ಒಂದೇ ದಿನ ಒಂದೇ ರೀತಿಯ ಅಪರೂಪದ ದಾಖಲೆ ಬರೆದ ಭಾರತ, ಪಾಕ್ ಆಟಗಾರ್ತಿಯರು
Women's T20 World Cup 2026: 2026ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತದ ಶಫಾಲಿ ವರ್ಮಾ ಮತ್ತು ಪಾಕಿಸ್ತಾನದ ಫಾತಿಮಾ ಸನಾ ಒಂದೇ ದಿನ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಇವರಿಬ್ಬರೂ ಒಂದೇ ಪಂದ್ಯದಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿ, 3 ವಿಕೆಟ್ ಪಡೆದ ಸಾಧನೆ ಮಾಡಿ ವಿಶ್ವದ ನಾಲ್ಕನೇ ಆಟಗಾರ್ತಿಯರಾಗಿದ್ದಾರೆ. ಭಾರತ ನೆದರ್ಲ್ಯಾಂಡ್ಸ್ ವಿರುದ್ಧ ಗೆದ್ದರೆ, ಪಾಕಿಸ್ತಾನ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿದೆ. ಆದರೂ ಇವರಿಬ್ಬರ ಅಮೋಘ ಆಲ್‌ರೌಂಡ್ ಪ್ರದರ್ಶನ ಇತಿಹಾಸ ನಿರ್ಮಿಸಿದೆ.

ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ 2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ (Women’s T20 World Cup 2026) ಭಾರತ ಹಾಗೂ ಪಾಕಿಸ್ತಾನ (India Pakistan) ತಂಡಗಳು ಒಂದೇ ದಿನ ಕಣಕ್ಕಿಳಿದಿದ್ದವು. ಆದರೆ ಈ ಎರಡೂ ತಂಡಗಳು ಬೇರೆ ಬೇರೆ ತಂಡಗಳ ವಿರುದ್ಧ ಪಂದ್ಯಗಳನ್ನಾಡಿದವು. ಮೊದಲಿಗೆ ಟೀಂ ಇಂಡಿಯಾ, ನೆದರ್ಲ್ಯಾಂಡ್ಸ್ ತಂಡವನ್ನು 95 ರನ್ಗಳಿಂದ ಸೋಲಿಸಿ ದಾಖಲೆಯ ಗೆಲುವು ದಾಖಲಿಸಿದರೆ, ಇತ್ತ ಪಾಕಿಸ್ತಾನ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯವಾಗಿ ಸೋಲು ಕಂಡಿತು. ಒಂದೆಡೆ ಭಾರತ ಸತತ ಎರಡು ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಇನ್ನೊಂದೆಡೆ ಪಾಕಿಸ್ತಾನ ಸತತ ಎರಡು ಪಂದ್ಯಗಳನ್ನು ಸೋತು ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿದೆ. ಆದಾಗ್ಯೂ ಭಾರತ ಹಾಗೂ ಪಾಕಿಸ್ತಾನ ತಂಡದ ಇಬ್ಬರು ಆಟಗಾರ್ತಿಯರು ಒಂದೇ ದಿನ ಒಂದೇ ರೀತಿಯ ಪ್ರದರ್ಶನವನ್ನು ನೀಡುವ ಮೂಲಕ ಟಿ20 ವಿಶ್ವಕಪ್‌ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
ಭಾರತದ ಸ್ಟಾರ್ ಓಪನರ್ ಶಫಾಲಿ ವರ್ಮಾ ಮತ್ತು ಪಾಕಿಸ್ತಾನ ತಂಡದ ನಾಯಕಿ ಫಾತಿಮಾ ಸನಾ ತಮ್ಮ ಅತ್ಯುತ್ತಮ ಆಲ್‌ರೌಂಡ್ ಪ್ರದರ್ಶನದೊಂದಿಗೆ ವಿಶ್ವ ಕ್ರಿಕೆಟ್ ದಾಖಲೆ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದಿದ್ದಾರೆ. ಇದುವರೆಗೆ ವಿಶ್ವದ ಕೇವಲ ನಾಲ್ಕು ಮಹಿಳಾ ಆಟಗಾರ್ತಿಯರಿಗೆ ಮಾತ್ರ ಸಾಧ್ಯವಾದ ಅಪರೂಪದ ದಾಖಲೆಯ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.
50+ ರನ್ ಜೊತೆಗೆ 3ವಿಕೆಟ್
ಜೂನ್ 17 ರಂದು ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಭಾರತದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಕೇವಲ 38 ಎಸೆತಗಳಲ್ಲಿ 55 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯುವಲ್ಲಿ ನೆರವಾದರು. ನಂತರ ಬೌಲಿಂಗ್‌ನಲ್ಲೂ ಮ್ಯಾಜಿಕ್ ಮಾಡಿದ ಶಫಾಲಿ ಎದುರಾಳಿ ತಂಡದ 3 ನಿರ್ಣಾಯಕ ವಿಕೆಟ್‌ಗಳನ್ನು ಪಡೆದರು. ಈ ಅದ್ಭುತ ಪ್ರದರ್ಶನದೊಂದಿಗೆ, ಶಫಾಲಿ ವರ್ಮಾ ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಅರ್ಧಶತಕ (50+) ಗಳಿಸಿದ ಮತ್ತು ಕನಿಷ್ಠ 3 ವಿಕೆಟ್‌ಗಳನ್ನು ಪಡೆದ ವಿಶ್ವದ ಮೂರನೇ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದರು. ಅಲ್ಲದೆ ಭಾರತದ ಪರ ಈ ಅಪರೂಪದ ಸಾಧನೆ ಮಾಡಿದ ಮೊದಲ ಮಹಿಳಾ ಕ್ರಿಕೆಟರ್ ಎಂಬ ದಾಖಲೆಯೂ ಶಫಾಲಿ ಪಾಲಾಯಿತು.
ಪಾಕ್ ನಾಯಕಿಯಿಂದಲೂ ಅಮೋಘ ಪ್ರದರ್ಶನ
ಭಾರತದ ಪಂದ್ಯ ಮುಗಿದ ಸ್ವಲ್ಪ ಸಮಯದ ನಂತರ, ಪಾಕಿಸ್ತಾನವು ಅದೇ ದಿನದಂದು ಮತ್ತೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಿತು. ಈ ಪಂದ್ಯದಲ್ಲಿ, ಪಾಕಿಸ್ತಾನದ ಮಹಿಳಾ ನಾಯಕಿ ಫಾತಿಮಾ ಸನಾ ಕೂಡ ಬ್ಯಾಟಿಂಗ್‌ನಲ್ಲಿ 55 ರನ್‌ಗಳ ಇನ್ನಿಂಗ್ಸ್ ಆಡಿ ನಂತರ ಬೌಲಿಂಗ್ನಲ್ಲಿ 3 ವಿಕೆಟ್‌ಗಳನ್ನು ಪಡೆದರು. ಈ ಮೂಲಕ ಫಾತಿಮಾ ಸನಾ ಕೂಡ ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಅರ್ಧಶತಕ (50+) ಗಳಿಸಿದ ಮತ್ತು ಕನಿಷ್ಠ 3 ವಿಕೆಟ್‌ಗಳನ್ನು ಪಡೆದ ವಿಶ್ವದ ನಾಲ್ಕನೇ ಆಟಗಾರ್ತಿ ಎಂಬ ದಾಖಲೆ ಬರೆದರು. ಇದರ ಜೊತೆಗೆ ಈ ಸಾಧನೆ ಮಾಡಿದ ಪಾಕಿಸ್ತಾನದ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
Womens T20 World Cup 2026: ಟಿ20 ವಿಶ್ವಕಪ್‌ನಲ್ಲಿ ದಾಖಲೆ ಬರೆದ ಸ್ಮೃತಿ- ಶಫಾಲಿ ಜೋಡಿ
ಪಟ್ಟಿಯಲ್ಲಿ ಕೇವಲ ನಾಲ್ಕು ಆಟಗಾರ್ತಿಯರು
ಮಹಿಳಾ ಟಿ20 ವಿಶ್ವಕಪ್‌ನ ಸುದೀರ್ಘ ಇತಿಹಾಸದಲ್ಲಿ, ಒಂದೇ ಪಂದ್ಯದಲ್ಲಿ 50 ಕ್ಕೂ ಹೆಚ್ಚು ರನ್ ಗಳಿಸಿ, 3 ವಿಕೆಟ್‌ಗಳನ್ನು ಪಡೆಯುವುದು ಅತ್ಯಂತ ಕಷ್ಟಕರವಾದ ಕೆಲಸ. ಶಫಾಲಿ ವರ್ಮಾ ಮತ್ತು ಫಾತಿಮಾ ಸನಾ ಅವರಿಗೂ ಮೊದಲು, ವಿಶ್ವ ಕ್ರಿಕೆಟ್‌ನಲ್ಲಿ ಇಬ್ಬರು ಮಹಿಳಾ ಆಟಗಾರ್ತಿಯರು ಮಾತ್ರ ಈ ಸಾಧನೆ ಮಾಡಿದ್ದರು. ಅವರಲ್ಲಿ, ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಹೇಲಿ ಮ್ಯಾಥ್ಯೂಸ್ ಮೊದಲ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ್ತಿ ಸನ್ ಲೂಯಿಸ್ ಎರಡನೇ ಸ್ಥಾನದಲ್ಲಿದ್ದಾರೆ. ಈಗ, ಭಾರತದ ಶಫಾಲಿ ಮತ್ತು ಪಾಕಿಸ್ತಾನದ ಫಾತಿಮಾ ಸೇರ್ಪಡೆಯೊಂದಿಗೆ, ಈ ವಿಶೇಷ ಕ್ಲಬ್‌ನ ಸದಸ್ಯರ ಸಂಖ್ಯೆ ನಾಲ್ಕಕ್ಕೆ ಏರಿದೆ. ಏಷ್ಯಾ ಖಂಡದ ಇಬ್ಬರು ಆಟಗಾರ್ತಿಯರೇ ಒಂದೇ ದಿನ ಈ ದಾಖಲೆ ನಿರ್ಮಿಸಿದ್ದಾರೆ ಎಂಬುದು ಗಮನಾರ್ಹ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:26 pm, Thu, 18 June 26




