
T20 World Cup 2026: ಟಿ20 ವಿಶ್ವಕಪ್ನಲ್ಲಿನ ಕಳಪೆ ಪ್ರದರ್ಶನಕ್ಕೆ ಪಾಕಿಸ್ತಾನ್ ಆಟಗಾರರಿಗೆ ಬಿಸಿ ಮುಟ್ಟಿಸಲು ಪಾಕ್ ಕ್ರಿಕೆಟ್ ಮಂಡಳಿ ಮುಂದಾಗಿದೆ. ಅದರ ಮೊದಲ ಹೆಜ್ಜೆಯಾಗಿ ಪಾಕಿಸ್ತಾನ್ ಆಟಗಾರರಿಗೆ 50 ಲಕ್ಷ ರೂ. (PKR) ದಂಡ ವಿಧಿಸಲು ಮುಂದಾಗಿದೆ. ಈ ದಂಡದ ಸುದ್ದಿ ಬೆನ್ನಲ್ಲೇ ಮಾಜಿ ನಾಯಕ ಶಾಹಿದ್ ಅಫ್ರಿದಿ ಹಿರಿಯ ಆಟಗಾರರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕಳಪೆ ಪ್ರದರ್ಶನ ನೀಡುತ್ತಿರುವ ಆಟಗಾರರನ್ನು ಕನಿಷ್ಠ ಎರಡು ವರ್ಷಗಳ ಕಾಲ ತಂಡದಿಂದ ಬ್ಯಾನ್ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬಾಬರ್ ಆಝಂ, ಶಾಹೀನ್ ಅಫ್ರಿದಿ ಮತ್ತು ಶಾದಾಬ್ ಖಾನ್ ಅವರಂತಹ ಪ್ರಮುಖ ಆಟಗಾರರನ್ನು ತಂಡದಿಂದ ಕೈಬಿಟ್ಟು, ಅವರಿಗೆ “ರಿಯಾಲಿಟಿ ಚೆಕ್” ನೀಡಬೇಕು ಎಂದು ಅಫ್ರಿದಿ ಹೇಳಿದ್ದಾರೆ. ತಂಡದ ಹಿರಿಯ ಆಟಗಾರರು ಹಾಗೂ ಅನುಭವಿಗಳೆಂದು ಗುರುತಿಸಿಕೊಂಡಿರುವ ಇವರಿಂದ ಯಾವುದೇ ಪ್ರದರ್ಶನ ಮೂಡಿಬರುತ್ತಿಲ್ಲ. ಹೀಗಾಗಿ ಇವರೆಲ್ಲನ್ನೆಲ್ಲಾ ತಂಡದಿಂದ ಹೊರಗಿಡಬೇಕೆಂದು ಅಫ್ರಿದಿ ಆಗ್ರಹಿಸಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚದ ಆಟಗಾರರನ್ನು ತಂಡದಿಂದ ವಜಾಗೊಳಿಸಿ, ಅವರು ಮತ್ತೆ ದೇಶೀಯ ಕ್ರಿಕೆಟ್ ಆಡಿ ಫಾರ್ಮ್ ಕಂಡುಕೊಳ್ಳುವಂತೆ ಮಾಡಬೇಕು ಎಂದು ಅಫ್ರಿದಿ ಆಗ್ರಹಿಸಿದ್ದಾರೆ. ಕೆಲ ಆಟಗಾರರು ವರ್ಷದಿಂದ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಇದಾಗ್ಯೂ ಅವರನ್ನು ತಂಡದಿಂದ ಕೈ ಬಿಡುತ್ತಿಲ್ಲ. ಅಂತಹ ಆಟಗಾರರನ್ನು ಕೂಡ ತಂಡದಿಂದ ಕೈ ಬಿಟ್ಟು ಪ್ರಥಮ ದರ್ಜೆ ಕ್ರಿಕೆಟ್ ಆಡುವಂತೆ ಸೂಚಿಸಬೇಕು ಎಂದು ಶಾಹಿದ್ ಅಫ್ರಿದಿ ಹೇಳಿದ್ದಾರೆ.
ಹಿರಿಯರನ್ನು ಬೆಂಚ್ ಮೇಲೆ ಕೂರಿಸಿ, ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ನಿರ್ಭೀತ ಯುವ ಆಟಗಾರರಿಗೆ ಇನ್ಮುಂದೆ ಹೆಚ್ಚಿನ ಅವಕಾಶ ನೀಡಬೇಕು. ಈ ಮೂಲಕ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಹೊಸ ತಂಡವನ್ನು ಕಟ್ಟುವ ಕಾಯಕಕ್ಕೆ ಕೈ ಹಾಕಬೇಕೆಂದು ಅಫ್ರಿದಿ ಸಲಹೆ ನೀಡಿದ್ದಾರೆ.
ಅಷ್ಟೇ ಅಲ್ಲದೆ ಪಾಕ್ ತಂಡದಲ್ಲಿರುವ ಅನುಭವಿ ಹಾಗೂ ಆಕ್ರಮಣಕಾರಿ ಆಟಗಾರ ಫಖರ್ ಝಮಾನ್ಗೆ ಟಿ20 ನಾಯಕತ್ವ ನೀಡಬೇಕು. ಈ ಮೂಲಕ ಹೊಸ ಪಡೆಯನ್ನು ರೂಪಿಸಲು ಇದು ಸಕಾಲ ಎಂದು ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.
ಆಟಗಾರರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಎರಡು ವರ್ಷಗಳ ಕಾಲ ಬ್ಯಾನ್ ಮಾಡಬೇಕೆಂದು ಆಗ್ರಹಿಸಿರುವ ಶಾಹಿದ್ ಅಫ್ರಿದಿ, ಪಿಸಿಬಿ ಆಟಗಾರರಿಗೆ ವಿಧಿಸಿರುವ 50 ಲಕ್ಷ ರೂ.ಗಳ ದಂಡವು ಅತ್ಯಂತ “ಸಣ್ಣತನದ ನಿರ್ಧಾರ” ಎಂದು ಟೀಕಿಸಿದ್ದಾರೆ. ಅಲ್ಲದೆ ಹಣಕಾಸಿನ ದಂಡಕ್ಕಿಂತ ತಂಡದಲ್ಲಿ ಶಿಸ್ತು ಮತ್ತು ಬದಲಾವಣೆ ಮುಖ್ಯ ಎಂದಿದ್ದಾರೆ.
ಇದನ್ನೂ ಓದಿ: RCB ತಂಡದ 2 ಪಂದ್ಯಗಳನ್ನು ಶಿಫ್ಟ್ ಮಾಡಲು ಇದುವೇ ಕಾರಣ..!
ಒಟ್ಟಿನಲ್ಲಿ ಟಿ20 ವಿಶ್ವಕಪ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ಪಾಕಿಸ್ತಾನ್ ತಂಡದಲ್ಲಿ ಮಹತ್ವದ ಬದಲಾವಣೆಯಾಗುವ ಮುನ್ಸೂಚನೆ ಸಿಗುತ್ತಿದೆ. ಹೀಗಾಗಿ ಮುಂಬರುವ ಸರಣಿ ವೇಳೆ ಹೊಸ ಪಾಕ್ ಪಡೆಯನ್ನು ನಿರೀಕ್ಷಿಸಬಹುದು.