
ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ (Pakistan vs West Indies) ನಡುವೆ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಬ್ಯಾಟಿಂಗ್ ಮಾಡಿ ಮೊದಲ ಇನ್ನಿಂಗ್ಸ್ನಲ್ಲಿ 311 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಶೈ ಹೋಪ್ 92 ರನ್ ಬಾರಿಸಿದರೆ, ಕವೆಮ್ ಹಾಡ್ಜ್ 84 ರನ್ ಬಾರಿಸಿದರು. ಇತ್ತ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಪಾಕಿಸ್ತಾನ ತಂಡ ಮೂರನೇ ದಿನದಾಟದಲ್ಲಿ ಭೋಜನ ವಿರಾಮದ ವೇಳೆಗೆ 8 ವಿಕೆಟ್ಗಳನ್ನು ಕಳೆದುಕೊಂಡು 267 ರನ್ ಕಲೆಹಾಕಿದೆ. ಪಾಕ್ ತಂಡದ ಪರ ಮಾಜಿ ನಾಯಕ ಶಾನ್ ಮಸೂದ್ (Shan Masood) ಭರ್ಜರಿ ಶತಕ ಸಿಡಿಸಿದ್ದಾರೆ.
ಈ ಮೊದಲು ಪಾಕ್ ತಂಡದ ನಾಯಕನಾಗಿದ್ದ ಶಾನ್ ಮಸೂದ್ ತಮ್ಮ ನಾಯಕತ್ವದಲ್ಲಿ ತಂಡಕ್ಕೆ ಹೇಳಿಕೊಳ್ಳುವಂತಹ ಯಶಸ್ಸು ತಂದುಕೊಡಲಿಲ್ಲ. ಹೀಗಾಗಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಯಿತು. ಇದೀಗ ನಾಯಕತ್ವ ಕಳೆದುಕೊಂಡ ಬಳಿಕ ಮಸೂದ್ ಬ್ಯಾಟ್ನಿಂದ ಶತಕ ಸಿಡಿದಿದೆ. 19 ತಿಂಗಳ ನಂತರ ಶತಕ ಬಾರಿಸಿರುವ ಮಸೂದ್ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ ಕ್ರೀಡಾಂಗಣದಲ್ಲಿ ಟೆಸ್ಟ್ ಶತಕ ಗಳಿಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
57 ನೇ ಓವರ್‌ನ ಎರಡನೇ ಎಸೆತದಲ್ಲಿ ಸಿಂಗಲ್ ಗಳಿಸುವ ಮೂಲಕ ಶಾನ್ ಮಸೂದ್ ತಮ್ಮ 7 ನೇ ಟೆಸ್ಟ್ ಶತಕವನ್ನು ಪೂರೈಸಿದರು. 12 ಟೆಸ್ಟ್ ಇನ್ನಿಂಗ್ಸ್‌ಗಳ ನಂತರ ಶತಕ ಬಾರಿಸಿದ ಮಸೂದ್ ತಂಡದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ. ಮೊದಲಿಗೆ ಮಸೂದ್ ಒಂಬತ್ತು ಬೌಂಡರಿಗಳನ್ನು ಒಳಗೊಂಡಂತೆ ಕೇವಲ 46 ಎಸೆತಗಳಲ್ಲಿ ತಮ್ಮ ಮೊದಲ ಅರ್ಧಶತ ಬಾರಿಸಿದರು. ಎರಡನೇ ದಿನದಾಟದ ಅಂತ್ಯದ ವೇಳೆಗೆ ಅವರು 88 ರನ್‌ಗಳೊಂದಿಗೆ ಅಜೇಯರಾಗಿ ಉಳಿದಿದ್ದರು. ಇದೀಗ ಮೂರನೇ ದಿನದಂದು ತಮ್ಮ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದರು.
IND U19 vs SL U19: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಭಾರತ ಯುವ ಪಡೆ
ಆದಾಗ್ಯೂ ಈ ಪಂದ್ಯದಲ್ಲಿ ಪಾಕಿಸ್ತಾನ ಕಳಪೆ ಆರಂಭ ಪಡೆಯಿತು. ಆರಂಭಿಕ ಆಟಗಾರ ಅಜಾನ್ ಅವೈಸ್ ಖಾತೆ ತೆರೆಯದೆಯೇ ಬೌಲ್ಡ್ ಆದರು. ಆ ಬಳಿಕ ಜೊತೆಯಾದ, ಶಾನ್ ಮಸೂದ್, ಇಮಾಮ್-ಉಲ್-ಹಕ್ 155 ರನ್‌ಗಳ ಪಾಲುದಾರಿಕೆ ನೀಡಿದರು. ಇಮಾಮ್ 63 ರನ್‌ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಇಮಾಮ್ ಔಟಾದ ನಂತರ, ಬಂದ ಬಾಬರ್ ಅಜಮ್ ಅವರೊಂದಿಗೆ ಮಸೂದ್ 41 ರನ್‌ಗಳ ಜೊತೆಯಾಟ ನಡೆಸಿದರು. ಆದರೆ ನಾಯಕ ಬಾಬರ್ ಅಜಮ್ 23 ರನ್‌ಗಳಿಗೆ ಔಟಾದರು. ಆದಾಗ್ಯೂ, ಶಾನ್ ಮಸೂದ್ ತಮ್ಮ ಅಟವನ್ನು ಮುಂದುವರೆಸಿ ಶತಕವನ್ನು ಪೂರೈಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:11 pm, Mon, 27 July 26