡ ಪಂದ್ಯದೊಂದಿಗೆ ಸರಣಿಯನ್ನೂ ಕೈವಶ ಮಾಡಿಕೊಂಡಿತು. ಇನ್ನು ಆಫ್ರಿಕಾ ಪರ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಹಾಗೂ ಇಡೀ ಪಂದ್ಯದಲ್ಲಿ 7 ವಿಕೆಟ್ ಕಬಳಿಸಿದ ಪೀಟರ್ಸನ್ ಪಂದ್ಯದ ಆಟಗಾರರಾಗಿಯೂ ಆಯ್ಕೆಯಾದರು.
ಅಗ್ರಸ್ಥಾನಕ್ಕೇರಿದ ಆಫ್ರಿಕಾ
ಈ ಗೆಲುವಿನಿಂದ ದಕ್ಷಿಣ ಆಫ್ರಿಕಾ ತಂಡ ಇದೀಗ ಡಬ್ಲ್ಯುಟಿಸಿಯ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಿಂದ ಮೊದಲ ಸ್ಥಾನಕ್ಕೆ ಬಂದಿದೆ. 24 ಗಂಟೆಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ನಂಬರ್-1 ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ಈಗ 10 ಪಂದ್ಯಗಳಲ್ಲಿ 6 ಗೆಲುವು, 3 ಸೋಲು ಮತ್ತು 1 ಡ್ರಾದೊಂದಿಗೆ ಶೇಕಡಾ 63.33 ಅಂಕಗಳನ್ನು ಹೊಂದಿದೆ. ಈಗ ಫೈನಲ್‌ಗೆ ಹೋಗಬೇಕಾದರೆ ಪಾಕಿಸ್ತಾನ ವಿರುದ್ಧದ ಮುಂದಿನ ಎರಡು ಪಂದ್ಯಗಳನ್ನು ಆಫ್ರಿಕಾ ಗೆಲ್ಲಲೇಬೇಕಾಗಿದೆ. ಅದೇ ಸಮಯದಲ್ಲಿ, ಆಸ್ಟ್ರೇಲಿಯಾದ ಗೆಲುವಿನ ಶೇಕಡಾವಾರು 57.69 ರಿಂದ 60.71 ಕ್ಕೆ ಏರಿದ್ದು, ಪ್ರಸ್ತುತ ಎರಡನೇ ಸ್ಥಾನದಲ್ಲಿದೆ. ಭಾರತ ತಂಡ ಶೇ.57.29 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಶೇ.45.45 ಅಂಕಗಳೊಂದಿಗೆ ಶ್ರೀಲಂಕಾ ನಾಲ್ಕನೇ ಸ್ಥಾನದಲ್ಲಿದೆ. ಇತರ ತಂಡಗಳು ಡಬ್ಲ್ಯುಟಿಸಿ ಫೈನಲ್ ರೇಸ್‌ನಿಂದ ಹೊರಗುಳಿದಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:07 pm, Mon, 9 December 24