Breaking: ಸಾನಿಯಾ ಜೊತೆ ಅರ್ಜುನ್ ತೆಂಡೂಲ್ಕರ್ ನಿಶ್ಚಿತಾರ್ಥ; ಖಾಸಗಿಯಾಗಿ ನಡೆದ ಕಾರ್ಯಕ್ರಮ
Arjun Tendulkar Engagement: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಸಾನಿಯಾ ಚಂದೋಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಖ್ಯಾತ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳಾದ ಸಾನಿಯಾ ಅವರೊಂದಿಗಿನ ಈ ನಿಶ್ಚಿತಾರ್ಥ ಸಮಾರಂಭವು ಆಪ್ತ ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನಡೆದಿದೆ. ಆದಾಗ್ಯೂ ಎರಡೂ ಕುಟುಂಬಗಳು ಇನ್ನೂ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

ಕ್ರಿಕೆಟ್ ಲೋಕದಲ್ಲಿ ಕ್ರಿಕೆಟ್ ದೇವರು ಎಂದೇ ಖ್ಯಾತರಾಗಿರುವ ಟೀಂ ಇಂಡಿಯಾದ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ಅವರು ಸಾನಿಯಾ ಚಂದೋಕ್ (Sania Chandok) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಾನಿಯಾ ಚಂದೋಕ್ ಅವರು ಮುಂಬೈನ ಖ್ಯಾತ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳಾಗಿದ್ದು ಎರಡೂ ಕಡೆಯ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ನೆರವೇರಿದೆ. ಆದಾಗ್ಯೂ ತೆಂಡೂಲ್ಕರ್ ಕುಟುಂಬವಾಗಲಿ ಅಥವಾ ಘಾಯ್ ಕುಟುಂಬವಾಗಲಿ ನಿಶ್ಚಿತಾರ್ಥದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಮುಂಬೈ ತಂಡದಲ್ಲಿ ಅರ್ಜುನ್
ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಕಸರತ್ತು ಮಾಡುತ್ತಿರುವ ಅರ್ಜುನ್ ತೆಂಡೂಲ್ಕರ್ ಇದುವರೆಗೂ ರಣಜಿ ತಂಡವನ್ನು ಬಿಟ್ಟು, ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಇನ್ನು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿರುವ ಅರ್ಜುನ್ಗೆ 2024 ರ ಐಪಿಎಲ್ ಆವೃತ್ತಿಯಲ್ಲಿ ಕೆಲವು ಅವಕಾಶಗಳು ಸಿಕ್ಕಿದ್ದವು. ಆದರೆ ಆ ಅವಕಾಶಗಳಲ್ಲಿ ಅರ್ಜುನ್ ಪ್ರದರ್ಶನ ಹೇಳಿಕೊಳ್ಳುವಂತಿರಲಿಲ್ಲ. ಹೀಗಾಗಿ ಅವರನ್ನು ಮೆಗಾ ಹರಾಜಿಗೂ ಮುನ್ನ ತಂಡದಿಂದ ಬಿಡುಗಡೆ ಮಾಡಲಾಗಿತ್ತು. ಆದಾಗ್ಯೂ ಮೆಗಾ ಹರಾಜಿನಲ್ಲಿ ಅರ್ಜುನ್ರನ್ನು 30 ಲಕ್ಷಕ್ಕೆ ಮತ್ತೆ ತಂಡದಲ್ಲಿ ಸೇರಿಸಿಕೊಳ್ಳುವಲ್ಲಿ ಮುಂಬೈ ಯಶಸ್ವಿಯಾಗಿತ್ತು. ಆದರೆ ಈ ಆವೃತ್ತಿಯಲ್ಲಿ ಅರ್ಜುನ್ಗೆ ಒಂದೇ ಒಂದು ಪಂದ್ಯವನ್ನಾಡುವ ಅವಕಾಶ ಸಿಗಲಿಲ್ಲ.
#ArjunTendulkar, son of former India captain and cricket icon @sachin_rt, has got engaged to #SaaniyaChandok, the granddaughter of prominent Mumbai businessman Ravi Ghai.
The engagement was a private affair, attended by close friends and family from both sides.
Arjun, 25, is a… pic.twitter.com/FW2EKGKGAM
— IndiaToday (@IndiaToday) August 13, 2025
ಅರ್ಜುನ್ ತೆಂಡೂಲ್ಕರ್ ಇದುವರೆಗೆ 17 ಪ್ರಥಮ ದರ್ಜೆ, 18 ಲಿಸ್ಟ್-ಎ ಮತ್ತು 24 ಟಿ20 ಪಂದ್ಯಗಳನ್ನು ಆಡಿದ್ದಾರೆ. ಪ್ರಥಮ ದರ್ಜೆ ಪಂದ್ಯಗಳಲ್ಲಿ, ಅರ್ಜುನ್ 33.51 ಸರಾಸರಿಯಲ್ಲಿ 37 ವಿಕೆಟ್‌ಗಳನ್ನು ಪಡೆದಿದ್ದು, 23.13 ರ ಸರಾಸರಿಯಲ್ಲಿ 532 ರನ್ ಗಳಿಸಿದ್ದಾರೆ. ಲಿಸ್ಟ್-ಎ ಕ್ರಿಕೆಟ್‌ನಲ್ಲಿ, 25 ವಿಕೆಟ್‌ಗಳನ್ನು ಉರುಳಿಸಿರುವ ಅರ್ಜುನ್ 102 ರನ್ ಕಲೆಹಾಕಿದ್ದಾರೆ.
ಅರ್ಜುನ್ ಐಪಿಎಲ್ ದಾಖಲೆ ಹೇಗಿದೆ?
ಟಿ 20 ಕ್ರಿಕೆಟ್‌ನಲ್ಲಿ, 25 ವರ್ಷದ ಅರ್ಜುನ್ ತೆಂಡೂಲ್ಕರ್ 25.07 ರ ಸರಾಸರಿಯಲ್ಲಿ 27 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೆಯೇ 13.22 ರ ಸರಾಸರಿಯಲ್ಲಿ 119 ರನ್ ಕಲೆಹಾಕಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಗೋವಾ ತಂಡದ ಭಾಗವಾಗಿರುವ ಅರ್ಜುನ್ ತೆಂಡೂಲ್ಕರ್ ಇದಕ್ಕೂ ಮೊದಲು ಮುಂಬೈ ಪರ ಆಡುತ್ತಿದ್ದರು. ಅರ್ಜುನ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಪರ 5 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 3 ವಿಕೆಟ್‌ಗಳು ಮತ್ತು 13 ರನ್‌ಗಳನ್ನು ಗಳಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:32 pm, Wed, 13 August 25
