- TV9 Kannada Kannada News Photos Cricket Photos India Women's T20 WC 2026: Mandhana-Shafali Equal Fastest 50 Record vs Netherlands
Women’s T20 World Cup 2026: ಟಿ20 ವಿಶ್ವಕಪ್‌ನಲ್ಲಿ ದಾಖಲೆ ಬರೆದ ಸ್ಮೃತಿ- ಶಫಾಲಿ ಜೋಡಿ
Women's T20 World Cup 2026: 2026ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ನೆದರ್ಲ್ಯಾಂಡ್ಸ್ ವಿರುದ್ಧ ಭರ್ಜರಿ ಆರಂಭ ಪಡೆದಿದೆ. ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಕೇವಲ 5.1 ಓವರ್‌ಗಳಲ್ಲಿ 50 ರನ್‌ಗಳ ಜೊತೆಯಾಟವಾಡಿ, ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ಪರ ವೇಗದ ಅರ್ಧಶತಕದ ದಾಖಲೆಯನ್ನು ಸರಿಗಟ್ಟಿದರು. ಈ ಮೂಲಕ ಭಾರತ ದೊಡ್ಡ ಮೊತ್ತದತ್ತ ಸಾಗುತ್ತಿದ್ದು, ನೆಟ್ ರನ್ ರೇಟ್ ಸುಧಾರಿಸಲು ಪ್ರಯತ್ನಿಸುತ್ತಿದೆ.
Updated on:Jun 17, 2026 | 7:59 PM

2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಗೆಲುವಿನ ಶುಭಾರಂಭ ಮಾಡಿದೆ. ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಏಕಪಕ್ಷೀಯವಾಗಿ ಮಣಿಸಿದ ಹರ್ಮನ್ಪ್ರೀತ್ ಕೌರ್ ಪಡೆ ಇದೀಗ ತನ್ನ ಎರಡನೇ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲ್ಯಾಂಡ್ಸ್ ಬೌಲಿಂಗ್ ಆಯ್ದುಕೊಂಡಿದ್ದು, ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿದೆ (PC-PTI).

ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ನಡೆಯುತ್ತಿರುವ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ, ಭಾರತದ ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಕೇವಲ 5.1 ಓವರ್‌ಗಳಲ್ಲಿ ತಂಡದ ಸ್ಕೋರ್ ಅನ್ನು 50 ರನ್‌ಗಳ ಗಡಿ ದಾಟಿಸಿದರು. ಈ ಮೂಲಕ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ವೇಗದ ಅರ್ಧಶತಕ ಬಾರಿಸಿದ ದಾಖಲೆಯನ್ನು ಸರಿಗಟ್ಟಿದರು (PC-PTI).

ಆರಂಭಿಕರಾದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಮೊದಲ ಓವರ್‌ನಿಂದಲೇ ಡಚ್ ಬೌಲರ್‌ಗಳ ಮೇಲೆ ದಾಳಿ ನಡೆಸಿದರು. ಅದರಲ್ಲೂ ಐರಿಸ್ ಜ್ವಿಲ್ಲಿಂಗ್ ಮತ್ತು ಇಸಾಬೆಲ್ಲೆ ವೊನ್ನಿಂಗ್ ಎಸೆದ ಓವರ್‌ಗಳಲ್ಲಿ ಶಫಾಲಿ ಮತ್ತು ಸ್ಮೃತಿ ಸತತ ಬೌಂಡರಿಗಳನ್ನು ಕಲೆಹಾಕಿದರು. ಹೀಗಾಗಿ 5 ನೇ ಓವರ್ ಅಂತ್ಯದ ವೇಳೆಗೆ, ಭಾರತ ವಿಕೆಟ್ ಕಳೆದುಕೊಳ್ಳದೆ 48 ರನ್ ಗಳಿಸಿತು. ನಂತರ ಈ ಜೋಡಿ 6 ನೇ ಓವರ್‌ನ ಮೊದಲ ಎಸೆತದಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿತು (PC-PTI).

ಭಾರತ ತಂಡ ಕೇವಲ 5.1 ಓವರ್‌ಗಳಲ್ಲಿ 50 ರನ್‌ಗಳ ಗಡಿ ತಲುಪುವ ಮೂಲಕ ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಜಂಟಿಯಾಗಿ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ದಾಖಲೆ ಬರೆದಿದೆ. ಇದಕ್ಕೂ ಮೊದಲು, 2020 ರ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ 5.1 ಓವರ್‌ಗಳಲ್ಲಿ ಈ ಮೈಲಿಗಲ್ಲು ತಲುಪಿತ್ತು. ಈಗ, 2026 ರ ವಿಶ್ವಕಪ್‌ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಅದೇ ಮ್ಯಾಜಿಕ್ ಅನ್ನು ಪುನರಾವರ್ತಿಸಿ, ಆ ದಾಖಲೆಯನ್ನು ಸರಿಗಟ್ಟಿದೆ (PC-PTI).

ಆರಂಭಿಕರ ಆಕ್ರಮಣಕಾರಿ ಆಟವನ್ನು ನೋಡಿದರೆ, ಈ ಪಂದ್ಯದಲ್ಲಿ ಟೀಂ ಇಂಡಿಯಾ, ನೆದರ್ಲ್ಯಾಂಡ್ಸ್ಗೆ ದೊಡ್ಡ ಗುರಿಯನ್ನು ನೀಡುವುದು ಖಚಿತವಾಗಿದೆ. ಪವರ್‌ಪ್ಲೇನಲ್ಲಿಯೇ ಎದುರಾಳಿಯನ್ನು ಮಾನಸಿಕವಾಗಿ ಹಾನಿಗೊಳಿಸಿದ ಟೀಂ ಇಂಡಿಯಾ, ಈ ಗ್ರೂಪ್-ಎ ಪಂದ್ಯದಲ್ಲಿ ದೊಡ್ಡ ಗೆಲುವು ಸಾಧಿಸುವ ಮೂಲಕ ತನ್ನ ನೆಟ್ ರನ್ ರೇಟ್ ಅನ್ನು ಸುಧಾರಿಸಲು ಪ್ರಯತ್ನಿಸಲಿದೆ (PC-PTI).
Published On - 7:57 pm, Wed, 17 June 26

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



