1 ರನ್ ಸೋಲು: ಬಿಸಿಸಿಐಗೆ ದೂರು ದಾಖಲು!
ಕ್ರಿಕೆಟ್‌ನಲ್ಲಿ ಏನು ಬೇಕಾದರೂ ನಡೆಯಬಹುದು ಎಂಬ ಮಾತಿಗೆ ತಕ್ಕಂತೆ, ಮಹಿಳಾ U19 ಟಿ20 ಟ್ರೋಫಿಯ ನಾಕೌಟ್ ಪಂದ್ಯದಲ್ಲಿ ಯಾರೂ ಊಹಿಸದ ಇತಿಹಾಸದ ಅಪರೂಪದ ವಿವಾದವೊಂದು ಸೃಷ್ಟಿಯಾಗಿದೆ. ಮೈದಾನದ ಸ್ಕೋರ್‌ಬೋರ್ಡ್ ನೋಡಿ ಪಂದ್ಯ 'ಟೈ' ಆಗಿದೆ ಎಂದು ಜಾರ್ಖಂಡ್ ಆಟಗಾರ್ತಿಯರು ಸಂಭ್ರಮಿಸುತ್ತಿರುವಾಗಲೇ, ಸ್ಕೋರರ್ ಬರೆದ ಒಂದೇ ಒಂದು ತಪ್ಪು ಇಡೀ ಪಂದ್ಯದ ಫಲಿತಾಂಶವನ್ನೇ ಉಲ್ಟಾ ಮಾಡಿದೆ.

ಮೈದಾನದ ಸ್ಕೋರ್‌ಬೋರ್ಡ್‌ನಲ್ಲಿ ಕಂಡಿದ್ದು ಒಂದು ರನ್, ಆದರೆ ಸ್ಕೋರರ್ ಬರೆದಿದ್ದು ಮತ್ತೊಂದು! ಸ್ಕೋರರ್ ಮಾಡಿದ ಒಂದೇ ಒಂದು ಎಡವಟ್ಟಿನಿಂದಾಗಿ ಗೆಲ್ಲಬೇಕಾಗಿದ್ದ ಪಂದ್ಯದಲ್ಲಿ ಜಾರ್ಖಂಡ್ ಮಹಿಳಾ ಕ್ರಿಕೆಟ್ ತಂಡ ಕೇವಲ 1 ರನ್‌ನಿಂದ ಸೋತು ಟೂರ್ನಿಯಿಂದಲೇ ಹೊರಬಿದ್ದಿದೆ. ಮಹಿಳಾ U19 ಟಿ20 ಟ್ರೋಫಿಯಲ್ಲಿ ನಡೆದ ಈ ಭಾರಿ ಗೊಂದಲ ಮತ್ತು ಅನ್ಯಾಯದ ವಿರುದ್ಧ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಈಗ ಬಿಸಿಸಿಐಗೆ ಅಧಿಕೃತ ದೂರು ನೀಡಿದೆ.
ಮೈದಾನದಲ್ಲಿ ನಡೆದಿದ್ದೇನು?
ನಾಗ್ಪುರದ ಲೇಡಿ ಅಮೃತಬಾಯಿ ದಾಗಾ ಕಾಲೇಜು ಮೈದಾನದಲ್ಲಿ ನಡೆದ ಮಹಿಳಾ U19 ಟಿ20 ಟೂರ್ನಿಯ ಎಲೈಟ್ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉತ್ತರಾಖಂಡ್ ಮತ್ತು ಜಾರ್ಖಂಡ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಉತ್ತರಾಖಂಡ್ ನೀಡಿದ್ದ 135 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಜಾರ್ಖಂಡ್ ತಂಡಕ್ಕೆ ಕೊನೆಯ ಓವರ್‌ನಲ್ಲಿ ಹೈ ಡ್ರಾಮಾ ಎದುರಾಯಿತು.
20ನೇ ಓವರ್‌ನ 4ನೇ ಎಸೆತದಲ್ಲಿ ಜಾರ್ಖಂಡ್ ಬ್ಯಾಟರ್ ಲಕ್ಷ್ಮಿ ಕುಮಾರಿ ಎರಡನೇ ರನ್ ಕದಿಯುವಾಗ ರನ್-ಔಟ್ ಆದರು. ಆದರೆ, ರನ್-ಔಟ್ ಆಗುವ ಮುನ್ನ ಬ್ಯಾಟರ್‌ಗಳು ಮೊದಲ ರನ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು ಎಂದು JCA ವಾದಿಸಿದೆ.
ಆದರೆ ಮೈದಾನದಲ್ಲಿದ್ದ ಮ್ಯಾನುಯಲ್ ಸ್ಕೋರ್‌ಬೋರ್ಡ್ ಆಪರೇಟರ್ ಆ ಒಂದು ರನ್ ಅನ್ನು ತಂಡದ ಖಾತೆಗೆ ಸೇರಿಸಿದ್ದರು. ಆದರೆ, ಮುಖ್ಯ ಸ್ಕೋರರ್ ತನ್ನ ಅಧಿಕೃತ ಬುಕ್‌ನಲ್ಲಿ ಕೇವಲ ವಿಕೆಟ್ ಪತನವನ್ನು ದಾಖಲಿಸಿ, ರನ್ ನಮೂದಿಸಿರಲಿಲ್ಲ.
ಒಂದು ರನ್‌ನಿಂದ ಸೋಲು!
ಮೈದಾನದ ಸ್ಕೋರ್‌ಬೋರ್ಡ್‌ನಲ್ಲಿ ರನ್ ಕಾಣಿಸುತ್ತಿದ್ದರಿಂದ, ಜಾರ್ಖಂಡ್ ತಂಡ ತಮಗೆ ಗೆಲ್ಲಲು 2 ರನ್ ಮತ್ತು ಪಂದ್ಯ ಟೈ ಮಾಡಲು 1 ರನ್ ಬೇಕು ಎಂದು ಭಾವಿಸಿ ಕೊನೆಯ ಎಸೆತವನ್ನು ಎದುರಿಸಿತು. ಕೊನೆಯ ಎಸೆತದಲ್ಲಿ 1 ರನ್ ಓಡಿದ ಜಾರ್ಖಂಡ್ ಬ್ಯಾಟರ್ಸ್ ಸಂಭ್ರಮಿಸಿದರು. ಪಂದ್ಯ ‘ಟೈ’ ಆಗಿದ್ದು, ‘ಸೂಪರ್ ಓವರ್’ ನಡೆಯಲಿದೆ ಎಂದು ಅವರು ಭಾವಿಸಿದ್ದರು.
ಆದರೆ, ಅಧಿಕೃತ ಸ್ಕೋರರ್ ಪುಸ್ತಕದ ಪ್ರಕಾರ ಜಾರ್ಖಂಡ್ 133 ರನ್‌ಗಳಿಗೆ ಆಲೌಟ್ ಆಗಿತ್ತು. ಅಂತಿಮವಾಗಿ ಜಾರ್ಖಂಡ್ ಕೇವಲ 1 ರನ್‌ನಿಂದ ಸೋತಿದೆ ಎಂದು ಪ್ರಕಟಿಸಲಾಯಿತು. ನಿಯಮಗಳ ಪ್ರಕಾರ ಅಂಪೈರ್‌ಗಳು ಅಧಿಕೃತ ಸ್ಕೋರರ್ ಪುಸ್ತಕವನ್ನೇ ಮಾನ್ಯ ಮಾಡಬೇಕಾದ್ದರಿಂದ ಜಾರ್ಖಂಡ್ ಟೂರ್ನಿಯಿಂದ ಹೊರಬೀಳಬೇಕಾಯಿತು.
ಇದನ್ನೂ ಓದಿ: ಎಂಬಾಪೆ, ಯಮಾಲ್ನ ಹಿಂದಿಕ್ಕಿ ಬ್ಯಾಲನ್ ಡಿ’ಓರ್ ಗೆದ್ದ ಹ್ಯಾರಿ ಕೇನ್!
ಬಿಸಿಸಿಐಗೆ ಜೆಸಿಎ ಆಗ್ರಹ:
ಪಂದ್ಯ ಮುಗಿದ ತಕ್ಷಣ ಜಾರ್ಖಂಡ್ ಅಧಿಕಾರಿಗಳು ಸ್ಕೋರರ್ ಜೊತೆ ವಾಗ್ವಾದ ನಡೆಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಬಿಸಿಸಿಐಗೆ ದೂರು ನೀಡಿರುವ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ, “ಸ್ಕೋರರ್ ಎಡವಟ್ಟಿನಿಂದ ನಮ್ಮ ಆಟಗಾರ್ತಿಯರು ಗೊಂದಲಕ್ಕೊಳಗಾದರು. ಪಂದ್ಯವು ಅಧಿಕೃತವಾಗಿ ಟೈ ಆಗಿದ್ದು, ಇದರ ಮರುಪರಿಶೀಲನೆ ನಡೆಸಬೇಕು” ಎಂದು ಆಗ್ರಹಿಸಿದೆ. ಈ ಬಗ್ಗೆ ಬಿಸಿಸಿಐ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.




