ಶಾಹೀನ್ ಚಿಕಿತ್ಸೆಗೆ ಪಾಕ್ ಕ್ರಿಕೆಟ್ ಮಂಡಳಿ ನಯಾ ಪೈಸೆ ನೀಡಿಲ್ಲ..! ಮಾವ ಅಫ್ರಿದಿ ಸ್ಫೋಟಕ ಹೇಳಿಕೆ

| Updated By: ಪೃಥ್ವಿಶಂಕರ

Updated on: Sep 16, 2022 | 1:28 PM

ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಹೀನ್ ತನ್ನ ಚಿಕಿತ್ಸೆಗೆ ತಗುಲುತ್ತಿರುವ ಎಲ್ಲಾ ವೆಚ್ಚವನ್ನು ಸ್ವತಃ ಅವನೇ ಭರಿಸುತ್ತಿದ್ದಾನೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಶಾಹೀನ್ ಚಿಕಿತ್ಸೆಗೆ ಪಾಕ್ ಕ್ರಿಕೆಟ್ ಮಂಡಳಿ ನಯಾ ಪೈಸೆ ನೀಡಿಲ್ಲ..! ಮಾವ ಅಫ್ರಿದಿ ಸ್ಫೋಟಕ ಹೇಳಿಕೆ
ಶಾಹಿದ್ ಅಫ್ರಿದಿ- ಶಾಹೀನ್ ಅಫ್ರಿದಿ
Follow us on

ಪಾಕಿಸ್ತಾನ ಕ್ರಿಕೆಟ್ ತಂಡ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ನಡುವಿನ ರಾಜಕೀಯದಿಂದಾಗಿ ನಿರಂತರ ಕಿತ್ತಾಟಗಳು ನಡೆಯುತ್ತಲೆ ಇರುತ್ತವೆ. ಅಷ್ಟು ಸಾಲದೆಂಬಂತೆ ಈಗ ಏಷ್ಯಾಕಪ್‌ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಪಾಕ್ ತಂಡ ಹೀನಾಯವಾಗಿ ಸೋತಾಗಿನಿಂದಲೂ ಎಲ್ಲರೂ ಪಾಕ್ ತಂಡವನ್ನು ಗುರಿಯಾಗಿಸಿದ್ದಾರೆ. ಅದೇ ಸಮಯದಲ್ಲಿ, ಟಿ20 ವಿಶ್ವಕಪ್‌ಗೆ ತಂಡದ ಆಯ್ಕೆಯ ಬಗ್ಗೆ ಪಾಕಿಸ್ತಾನಿ ಮಂಡಳಿಯು ಟೀಕೆಗಳನ್ನು ಎದುರಿಸುತ್ತಿದೆ. ಈ ಎಲ್ಲದರ ನಡುವೆ, ಸ್ಟಾರ್ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ (Shaheen Shah Afridi) ವಿಚಾರದಲ್ಲಿ ಪಾಕ್ ಕ್ರಿಕೆಟ್​ ಮಂಡಳಿ ತೋರಿರುವ ಧೋರಣೆಯಿಂದಾಗಿ ಇಡೀ ಕ್ರಿಕೆಟ್ ಜಗತ್ತಿನಲ್ಲಿ ಪಿಸಿಬಿ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.

ಪಾಕ್ ತಂಡದ ಅತ್ಯುತ್ತಮ ಎಡಗೈ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಪ್ರಸ್ತುತ ಕ್ರಿಕೆಟ್ ಜಗತ್ತಿನ ಅಗ್ರ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅಲ್ಲದೆ ಅಫ್ರಿದಿ ಪಾಕ್ ತಂಡದ ಬೌಲಿಂಗ್‌ ಬೆನ್ನೆಲುಬು ಕೂಡ. ಹೀಗಾಗಿಯೇ ಅವರನ್ನು ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಲಾಗಿದೆ. ಆದರೆ ಈ ಟೂರ್ನಿಗೂ ಮೊದಲು ಶಾಹೀನ್ ಏಷ್ಯಾಕಪ್​ನಲ್ಲಿ ಪಾಕಿಸ್ತಾನ ತಂಡದ ಭಾಗವಾಗಿದ್ದರು. ಆದರೆ ಇಂಜುರಿ ಕಾರಣದಿಂದಾಗಿ ಅವರು ಇಡೀ ಪಂದ್ಯಾವಳಿಯಲ್ಲಿ ಆಡಲು ಸಾಧ್ಯವಾಗಲಿಲ್ಲ.

ಶಾಹೀನ್ ಅವರೇ ಎಲ್ಲ ಖರ್ಚು ಭರಿಸುತ್ತಿದ್ದಾರೆ

ಇಂಜುರಿಯಿಂದಾಗಿ ಶಾಹೀನ್ ಇಡೀ ಟೂರ್ನಿಯಿಂದ ಹೊರಬಿದ್ದಿದ್ದಲ್ಲದೆ ಚಿಕಿತ್ಸೆಗಾಗಿ ಇಂಗ್ಲೆಂಡ್​ಗೆ ಹೋಗಬೇಕಾಯಿತು. ಆದರೆ ಈ ಕ್ರಿಕೆಟಿನ ಚಿಕಿತ್ಸೆ ವಿಚಾರದಲ್ಲಿ ಪಿಸಿಬಿ ತೋರುತ್ತಿರುವ ನಿರ್ಲಕ್ಷ್ಯತನ ಈಗಾಗಲೇ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಪಾಕಿಸ್ತಾನಿ ವಾಹಿನಿಯೊಂದರ ಜತೆಗಿನ ಸಂವಾದದ ವೇಳೆ ಮಾತನಾಡಿದ ಶಾಹೀನ್ ಅವರ ಸೋದರ ಮಾವ ಹಾಗೂ ಪಾಕ್ ತಂಡದ ಮಾಜಿ ಆಟಗಾರ ಶಾಹಿದ್ ಅಫ್ರಿದಿ, ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಹೀನ್ ತನ್ನ ಚಿಕಿತ್ಸೆಗೆ ತಗುಲುತ್ತಿರುವ ಎಲ್ಲಾ ವೆಚ್ಚವನ್ನು ಸ್ವತಃ ಅವನೇ ಭರಿಸುತ್ತಿದ್ದಾನೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮುಂದುವರೆದು ಮಾತನಾಡಿದ ಶಾಹಿದ್, ಈಗ ನೀವೇ ನೋಡಿ ಶಾಹೀನ್ ಅಂತಹ ಆಟಗಾರ ಪಾಕ್ ತಂಡದಲ್ಲಿ ಬೇರ್ಯಾರಾದರೂ ಇದ್ದಾರ? ಆದರೆ ಅಂತಹ ಆಟಗಾರನ ವಿಚಾರದಲ್ಲಿ ಪಾಕ್ ಮಂಡಳಿ ತೋರಿರುವ ಧೋರಣೆ ಸಹಿಸಲಾಗದು. ಈಗ ಈ ಹುಡುಗ (ಶಾಹೀನ್) ಸ್ವತಃ ಆತನೇ ತನ್ನ ಖರ್ಚಿನಲ್ಲಿ ಇಂಗ್ಲೆಂಡ್‌ಗೆ ಹೋಗಿದ್ದಾನೆ. ಜೊತೆಗೆ ಚಿಕಿತ್ಸೆಗಾಗಿ ತನ್ನ ಹಣವನ್ನೇ ವ್ಯಯಿಸುತ್ತಿದ್ದಾನೆ. ಇಲ್ಲಿಂದ ನಾನು ಅವನ ಚಿಕಿತ್ಸೆಗೆ ವೈದ್ಯರನ್ನು ವ್ಯವಸ್ಥೆಗೊಳಿಸಿದೆ. ಹೀಗಾಗಿ ಆತನ ವಿಚಾರದಲ್ಲಿ ಪಿಸಿಬಿ ಯಾವುದೇ ರೀತಿಯ ಸಹಾಯ ಮಾಡುತ್ತಿಲ್ಲ ಎಂದಿದ್ದಾರೆ.

ಒಂದೂವರೆ ತಿಂಗಳ ನಂತರ ನಿರ್ಧಾರ

22 ವರ್ಷದ ಶಾಹೀನ್ ಅಫ್ರಿದಿ ಕಳೆದ ಮೂರು ವರ್ಷಗಳಲ್ಲಿ ಪಾಕಿಸ್ತಾನದ ಬೌಲಿಂಗ್‌ನ ಬೆನ್ನೇಲುಬಾಗಿ ಹೊರಹೊಮ್ಮಿದ್ದಾರೆ. ಜುಲೈನಲ್ಲಿ ಶ್ರೀಲಂಕಾ ಪ್ರವಾಸದಲ್ಲಿ ಮೊದಲ ಟೆಸ್ಟ್ ಪಂದ್ಯದ ವೇಳೆ ಅವರು ಫೀಲ್ಡಿಂಗ್ ಮಾಡುವಾಗ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದರು. ನಂತರ ಎರಡನೇ ಟೆಸ್ಟ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಅದೇ ಸಮಯದಲ್ಲಿ ಶಾಹೀನ್ ಅನ್ನು ಪರಿಣಿತ ವೈದ್ಯರಿಗೆ ತೋರಿಸುವ ಬದಲು, ಪಿಸಿಬಿ ಅವರನ್ನು ನೆದರ್ಲ್ಯಾಂಡ್ಸ್ ಪ್ರವಾಸದ ODI ಸರಣಿಗೆ ಮತ್ತು ನಂತರ ಏಷ್ಯಾಕಪ್‌ಗೆ ಆಯ್ಕೆ ಮಾಡಿತು.

ಏತನ್ಮಧ್ಯೆ, ಅವರು ಪಂದ್ಯಾವಳಿಗೆ ಫಿಟ್ ಇಲ್ಲ ಎಂಬುದು ಕಂಡುಬಂದಾಗ, ಅವರ ಹೆಸರನ್ನು ಏಷ್ಯಾಕಪ್‌ನಿಂದ ಹಿಂತೆಗೆದುಕೊಳ್ಳಲಾಯಿತು. ಇದಾದ ಬಳಿಕವೂ ಶಾಹೀನ್ ತಂಡದೊಂದಿಗೆ ಏಷ್ಯಾಕಪ್​ಗಾಗಿ ಯುಎಇಗೆ ತೆರಳಿ ಅಲ್ಲಿ ಅಭ್ಯಾಸ ನಡೆಸುತ್ತಿದ್ದರು. ಆದರೆ ಇಂಜುರಿಯಿಂದ ಶಾಹೀನ್ ಹೊರಬರಲಾಗಲಿಲ್ಲ. ಹೀಗಾಗಿ ಗಾಯಗೊಂಡ ಸುಮಾರು ಒಂದೂವರೆ ತಿಂಗಳ ನಂತರ, ಶಾಹೀನ್ ಅಂತಿಮವಾಗಿ ತಜ್ಞ ವೈದ್ಯರೊಂದಿಗೆ ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ್ದಾರೆ.