SMAT 2024: ಶಮಿ ಸಿಡಿಲಬ್ಬರದ ಬ್ಯಾಟಿಂಗ್‌; ಬಂಗಾಳ ತಂಡಕ್ಕೆ ರೋಚಕ ಜಯ! ವಿಡಿಯೋ ನೋಡಿ

SMAT 2024: ಶಮಿ ಸಿಡಿಲಬ್ಬರದ ಬ್ಯಾಟಿಂಗ್‌; ಬಂಗಾಳ ತಂಡಕ್ಕೆ ರೋಚಕ ಜಯ! ವಿಡಿಯೋ ನೋಡಿ

ಪೃಥ್ವಿಶಂಕರ
|

Updated on: Dec 09, 2024 | 3:37 PM

Mohammed Shami: ಸೈಯದ್ ಮುಷ್ಟಾಕ್ ಅಲಿ ಟ್ರೋಫಿಯಲ್ಲಿ ಬಂಗಾಳ ಪರ ಆಡುತ್ತಿರುವ ಮೊಹಮ್ಮದ್ ಶಮಿ ಅವರು ಚಂಡೀಗಢ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. 17 ಎಸೆತಗಳಲ್ಲಿ 32 ರನ್ ಗಳಿಸಿದ ಅವರು ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದರು. ಬೌಲಿಂಗ್‌ನಲ್ಲಿ 1 ವಿಕೆಟ್ ಪಡೆದರೂ, ಅವರ ಬ್ಯಾಟಿಂಗ್ ಅದ್ಭುತವಾಗಿತ್ತು.

ಇಷ್ಟರಲ್ಲೇ ಆಸ್ಟ್ರೇಲಿಯಾಕ್ಕೆ ಹಾರುವ ತವಕದಲ್ಲಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ, ಕಾಂಗರೂಗಳ ನಾಡಲ್ಲಿ ಟೀಂ ಇಂಡಿಯಾವನ್ನು ಕೂಡಿಕೊಳ್ಳುವ ಮುನ್ನವೇ ದೇಶೀ ಕ್ರಿಕೆಟ್​ನಲ್ಲಿ ಸುನಾಮಿ ಎಬ್ಬಿಸಿದ್ದಾರೆ. ಪ್ರಸ್ತುತ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬಂಗಾಳ ಪರ ಕಣಕ್ಕಿಳಿಯುತ್ತಿರುವ ಶಮಿ ತಮ್ಮ ಅಬ್ಬರದ ಬ್ಯಾಟಿಂಗ್‌ ಮೂಲಕ ಚಂಡೀಗಢ ತಂಡದ ಬೌಲರ್​ಗಳ ಬೆವರಿಳಿಸಿದ್ದಾರೆ. ಈ ಪಂದ್ಯದಲ್ಲಿ ಶಮಿಗೆ ಬೌಲಿಂಗ್‌ನಲ್ಲಿ ಅದ್ಭುತಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಆದರೆ ಅವರು ತಮ್ಮ ತಂಡದ ಪರ ಅದ್ಭುತ ಬ್ಯಾಟಿಂಗ್ ನಡೆಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಶಮಿಯ ಸ್ಫೋಟಕ ಬ್ಯಾಟಿಂಗ್‌

ಈ ಪಂದ್ಯದಲ್ಲಿ 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಮೊಹಮ್ಮದ್ ಶಮಿ ಚಂಡೀಗಢ ವಿರುದ್ಧ ಬಿರುಸಿನ ಇನ್ನಿಂಗ್ಸ್‌ ಆಡಿದರು. ಈ ಪಂದ್ಯದಲ್ಲಿ ಬಂಗಾಳದ ಯಾವುದೇ ಪ್ರಮುಖ ಬ್ಯಾಟ್ಸ್‌ಮನ್‌ಗಳು ದೊಡ್ಡ ಇನ್ನಿಂಗ್ಸ್ ಆಡಲಾಗಲಿಲ್ಲ. ಆದರೆ ಶಮಿ ತಮ್ಮ ಬ್ಯಾಟಿಂಗ್‌ನಿಂದ ಅದ್ಭುತಗಳನ್ನು ಮಾಡಿದರು. ಈ ಪಂದ್ಯದಲ್ಲಿ ಶಮಿ 17 ಎಸೆತಗಳಲ್ಲಿ 32 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದ್ದರು. ಈ ವೇಳೆ ಅವರು 188.23 ರ ಸ್ಟ್ರೈಕ್ ರೇಟ್​ನಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಬಾರಿಸಿದರು. ಶಮಿಯವರ ಈ ಇನ್ನಿಂಗ್ಸ್‌ ಬಂಗಾಳದ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿತು. ಆದಾಗ್ಯೂ ಈ ಪಂದ್ಯದಲ್ಲಿ ಶಮಿ ತಮ್ಮ ಬೌಲಿಂಗ್‌ನಿಂದ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಅವರು ತಮ್ಮ 4 ಓವರ್ ಸ್ಪೆಲ್‌ನಲ್ಲಿ 25 ರನ್ ವ್ಯಯಿಸಿ 1 ವಿಕೆಟ್ ಪಡೆದರು.

ಪಂದ್ಯ ಹೀಗಿತ್ತು

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಂಗಾಳ 9 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಚಂಡೀಗಢ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 156 ರನ್ ಕಲೆಹಾಕಲಷ್ಟೇ ಶಕ್ತವಾಗಿ 3 ರನ್‌ಗಳಿಂದ ಪಂದ್ಯವನ್ನು ಕಳೆದುಕೊಂಡಿತು.

ಶಮಿ ಅವರ ಇತ್ತೀಚಿನ ಪ್ರದರ್ಶನ

ಒಂದು ವರ್ಷ ಕ್ರಿಕೆಟ್‌ನಿಂದ ದೂರವಿದ್ದ ಶಮಿ ಇದೀಗ ದೇಶೀ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದುವರೆಗೆ ಆಡಿದ 8 ಪಂದ್ಯಗಳಲ್ಲಿ 9 ವಿಕೆಟ್ ಪಡೆದಿದ್ದಾರೆ. ಇದಕ್ಕೂ ಮುನ್ನ ರಣಜಿ ಟ್ರೋಫಿಯಲ್ಲಿ ಮಧ್ಯಪ್ರದೇಶ ವಿರುದ್ಧ 7 ವಿಕೆಟ್ ಪಡೆದಿದ್ದರು. ಸದ್ಯ ಅವರು ಭಾರತ ತಂಡಕ್ಕೆ ಮರಳುವ ಭರವಸೆಯಲ್ಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ