ಸಚಿನ್ನ ಟೀಕಿಸಿ, ಕಿರುಕುಳ ನೀಡುತ್ತಿದ್ದ ವಿನೋದ್ ಕಾಂಬ್ಳಿ: ಹಳೆಯ ಘಟನೆ ಬಹಿರಂಗ..!
ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಇತ್ತೀಚೆಗೆ ಕೋಚ್ ರಮಾಕಾಂತ್ ಅಚ್ರೇಕರ್ ಅವರ ಸ್ಮಾರಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಬಾಲ್ಯದ ಗೆಳೆಯ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗಿದ್ದರು. ಇದರ ಬೆನ್ನಲ್ಲೇ ಕಾಂಬ್ಳಿ ಹೆಸರು ಮತ್ತೆ ಮುನ್ನಲೆಗೆ ಬಂದಿದೆ.

ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ ಜೊತೆಯಾಗಿ ಕ್ರಿಕೆಟ್ ಆರಂಭಿಸಿದವರು. ಶಾಲಾ ದಿನಗಳಿಂದ ಜೊತೆಯಾಗಿ ಆಡುತ್ತಾ ಬಂದ ಇಬ್ಬರು ಮುಂದೆ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದು ವಿಶೇಷ. ಆದರೆ ಆ ಬಳಿಕ ಒಬ್ಬರು ಮುಗಿಲೆತ್ತರಕ್ಕೇರಿದರೆ, ಮತ್ತೊಬ್ಬರು ಸ್ವಯಂಕೃತ ತಪ್ಪುಗಳಿಂದ ಪಾತಾಳಕ್ಕೆ ಕುಸಿದರು. ಹೀಗೆ ಶಿಸ್ತು, ಕಠಿಣ ಪರಿಶ್ರಮದಿಂದ ಸರ್ವಶ್ರೇಷ್ಠ ಆಟಗಾರ ಎನಿಸಿಕೊಂಡವರು ಸಚಿನ್ ತೆಂಡೂಲ್ಕರ್. ಅತ್ತ ಅಶಿಸ್ತಿನೊಂದಿಗೆ ಮೈಮರೆತವರು ವಿನೋದ್ ಕಾಂಬ್ಳಿ.
ಬಾಲ್ಯದಿಂದಲೂ ಜೊತೆಯಾಗಿ ಆಡಿದ್ದರಿಂದ ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ ಬಾಂಧವ್ಯ ಹೊಂದಿದ್ದರು. ಆದರೆ ಅದು ಕೆಲವೊಮ್ಮೆ ಹದ್ದುಮೀರುತ್ತಿತ್ತು ಎಂಬುದನ್ನು ಇಬ್ಬರ ಜೊತೆ ಆಡಿದ್ದ ಮತ್ತೋರ್ವ ಮುಂಬೈಕರ್ ಸಂಜಯ್ ಮಂಜ್ರೇಕರ್ ಬಹಿರಂಗಪಡಿಸಿದ್ದಾರೆ.
ಸಂಜಯ್ ಮಂಜ್ರೇಕರ್, ಸಚಿನ್ ಮತ್ತು ವಿನೋದ್ ಕಾಂಬ್ಳಿ ಮುಂಬೈ ಮೂಲದವರು. ಈ ಮೂವರೂ ಟೀಮ್ ಇಂಡಿಯಾ ಪರ ಜೊತೆಯಾಗಿ ಆಡಿದ್ದಾರೆ. ಇದೇ ವೇಳೆ ವಿನೋದ್ ಕಾಂಬ್ಳಿ ಸಚಿನ್ ಅವರನ್ನು ಹೇಗೆ ಟಾರ್ಗೆಟ್ ಮಾಡುತ್ತಿದ್ದರು ಎಂಬುದನ್ನು ಸಂಜಯ್ ಮಂಜ್ರೇಕರ್ ತೆರೆದಿಟ್ಟಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಸಂಜಯ್ ಮಂಜ್ರೇಕರ್, ಕಾಂಬ್ಳಿ ಯಾವಾಗಲೂ ಸಚಿನ್ ಬ್ಯಾಟಿಂಗ್ ಬಗ್ಗೆ ಕೊಂಕು ನುಡಿಯುತ್ತಿದ್ದರು. ಅದರಲ್ಲೂ ಸಚಿನ್ ಸ್ಲೋ ಆಡುವುದನ್ನು ಅವರು ಸಹಿಸುತ್ತಿರಲಿಲ್ಲ.
1992ರ ವಿಶ್ವಕಪ್ ವೇಳೆ ನಾನು (ಸಂಜಯ್ ಮಂಜ್ರೇಕರ್), ಸಚಿನ್ ಹಾಗೂ ವಿನೋದ್ ಕಾಂಬ್ಳಿ ತಂಡದಲ್ಲಿದ್ದೆವು. ಈ ವೇಳೆ ಅನುಭವದ ಕೊರತೆಯ ಕಾರಣ ಕಾಂಬ್ಳಿಗೆ ಆಡುವ ಬಳಗದಲ್ಲಿ ಅವಕಾಶ ಸಿಗುತ್ತಿರಲಿಲ್ಲ. ಅತ್ತ ನಾನು ಮತ್ತು ಸಚಿನ್ ಪ್ರತಿ ಪಂದ್ಯಗಳನ್ನು ಆಡುತ್ತಿದ್ದೆವು.
ಆದರೆ ಪ್ರತಿ ಪಂದ್ಯದ ಬಳಿಕ ವಿನೋದ್ ಕಾಂಬ್ಳಿ, ಸಚಿನ್ ತೆಂಡೂಲ್ಕರ್ ಅವರ ಬಳಿ ಬಂದ ಅವರ ಬ್ಯಾಟಿಂಗ್ ಅನ್ನು ಟೀಕಿಸುತ್ತಿದ್ದರು. ಅಲ್ಲದೆ ಇನ್ನೂ ವೇಗವಾಗಿ ಆಡುವಂತೆ ಸಲಹೆ ನೀಡುತ್ತಿದ್ದರು.
ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ, ಸಚಿನ್ ಮತ್ತು ನಾನು ಉತ್ತಮ ಜೊತೆಯಾಟವನ್ನು ಆಡಿದ್ದೆವು. ಸಣ್ಣ ಗುರಿಯಾಗಿದ್ದರಿಂದ ನಾವು ಚೆನ್ನಾಗಿ ಬ್ಯಾಟಿಂಗ್ ಮಾಡಿ ಪಂದ್ಯ ಗೆದ್ದೆವು. ಇದಾಗ್ಯೂ ಅಂದು ಸಂಜೆ ನಮ್ಮ ಬಳಿ ಬಂದ ವಿನೋದ್ ಕಾಂಬ್ಳಿ ಇನ್ನೂ ಬೇಗ ಈ ಪಂದ್ಯವನ್ನು ಗೆಲ್ಲಬಹುದಾಗಿತ್ತು ಎಂದರು.
ಜಾನ್ ಟ್ರೈಕೋಸ್ ಅವರ ಓವರ್ನಲ್ಲಿ ಸಿಕ್ಸ್-ಫೋರ್ಗಳನ್ನು ಬಾರಿಸಬೇಕಿತ್ತು. ನೀನು ತುಂಬಾ ಸ್ಲೋ ಆಡಿದ್ದೀಯಾ ಎಂದು ಸಚಿನ್ ತೆಂಡೂಲ್ಕರ್ ಅವರನ್ನು ಕಾಂಬ್ಳಿ ಟೀಕಿಸಿದರು. ಹೀಗೆ ಪ್ರತಿ ಪಂದ್ಯದ ಬಳಿಕ ಸಚಿನ್ ಬ್ಯಾಟಿಂಗ್ ಬಗ್ಗೆ ಕಾಂಬ್ಳಿ ಕೊಂಕು ನುಡಿಯುತ್ತಿದ್ದರು ಎಂದು ಸಂಜಯ್ ಮಂಜ್ರೇಕರ್ ತಿಳಿಸಿದ್ದಾರೆ.
ಇದಾದ ಬಳಿಕ ಕಾಂಬ್ಳಿ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿದಿದ್ದರು. ಈ ವೇಳೆ ಅವರು ಗಳಿಸಿದ್ದು ಕೇವಲ 3 ರನ್ ಮಾತ್ರ. ಆ ಬಳಿಕ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಅವಕಾಶ ಪಡೆದ ಅವರು 41 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 24 ರನ್ಗಳು ಮಾತ್ರ.
ಆ ಪಂದ್ಯದ ಬಳಿಕ ಇನ್ನೂ ಚೆನ್ನಾಗಿ ಆಡಬಹುದಿತ್ತು. ವೇಗವಾಗಿ ಬ್ಯಾಟಿಂಗ್ ಮಾಡಬಹುದಿತ್ತು ಎನ್ನುವ ಮೂಲಕ ಎನ್ನುವ ಮೂಲಕ ಸಚಿನ್ ತೆಂಡೂಲ್ಕರ್ ಅವರದ್ದೇ ಶೈಲಿಯಲ್ಲಿ ವಿನೋದ್ ಕಾಂಬ್ಳಿಗೆ ಕ್ಲಾಸ್ ತೆಗೆದುಕೊಂಡರು.
ಇದನ್ನೂ ಓದಿ: ಟೀಮ್ ಇಂಡಿಯಾದಿಂದ ರೋಹಿತ್ ಶರ್ಮಾ ಕಿಕ್ ಔಟ್ ಬಹುತೇಕ ಖಚಿತ..!
ನೆಟ್ಸ್ನಲ್ಲಿ ಬಿಗ್ ಸಿಕ್ಸ್ ಬಾರಿಸುವ ನಿನಗೆ ಈಗ ಏನಾಯ್ತು? ಎಂದು ಸಚಿನ್ ತೆಂಡೂಲ್ಕರ್ ಪ್ರಶ್ನಿಸಿದರು. ಈ ವೇಳೆ ಅವರು ಬಿಗಿ ಬೌಲಿಂಗ್ ದಾಳಿ ಸಂಘಟಿಸಿದ್ದರು ಎನ್ನುವ ಮೂಲಕ ಕಾಂಬ್ಳಿ ಜಾರಿಕೊಂಡರು ಎಂದು ಹಳೆಯ ಘಟನೆಯನ್ನು ಸಂಜಯ್ ಮಂಜ್ರೇಕರ್ ಸ್ಮರಿಸಿದ್ದಾರೆ.