ಪಾಕ್ ತಂಡದಿಂದ ಹೊರಬಿದ್ದ ಬೆನ್ನಲ್ಲೇ ತ್ರಿಶತಕ ಬಾರಿಸಿದ ಸಲ್ಮಾನ್ ಆಘಾ
ಪಾಕಿಸ್ತಾನ ಇಂಗ್ಲೆಂಡ್ ಪ್ರವಾಸದಲ್ಲಿ ಹೀನಾಯ ಪ್ರದರ್ಶನ ನೀಡಿದ ನಂತರ ತಂಡದಿಂದ ಕೈಬಿಟ್ಟಿದ್ದ ಸಲ್ಮಾನ್ ಆಘಾ ದೇಶೀಯ ಪಂದ್ಯಾವಳಿಯಲ್ಲಿ ಭರ್ಜರಿ ತ್ರಿಶತಕ ಬಾರಿಸಿದ್ದಾರೆ. ಅಧ್ಯಕ್ಷರ ಟ್ರೋಫಿ ಪಂದ್ಯದಲ್ಲಿ ಹೈದರಾಬಾದ್ ಕಿಂಗ್ಸ್‌ಮೆನ್ ಪರ ಆಡಿದ ಆಘಾ 300 ರನ್ ಗಳಿಸಿ ಆಯ್ಕೆಗಾರರಿಗೆ ತಿರುಗೇಟು ನೀಡಿದ್ದಾರೆ. ಈ ಅದ್ಭುತ ಪ್ರದರ್ಶನದಿಂದ ಅವರು ಮತ್ತೆ ಪಾಕ್ ರಾಷ್ಟ್ರೀಯ ತಂಡಕ್ಕೆ ಮರಳುವ ನಿರೀಕ್ಷೆಯಿದೆ.

ಪಾಕಿಸ್ತಾನ ತಂಡದ ಇಂಗ್ಲೆಂಡ್ ಪ್ರವಾಸ ಹೇಗೆ ಆರಂಭವಾಯಿತೋ ಅದೇ ರೀತಿ ಕೊನೆಗೊಂಡಿದೆ. ಬಾಬರ್ ಆಝಂ ನಾಯಕತ್ವದ ಪಾಕ್ ತಂಡ ಸರಣಿಯಲ್ಲಿ ಹೀನಾಯ ಪ್ರದರ್ಶನ ನೀಡಿ ಸರಣಿಯಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲಿಲ್ಲ. ಇದರ ಜೊತೆಗೆ ಸರಣಿಯ ನಡುವೆಯೇ ಬರೋಬ್ಬರಿ 7 ಆಟಗಾರರನ್ನು ಇಂಗ್ಲೆಂಡ್ನಿಂದ ವಾಪಸ್ ಪಾಕಿಸ್ತಾನಕ್ಕೆ ಕರೆಸಿಕೊಂಡಿತ್ತು. ಹಾಗೆಯೇ ತನ್ನದೇ ತಂಡದ ಇಬ್ಬರು ಆಟಗಾರರ ಮೇಲೆ ತಂಡದೊಳಗಿನ ಮಾಹಿತಿ ಸೋರಿಕೆ ಆರೋಪವನ್ನು ಹೊರಿಸಿ ಅವರ ವಿರುದ್ಧ ತನಿಖೆ ನಡೆಸುತ್ತಿದೆ. ಇನ್ನು ಇಂಗ್ಲೆಂಡ್ನಿಂದ ಪಾಕಿಸ್ತಾನಕ್ಕೆ ವಾಪಸ್ ಬಂದ ಆ 7 ಆಟಗಾರರ ಪೈಕಿ ತಂಡದ ಮಾಜಿ ನಾಯಕ ಸಲ್ಮಾನ್ ಅಲಿ ಆಘಾ ಕೂಡ ಒಬ್ಬರು. ಇದೀಗ ಅದೇ ಆಘಾ ತ್ರಿಶತಕದ ಇನ್ನಿಂಗ್ಸ್ ಆಡುವ ಮೂಲಕ ಪಾಕ್ ಮಂಡಳಿಗೆ ತಿರುಗೇಟು ನೀಡಿದ್ದಾರೆ.
ತ್ರಿಶತಕ ಬಾರಿಸಿದ ಆಘಾ
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಪ್ರಥಮ ದರ್ಜೆ ಪಂದ್ಯಾವಳಿ ಅಧ್ಯಕ್ಷರ ಟ್ರೋಫಿ, ಸೆಪ್ಟೆಂಬರ್ 12 ರಿಂದ ಪ್ರಾರಂಭವಾಗಿದೆ. ಸಲ್ಮಾನ್ ಆಘಾ, ಶಾಹೀನ್ ಶಾ ಅಫ್ರಿದಿ, ಫಖರ್ ಜಮಾನ್ ಮತ್ತು ಇಫ್ತಿಕರ್ ಅಹ್ಮದ್ ಸೇರಿದಂತೆ ಅನೇಕ ಪ್ರಸಿದ್ಧ ಪಾಕಿಸ್ತಾನ ಆಟಗಾರರು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ. ಸಲ್ಮಾನ್ ಆಘಾ ಹೈದರಾಬಾದ್ ಕಿಂಗ್ಸ್‌ಮೆನ್ ಅಕಾಡೆಮಿ ಪರ ಆಡುತ್ತಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿಯೇ ಅದ್ಭುತ ತ್ರಿಶತಕ ಬಾರಿಸಿದ್ದಾರೆ.
ಮರ್ಖೋಡ್ ಐಟಿ ವಿರುದ್ಧದ ಪಂದ್ಯದ ಮೊದಲ ದಿನದಂದು ಸಲ್ಮಾನ್ ಅಘಾ ಮೊದಲು ಶತಕ ಪೂರೈಸಿದರು. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ 18 ನೇ ದಿನವಾಗಿತ್ತು. ಇನ್ನು ಎರಡನೇ ದಿನವೂ ತನ್ನ ಆಟ ಮುಂದುವರೆಸಿದ ಆಘಾ ದ್ವಿಶತಕ ಪೂರೈಸಿದರು. ಇದು ಸಲ್ಮಾನ್ ಆಘಾ ಯಾವುದೇ ಸ್ವರೂಪದಲ್ಲಿ ಬಾರಿಸಿದ ಮೊದಲ ದ್ವಿಶತಕವಾಗಿತ್ತು. ದ್ವಿಶತಕದ ಬಾರಿಸಿದ ಬೆನ್ನಲ್ಲೇ ಬ್ಯಾಟಿಂಗ್ ಗೇರ್ ಬದಲಿಸಿದ ಆಘಾ 336 ಎಸೆತಗಳಲ್ಲಿ 300 ರನ್ ಚಚ್ಚಿದರು.
ಎರಡಂಕಿ ದಾಟಿದ್ದು ಕೇವಲ ಮೂವರು ಮಾತ್ರ; ಇಂಗ್ಲೆಂಡ್ ವಿರುದ್ಧ ಮತ್ತೆ ಮುಗ್ಗರಿಸಿದ ಪಾಕಿಸ್ತಾನ
ಪಾಕ್ ತಂಡಕ್ಕೆ ಮರಳುತ್ತಾರಾ?
ಸಲ್ಮಾನ್ ಅವರ ಇನ್ನಿಂಗ್ಸ್ ಅವರ ತಂಡಕ್ಕೆ ಅಥವಾ ಅವರಿಗೆ ಎಷ್ಟರ ಮಟ್ಟಿಗೆ ಪ್ರಯೋಜನವನ್ನು ನೀಡುತ್ತದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಆದಾಗ್ಯೂ, ಈ ತ್ರಿಶತಕ ಬಾರಿಸುವ ಮೂಲಕ ಆಘಾ, ಆಯ್ಕೆದಾರರು ಮತ್ತೊಮ್ಮೆ ಅವರತ್ತ ನೋಡುವಂತೆ ಮಾಡಿದ್ದಾರೆ. ಅಲ್ಲದೆ ಈ ತ್ರಿಶತಕ ಆಘಾಗೆ ಅತ್ಯಂತ ಮಹತ್ವದ್ದಾಗಿದೆ, ಏಕೆಂದರೆ ಇಂಗ್ಲೆಂಡ್ ಪ್ರವಾಸದಲಿ ಆಘಾಗೆ ಕೇವಲ ಒಂದು ಟೆಸ್ಟ್ ಪಂದ್ಯವನ್ನು ಆಡುವ ಅವಕಾಶ ಸಿಕ್ಕಿತು. ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ಗೆ ಅವರನ್ನು ನಾಯಕನನ್ನಾಗಿ ನೇಮಿಸಲಾಯಿತು, ಆದರೆ ಬಾಬರ್ ಆಝಂ ತಂಡಕ್ಕೆ ಮರಳಿದ ನಂತರ ಅವರನ್ನು ಮುಂದಿನ ಟೆಸ್ಟ್‌ನಿಂದ ಕೈಬಿಡಲಾಯಿತು. ಅದಾದ ಬಳಿಕ ಮೂರನೇ ಟೆಸ್ಟ್ಗೂ ಮುನ್ನ ಅವರನ್ನು ದೇಶಕ್ಕೆ ವಾಪಸ್ ಕರೆಸಿಕೊಳ್ಳಲಾಗಿತ್ತು.




