ಅದೊಂದು ಕಾಲವಿತ್ತು. ಆಸ್ಟ್ರೆಲಿಯಾವೆಂದರೆ ಎದುರಾಳಿ ತಂಡದ ಎದೆಯಲ್ಲಿ ಪಂದ್ಯದ ಪಲಿತಾಂಶಕ್ಕೂ ಮುನ್ನವೇ ಸೋಲಿನ ಮೊಹರು ಬಿದ್ದುಬಿಡುತ್ತಿತ್ತು. ಕಾಂಗರೂ ತಂಡದ ದೈತ್ಯ ಆಟಗಾರರೇ ಇದಕ್ಕೆಲ್ಲ ಕಾರಣರಾಗಿದ್ದರು. ಬ್ಯಾಟಿಂಗ್ ವಿಭಾಗದಲ್ಲಿ ಬಲಿಷ್ಠ ಆಟಗಾರರೇ ತುಂಬಿ ಹೋಗಿದ್ದರೆ, ಬೌಲಿಂಗ್ ವಿಭಾಗದಲ್ಲಂತೂ ವೇಗದ ಕುದುರೆಗಳ ಪಡೆಯೇ ಇತ್ತು. ಈ ಎರಡು ಭುಜ ಬಲಗಳಿಗೆ ತದ್ವೀರುದ್ದವಾಗಿ ಇದ್ದ ಏಕೈಕ ಆಟಗಾರನೆಂದರೆ ಅದು ಶೇನ್ ವಾರ್ನ್ (Shane Warne). ಶೇನ್ ವಾರ್ನ್ ಕೇವಲ ಕ್ರಿಕೆಟಿಗನಾಗಿರಲಿಲ್ಲ. ಅವರೊಬ್ಬ ಜಾದೂಗಾರರೆಂದರೆ ತಪ್ಪಾಗಲಾರದು. 22 ಗಜಗಳ ಪಿಚ್ನಲ್ಲಿ ಅದ್ಭುತಗಳನ್ನೇ ಮಾಡಿದ ಮಾಂತ್ರಿಕ ಈತ. ವಾರ್ನ್ ಸುವರ್ಣ ಯುಗದ ಸಮಯದಲ್ಲಿ ಅಸಂಖ್ಯಾತ ಅಭಿಮಾನಿಗಳು ಇವರ ಆಟ ನೋಡಲೆಂದೆ ಮೈದಾನಕ್ಕೆ ಬರುತ್ತಿದ್ದರು. ಬ್ಯಾಟರ್ಗಳ ಊಹೆಗೂ ನಿಲುಕದ ಎಸೆತಗಳಿಂದ ಸಲೀಸಾಗಿ ವಿಕೆಟ್ ಉದುರಿಸುತ್ತಿದ್ದ ಈ ಜಾದೂಗಾರನ ಸ್ಪಿನ್ ಬಲೆಗೆ ಬಿದ್ದ ದಾಂಡಿಗರು ಸಪ್ಪೆ ಮೊರೆ ಹಾಕಿಕೊಂಡು ಪೆವಿಲಿಯನ್ ದಾರಿ ಹಿಡಿಯುತ್ತಿದ್ದರು. ಅಂತಹ ವಾರ್ನ್ ಇಂದು ತನ್ನ 52ನೇ ವಯಸ್ಸಿಗೆ ಇಹಲೋಕದ ವ್ಯವಹಾರವ ಮುಗಿಸಿಬಿಟ್ಟಿದ್ದಾರೆ.
ಕ್ರೀಸ್‌ಗೆ ಜಟಿಲವಲ್ಲದ ರನ್-ಅಪ್, ಒಂದೆರಡು ಹೆಜ್ಜೆ ನೆಡೆದುಕೊಂಡು ಬಂದು ಬಾಲ್ ಎಸೆಯುತ್ತಿದ್ದ ವಾರ್ನ್ ವಂಚನೆಯ ಎಸೆತವನ್ನು ಬ್ಯಾಟರ್ಗಳು ಅರ್ಥ ಮಾಡಿಕೊಳ್ಳುವ ಮುನ್ನವೇ ಚೆಂಡು ಸ್ಟಂಪ್ಗೆ ಮುತ್ತಿಕ್ಕಿಬಿಡುತ್ತಿತ್ತು. ನಿದಾನವಾಗಿ ನೆಡೆದುಬಂದು ಲೆಗ್ ಸ್ಟಂಪ್‌ನ ಹೊರಗೆ ಎರಡು ಅಡಿಗಿಂತ ಹೆಚ್ಚು ದೂರಕ್ಕೆ ಚೆಂಡನ್ನು ಪಿಚ್ ಮಾಡುತ್ತಿದ್ದ ವಾರ್ನ್ ಎಸೆತ ವೈಡ್ ಆಗುತ್ತದೆ ಎಂತಲೇ ಭಾವಿಸಿ ಬ್ಯಾಟರ್ ಬಿಟ್ಟು ಬಿಡುತ್ತಿದ್ದರು. ಅಷ್ಟರಲ್ಲೇ ಅಂಪೈರ್ ಕೂಡ ವೈಡ್ ನೀಡಲು ಸಿದ್ದರಾಗುತ್ತಿದ್ದರು ಆದರೆ ವಾರ್ನ್ ಮಂತ್ರಕ್ಕೆ ಸಿಲುಕಿದ್ದ ಚೆಂಡು ಹೇಳಿದ ಮಾತನ್ನು ಕೇಳುವ ವಿದ್ಯಾರ್ಥಿಗಳಂತೆ ಸೀದಾ ಹೋಗಿ ವಿಕೆಟ್ಗೆ ಬಡಿದು ಬಿಡುತ್ತಿತ್ತು. ಇಂತಹ ನೂರಾರು ಅಚ್ಚರಿಗಳನ್ನು ವಾರ್ನ್ ಎಂಬ ಸ್ಪಿನ್ ಮಾಂತ್ರಿಕ ಮಾಡಿಬಿಟ್ಟಿದ್ದಾರೆ.
ವಾರ್ನ್ ಮ್ಯಾಜಿಕ್ಗೆ ಗ್ಯಾಟಿಂಗ್ ಕಕ್ಕಾಬಿಕ್ಕಿ
ಅದು 4 ಜೂನ್ 1993 ರಂದು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಆಶಸ್ ಟೆಸ್ಟ್‌ನ ಎರಡನೇ ದಿನವಾಗಿತ್ತು. ಆಸ್ಟ್ರೇಲಿಯಾವನ್ನು 289 ರನ್‌ಗಳಿಗೆ ಆಲೌಟ್ ಮಾಡಿದ ನಂತರ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಆರಂಭಿಸಿತ್ತು. ಉತ್ತಮವಾಗಿ ಆರಂಭಗೊಂಡ ತಂಡ 71 ರನ್‌ಗಳಾಗುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ನಂತರ ಸ್ಪಿನ್ಗೆ ಉತ್ತಮವಾಗಿ ಆಡುತ್ತಿದ್ದ ಮೈಕ್ ಗ್ಯಾಟಿಂಗ್ ಕ್ರೀಸ್‌ಗೆ ಬಂದರು. ಅವರ ಮುಂದೆ ಒಂದು ವರ್ಷದ ಹಿಂದೆ ಚೊಚ್ಚಲ ಪಂದ್ಯವಾಡಿದ್ದ ಶೇನ್ ವಾರ್ನ್ ಬೌಲಿಂಗ್ಗೆ ಇಳಿದಿದ್ದರು.
ಇಂಗ್ಲೆಂಡ್ ತಂಡಕ್ಕೆ ವಾರ್ನ್ ಬಗ್ಗೆ ಹೆಚ್ಚು ತಿಳಿದಿರಲಿಲ್ಲ ಮತ್ತು ಮೈಕ್ ಗ್ಯಾಟಿಂಗ್‌ಗೂ ಹೆಚ್ಚು ತಿಳಿದಿರಲಿಲ್ಲ. ಆದರೆ ವಾರ್ನ್‌ಗೆ ತನ್ನ ಬಗ್ಗೆ ಎದುರಾಳಿ ಆಟಗಾರನಿಗೆ ವಿವರಿಸಲು ಕೇವಲ ಒಂದು ಚೆಂಡು ಮಾತ್ರ ಬೇಕಾಗಿತ್ತು. ಆ ಒಂದು ಬಾಲ್ ಮಾಡಿದ ಮ್ಯಾಜಿಕ್, ಕೇವಲ ಕ್ಷಣಮಾತ್ರದಲ್ಲಿ ವಾರ್ನ್ ಎಂಬ ಜಾದೂಗಾರನನ್ನು ಇಡೀ ಜಗತ್ತಿಗೆ ಪರಿಚಯಿಸಿಬಿಟ್ಟಿತ್ತು.
ನಾಲ್ಕೈದು ಹೆಜ್ಜೆ ನಡೆದುಕೊಂಡು ಬಂದ ಶೇನ್ ವಾರ್ನ್, ತನ್ನ ಮೊದಲ ಎಸೆತವನ್ನು ಬಲಗೈ ಬ್ಯಾಟ್ಸ್‌ಮನ್ ಮೈಕ್ ಗ್ಯಾಟಿಂಗ್ ಎದುರು ಎಸೆದರು. ಆ ಎಸೆತ ಲೆಗ್-ಸ್ಟಂಪ್ ಗೆರೆಯ ಹೊರಗೆ ಪಿಚ್ ಆಯಿತು. ಬ್ಯಾಟಿಂಗ್ ಮಾಡುತ್ತಿದ್ದ ಗ್ಯಾಟಿಂಗ್ ಚೆಂಡನ್ನು ಬ್ಯಾಟ್ ಹಾಗೂ ಪ್ಯಾಡ್ ಮೂಲಕ ಆಡಲು ಮುಂದಾದರು. ಆದರೆ ಚೆಂಡು ವೇಗವಾಗಿ ತಿರುಗಿ ಲೆಗ್-ಸ್ಟಂಪ್ನಿಂದ ಸೀದಾ ವಿಕೆಟ್ ಕಡೆ ಹೋಯಿತು. ಲೆಗ್-ಸ್ಟಂಪ್ ಕಡೆ ಬಿದ್ದ ಬಾಲ್ ಆಫ್-ಸ್ಟಂಪ್ ಕಡೆ ಹಾರಿ ಬೇಲ್‌ಗಳನ್ನು ನೆಲಕ್ಕುರಿಳಿಸಿದ್ದನ್ನು ಕಂಡ ಗ್ಯಾಟಿಂಗ್ ಕ್ಷಣಕಾಲ ದಿಗ್ಬ್ರಮೆಗೊಂಡವರಂತೆ ನಿಂತುಬಿಟ್ಟರು. ಇತ್ತ ಸ್ಪಿನ್ ಬಲೆಗೆ ವಿಕೆಟ್ ಬೀಳಿಸಿದ ವಾರ್ನ್ ತಂಡದವರೊಂದಿಗೆ ಸಂಭ್ರಮಾಚರಣೆಯಲ್ಲಿ ತೊಡಗಿಬಿಟ್ಟರು.
ವಿವಾದಗಳ ಹೊರೆಹೊತ್ತಿದ್ದ ವಾರ್ನ್
ಹಂತಹಂತವಾಗಿ ಕ್ರಿಕೆಟ್ನಲ್ಲಿ ಉತ್ತುಂಗ ಸ್ಥಾನ ತಲುಪಿದ ವಾರ್ನ್ ವೈಯಕ್ತಿಕ ಬದುಕಿನಲ್ಲಿ ವಿವಾದಗಳ ಹೊರೆಯನ್ನೇ ಹೊತ್ತುಕೊಂಡುಬಿಟ್ಟಿದ್ದರು. ಕ್ರಿಕೆಟ್ನಲ್ಲಿನ ಜನಪ್ರಿಯತೆಯಿಂದ ವಾರ್ನ್ ಬದುಕಿನಲ್ಲಿ ಹಣದ ಹೊಳೆಯೇ ಹರಿಯಲಾರಂಭಿಸಿತು. ಆದಾಯಕ್ಕೆ ತಕ್ಕಂತೆ ವೈಭೋಗದ ಬದುಕಿಗೆ ಜೋತು ಬಿದ್ದ ವಾರ್ನ್ ವಿವಾದಗಳಿಗೆ ದಾರಿ ಮಾಡಿಕೊಟ್ಟುಬಿಟ್ಟರು. ಇವುಗಳಲ್ಲಿ 2017 ರಂದು ನೈಟ್‌ಕ್ಲಬ್‌ನಲ್ಲಿ ಪೋರ್ನ್ ಸ್ಟಾರ್ ವ್ಯಾಲೆರಿ ಫಾಕ್ಸ್ ಮೇಲೆ ದಾಳಿ ಮಾಡಿದ ಆರೋಪದಲ್ಲಿ ವಾರ್ನ್ ಸಿಕ್ಕಿಬಿದ್ದಿದ್ದರು. ಇದರೊಂದಿಗೆ ಹೆಣ್ಣಿನ ಮೇಲೆ ಹೆಚ್ಚಿನ ವ್ಯಮೋಹ ಇಟ್ಟುಕೊಂಡಿದ್ದ ವಾರ್ನ್ ವೈವಾಹಿಕ ಜೀವನದಲ್ಲಿ 2 ಮಕ್ಕಳ ತಂದೆಯಾಗಿದ್ದರೂ ಇತರ ಮಹಿಳೆಯರೊಂದಿಗೆ ವಿವಾಹವೇತರ ಸಂಬಂಧ ಹೊಂದಿದ್ದರು. ವಾರ್ನ್ ಅವರ ಈ ನಡವಳಿಕೆ ಕಂಡ ಮಡದಿ ಸಿಮೋನ್ 2005ರಲ್ಲಿ ವಿಚ್ಚೇದನ ಪಡೆದುಕೊಂಡರು.
2003 ಐಸಿಸಿ ವಿಶ್ವಕಪ್‌ಗೆ ಮೊದಲು, ನಿಷೇಧಿತ ಮಾದಕವಸ್ತು ಸೇವನೆ ಮಾಡಿದ್ದಾರೆ ಎಂದು ಆರೋಪಿಸಿ ವಾರ್ನ್ ಅವರನ್ನು ಕ್ರಿಕೆಟ್ನಿಂದ ನಿಷೇಧಿಸಲಾಗಿತ್ತು. ಆದರೆ ಕ್ರಿಕೆಟ್ಗೆ ಮರಳಲು ವಾರ್ನ್ ನಾನಾ ಕಸರತ್ತು ಮಾಡಬೇಕಾಯ್ತು. ನಂತರ 1994ರ ಶ್ರೀಲಂಕಾ ಪ್ರವಾಸದಲ್ಲಿ ವಾರ್ನ್ ಬುಕ್ಕಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಹೀಗೆ ಅನೇಕ ವಿವಾದಗಳಲ್ಲಿ ವಾರ್ನ್ ಹೆಸರು ಕೇಳಿಬಂದಿತ್ತು.
ವೈಯಕ್ತಿಕ ಬದುಕಿನಲ್ಲಿ ಬಿರುಗಾಳಿ ಎದಿದ್ದರು ವೃತ್ತಿ ಬದುಕಿನಲ್ಲಿ ಅಭಿಮಾನಿಗಳಿಗೆ ರಸದೌತಣವನ್ನೇ ಉಣಬಡಿಸಿದ ವಾರ್ನ್ ಇದಕ್ಕಿದ್ದಂತೆ ಸಾವಿನ ಮನೆ ಕದ ಬಡಿದಿದ್ದಾರೆ. ವಾರ್ನ್ ಅವರ ಸಾವು ಇಡೀ ಕ್ರೀಡಾ ಜಗತ್ತಿಗೆ ಆಘಾತ ತಂದಿದೆ. ಆಟದಲ್ಲಿ ಮ್ಯಾಜಿಕ್ ಮಾಡಿದ್ದ ವಾರ್ನ್ ನಿವೃತ್ತಿಯ ನಂತರ ಕಾಮೆಂಟರಿ ಬಾಕ್ಸ್‌ನಲ್ಲಿಯೂ ಮಿಂಚಿದ್ದರು. ಐಪಿಎಲ್ನ ಚೊಚ್ಚಲ ಆವೃತ್ತಿಯಲ್ಲೇ ತನ್ನ ನಾಯಕತ್ವದ ತಂಡವನ್ನು ಚಾಂಪಿಯನ್ ಮಾಡಿದ್ದ ವಾರ್ನ್‌ಗೆ ಕ್ರೀಡಾ ಜಗತ್ತು ತಲೆ ಬಾಗಿ ಕಣ್ಣೀರಿನ ವಿದಾಯ ಹೇಳುತ್ತಿದೆ.
ಇದನ್ನೂ ಓದಿ:Shane Warne: ಅಗಲಿದ ಕ್ರಿಕೆಟ್ ದಂತಕಥೆಯ ಹೆಸರನ್ನು ಜೀವಂತವಾಗಿರಿಸಲು ಮುಂದಾದ ಕ್ರಿಕೆಟ್ ಆಸ್ಟ್ರೇಲಿಯಾ
Published On - 4:52 pm, Sat, 5 March 22