50 ಓವರ್​ಗಳಲ್ಲಿ 564 ರನ್​: 477 ರನ್​ಗಳ ಅಮೋಘ ಜಯ

Selangor vs Putrajaya: ಮಲೇಷ್ಯಾದ ರಾಜ್ಯ ತಂಡಗಳ ಅಂಡರ್-19 ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಅದು ಕೂಡ ಗರಿಷ್ಠ ಮೊತ್ತದ ದಾಖಲೆಯೊಂದಿಗೆ. ಇದರ ಜೊತೆಗೆ ಏಕದಿನ ಪಂದ್ಯದಲ್ಲಿ ಅತ್ಯಧಿಕ ರನ್​ಗಳ ಅಂತರದಿಂದ ಗೆದ್ದ ಭರ್ಜರಿ ರೆಕಾರ್ಡ್​ ಕೂಡ ನಿರ್ಮಾಣವಾಗಿದೆ.

50 ಓವರ್​ಗಳಲ್ಲಿ 564 ರನ್​: 477 ರನ್​ಗಳ ಅಮೋಘ ಜಯ
ಸಾಂದರ್ಭಿಕ ಚಿತ್ರ

Updated on: Oct 06, 2025 | 11:58 AM

ಏಕದಿನ ಕ್ರಿಕೆಟ್​ನಲ್ಲಿ 500 ರನ್​ಗಳಿಸಲು ಸಾಧ್ಯವೇ? ಸಾಧ್ಯ ಎಂದು ನಿರೂಪಿಸಿದ್ದಾರೆ ಸೆಲಂಗೋರ್ ಅಂಡರ್-19 ತಂಡ. ಮಲೇಷ್ಯಾದ ಅಂಡರ್-19 ಏಕದಿನ ಟೂರ್ನಿಯಲ್ಲಿ ಸೆಲಂಗೋರ್ ಹಾಗೂ ಪುತ್ರಜಯ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೆಲಂಗೋರ್ ತಂಡವು 50 ಓವರ್​ಗಳಲ್ಲಿ ಬರೋಬ್ಬರಿ 564 ರನ್ ಕಲೆಹಾಕಿದ್ದಾರೆ.

ಪಂದ್ಯದ ಮೊದಲ ಓವರ್​ನಿಂದಲೇ ಪುತ್ರಜಯ ತಂಡದ ಬೌಲರ್​ಗಳ ವಿರುದ್ಧ ಸೆಲಂಗೋರ್ ದಾಂಡಿಗರು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅದರಲ್ಲೂ ಮುಖ್ಯವಾಗಿ ಮುಹಮ್ಮದ್ ಅಕ್ರಮ್ ವಿಸ್ಫೋಟಕ ಇನಿಂಗ್ಸ್ ಆಡಿದ್ದರು.

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಅಕ್ರಮ್ ಪುತ್ರಜಯ ಬೌಲರ್​ಗಳ ಬೆಂಡೆತ್ತಿದರು. ಅಲ್ಲದೆ ಕೇವಲ 97 ಎಸೆತಗಳಲ್ಲಿ ಬರೋಬ್ಬರಿ 217 ರನ್​ಗಳ ಇನಿಂಗ್ಸ್ ಆಡಿದರು. ಈ ದ್ವಿಶತಕದ ನೆರವಿನೊಂದಿಗೆ ಸೆಲಂಗೋರ್ ತಂಡವು 50 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 564 ರನ್ ಕಲೆಹಾಕಿತು.

ಮುಹಮ್ಮದ್ ಅಕ್ರಮ್:

477 ರನ್​ಗಳ ಭರ್ಜರಿ ಜಯ:

ಸೆಲಂಗೋರ್ ತಂಡ ನೀಡಿದ 565 ರನ್​ಗಳ ಗುರಿ ಬೆನ್ನತ್ತಿದ ಪುತ್ರಜಯ ತಂಡದ ಬ್ಯಾಟರ್​ಗಳು ರನ್​ಗಳಿಸುವುದಿರಲಿ, ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದರು. ಪರಿಣಾಮ 21.5 ಓವರ್​ಗಳಲ್ಲಿ ಕೇವಲ 87 ರನ್​ಗಳಿಸಿ ಆಲೌಟ್ ಆಯಿತು. ಈ ಮೂಲಕ ಸೆಲಂಗೋರ್ ತಂಡವು ಬರೋಬ್ಬರಿ 477 ರನ್​ಗಳ ಅಮೋಘ ಗೆಲುವು ದಾಖಲಿಸಿದೆ.

ಈ ಗೆಲುವಿನೊಂದಿಗೆ ಸೆಲಂಗೋರ್ ತಂಡವು ಮಲೇಷ್ಯಾ ರಾಜ್ಯ ಅಂಡರ್-19 ಟೂರ್ನಿಯಲ್ಲಿ ಅತ್ಯಧಿಕ ರನ್​ಗಳ ಅಂತರದಿಂದ ಗೆದ್ದ ತಂಡವೆಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದೆ.

ಇದನ್ನೂ ಓದಿ: ೪೦೦ ರನ್ಸ್… ಏಕದಿನ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ವಿಶ್ವ ದಾಖಲೆ

ಹಾಗೆಯೇ ಮಲೇಷ್ಯಾ ಅಂಡರ್-19 ಏಕದಿನ ಟೂರ್ನಿಯಲ್ಲಿ ಅತ್ಯಧಿಕ ರನ್​ ಗಳಿಸಿದ ತಂಡವೆಂಬ ಭರ್ಜರಿ ದಾಖಲೆಯನ್ನು ಸಹ ನಿರ್ಮಿಸಿದೆ.

 

 

Published On - 11:58 am, Mon, 6 October 25