ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ SA20 ಲೀಗ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡವು ಫೈನಲ್ಗೆ ಪ್ರವೇಶಿಸಿದೆ. ಕೇಪ್ಟೌನ್ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಡಬರ್ನ್ ಸೂಪರ್ ಜೈಂಟ್ಸ್ ವಿರುದ್ಧ ಟಾಸ್ ಗೆದ್ದ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು.
ಅದರಂತೆ ಇನಿಂಗ್ಸ್ ಆರಂಭಿಸಿದ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡಕ್ಕೆ ಜೋರ್ಡನ್ ಹರ್ಮನ್ ಹಾಗೂ ಡೇವಿಡ್ ಮಲಾನ್ ಉತ್ತಮ ಆರಂಭ ಒದಗಿಸಿದ್ದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ ಮೊದಲ ವಿಕೆಟ್ಗೆ 45 ರನ್ ಕಲೆಹಾಕಿತು. ಈ ಹಂತದಲ್ಲಿ ಹರ್ಮನ್ (21) ಔಟಾದರೆ, ಮತ್ತೊಂದೆಡೆ ಡೇವಿಡ್ ಮಲಾನ್ 45 ಎಸೆತಗಳಲ್ಲಿ 63 ರನ್ ಬಾರಿಸಿ ಮಿಂಚಿದರು.
ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಬೆಲ್ (2) ಬೇಗನೆ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ನಾಯಕ ಐಡೆನ್ ಮಾರ್ಕ್ರಾಮ್ 30 ರನ್ ಬಾರಿಸಿದರು. ಈ ಮೂಲಕ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 157 ರನ್ ಕಲೆಹಾಕಿತು.
158 ರನ್ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ಡರ್ಬನ್ ಸೂಪರ್ ಜೈಂಟ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡ ಯಶಸ್ವಿಯಾಯಿತು. ಪರಿಣಾಮ 13 ರನ್ಗಳಿಸುವಷ್ಟರಲ್ಲಿ 3 ಪ್ರಮುಖ ವಿಕೆಟ್ ಕಳೆದುಕೊಂಡಿತು.
ಇದಾದ ಬಳಿಕ ಕ್ವಿಂಟನ್ ಡಿಕಾಕ್ (20), ವಿಯಾನ್ ಮಲ್ಡರ್ (38)ಹಾಗೂ ಹೆನ್ರಿಕ್ ಕ್ಲಾಸೆನ್ (23) ಒಂದಷ್ಟು ಹೊತ್ತು ಕ್ರೀಸ್ ಕಚ್ಚಿ ನಿಂತರೂ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ಬೌಲರ್ಗಳ ಸಾಂಘಿಕ ಪ್ರದರ್ಶನದಿಂದ ರನ್ಗಳಿಸಲು ಪರದಾಡಿದರು.
ಅಂತಿಮವಾಗಿ 19.3 ಓವರ್ಗಳಲ್ಲಿ 106 ರನ್ಗಳಿಸಿ ಡರ್ಬನ್ ಸೂಪರ್ ಜೈಂಟ್ಸ್ ತಂಡ ಆಲೌಟ್ ಆಗಿದೆ. ಈ ಮೂಲಕ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡವು 51 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಗೆಲುವಿನೊಂದಿಗೆ ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡವು ಸತತವಾಗಿ 2ನೇ ಬಾರಿ ಫೈನಲ್ಗೆ ಪ್ರವೇಶಿಸಿದೆ. ಇದಕ್ಕೂ ಮುನ್ನ 2023 ರಲ್ಲಿ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡ SA20 ಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಸನ್ರೈಸರ್ಸ್ ಈಸ್ಟರ್ನ್ ಕೇಪ್ ಪ್ಲೇಯಿಂಗ್ 11: ಜೋರ್ಡನ್ ಹರ್ಮನ್ , ಡೇವಿಡ್ ಮಲಾನ್ , ಟಾಮ್ ಅಬೆಲ್ , ಐಡೆನ್ ಮಾರ್ಕ್ರಾಮ್ (ನಾಯಕ) ಟ್ರಿಸ್ಟಾನ್ ಸ್ಟಬ್ಸ್ (ವಿಕೆಟ್ ಕೀಪರ್) , ಪ್ಯಾಟ್ರಿಕ್ ಕ್ರುಗರ್ , ಲಿಯಾಮ್ ಡಾಸನ್ , ಮಾರ್ಕೊ ಯಾನ್ಸೆನ್ , ಸೈಮನ್ ಹಾರ್ಮರ್ , ಒಟ್ನಿಯೆಲ್ ಬಾರ್ಟ್ಮನ್ , ಡೇನಿಯಲ್ ವೊರಾಲ್.
ಇದನ್ನೂ ಓದಿ: VPL 2024: ಹೊಸ ಲೀಗ್ನಲ್ಲಿ ಕಣಕ್ಕಿಳಿಯಲಿದ್ದಾರೆ ಸಿಡಿಲಬ್ಬರದ ಸಿಡಿಲಮರಿ ಸೆಹ್ವಾಗ್
ಡರ್ಬನ್ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11: ಮ್ಯಾಥ್ಯೂ ಬ್ರೀಟ್ಝ್ಕ್ , ಟೋನಿ ಡಿ ಝೋರ್ಝಿ , ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) , ಹೆನ್ರಿಕ್ ಕ್ಲಾಸೆನ್ , ಜೆಜೆ ಸ್ಮಟ್ಸ್ , ಡ್ವೈನ್ ಪ್ರಿಟೋರಿಯಸ್ , ವಿಯಾನ್ ಮುಲ್ಡರ್ , ಕೇಶವ್ ಮಹಾರಾಜ್ (ನಾಯಕ) , ರೀಸ್ ಟೋಪ್ಲಿ , ಜೂನಿಯರ್ ಡಾಲಾ , ನವೀನ್-ಉಲ್-ಹಕ್.