5 ಭರ್ಜರಿ ಸಿಕ್ಸ್, 9 ಫೋರ್: ಸ್ಪೋಟಕ ಶತಕ ಸಿಡಿಸಿದ ಶರತ್

| Updated By: ಝಾಹಿರ್ ಯೂಸುಫ್

Updated on: Aug 15, 2023 | 5:52 PM

Maharaja Trophy KSCA T20 2023: ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಶರತ್ ಅಬ್ಬರಕ್ಕೆ ಮೈಸೂರು ವಾರಿಯರ್ಸ್ ಬೌಲರ್​ಗಳು ಲಯ ತಪ್ಪಿದರು. ಇದರ ಸಂಪೂರ್ಣ ಲಾಭ ಪಡೆದ ಶರತ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್​-ಫೋರ್​ಗಳನ್ನು ಸಿಡಿಸಿದರು.

5 ಭರ್ಜರಿ ಸಿಕ್ಸ್, 9 ಫೋರ್: ಸ್ಪೋಟಕ ಶತಕ ಸಿಡಿಸಿದ ಶರತ್
Sharath BR
Follow us on

Maharaja Trophy T20 2023: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 5ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಮೈಸೂರು ವಾರಿಯರ್ಸ್​ ವಿರುದ್ಧದ ಈ ಪಂದ್ಯದಲ್ಲಿ ಸಿಡಿಲಬ್ಬರದ ಶತಕ ಸಿಡಿಸಿ ಬಿಆರ್​ ಶರತ್ ಮಂಗಳೂರು ಡ್ರಾಗನ್ಸ್ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ.

ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಮಂಗಳೂರು ಡ್ರಾಗನ್ಸ್ ತಂಡದ ನಾಯಕ ಕೃಷ್ಣಪ್ಪ ಗೌತಮ್ ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮೈಸೂರು ವಾರಿಯರ್ಸ್ ತಂಡಕ್ಕೆ ಕಾರ್ತಿಕ್ (29) ಹಾಗೂ ಸಮರ್ಥ್ (14) ಉತ್ತಮ ಆರಂಭ ಒದಗಿಸಿದ್ದರು.

4 ಓವರ್​ಗಳಲ್ಲಿ 41 ರನ್ ಪೇರಿಸಿದ್ದ ವೇಳೆ ಸಮರ್ಥ್ ಔಟಾದರು. ಈ ವೇಳೆ ಕಣಕ್ಕಿಳಿದ ನಾಯಕ ಕರುಣ್ ನಾಯರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಮಂಗಳೂರು ಬೌಲರ್​ಗಳ ಬೆಂಡೆತ್ತಿದ ಕರುಣ್ ಸಿಕ್ಸ್-ಫೋರ್​ಗಳ ಸುರಿಮಳೆಗೈದರು.

ಅಲ್ಲದೆ ಕೇವಲ 39 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ 77 ರನ್ ಬಾರಿಸಿ ಕರುಣ್ ನಾಯರ್ ರನೌಟ್ ಆಗಿ ನಿರ್ಗಮಿಸಿದರು. ಈ ಸ್ಪೋಟಕ ಇನಿಂಗ್ಸ್ ಪರಿಣಾಮ ಮೈಸೂರು ವಾರಿಯರ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 201 ರನ್ ಪೇರಿಸಿತು.

202 ರನ್​ಗಳ ಕಠಿಣ ಗುರಿ ಪಡೆದ ಮಂಗಳೂರು ಡ್ರಾಗನ್ಸ್ ಪರ ಆರಂಭಿಕ ಆಟಗಾರ ರೋಹನ್ ಪಾಟೀಲ್ ಕೇವಲ 27 ಎಸೆತಗಳಲ್ಲಿ 54 ರನ್ ಚಚ್ಚಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಕೆಟ್ ಕೀಪರ್ ಬ್ಯಾಟರ್​ ಬಿಆರ್​ ಶರತ್ ಅಕ್ಷರಶಃ ಅಬ್ಬರಿಸಿದರು.

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಶರತ್ ಅಬ್ಬರಕ್ಕೆ ಮೈಸೂರು ವಾರಿಯರ್ಸ್ ಬೌಲರ್​ಗಳು ಲಯ ತಪ್ಪಿದರು. ಇದರ ಸಂಪೂರ್ಣ ಲಾಭ ಪಡೆದ ಶರತ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್​-ಫೋರ್​ಗಳನ್ನು ಸಿಡಿಸಿದರು. ಪರಿಣಾಮ ಕೇವಲ 57 ಎಸೆತಗಳಲ್ಲಿ ಶರತ್ ಬ್ಯಾಟ್​ನಿಂದ ಭರ್ಜರಿ ಶತಕ ಮೂಡಿಬಂತು.

ಶತಕದ ಬಳಿಕ ಅಬ್ಬರ ಮುಂದುವರೆಸಿದ ಶರತ್ 61 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 9 ಫೋರ್​ಗಳೊಂದಿಗೆ ಅಜೇಯ 111 ರನ್​ ಚಚ್ಚಿದರು. ಈ ಮೂಲಕ 18.5 ಓವರ್​ಗಳಲ್ಲಿ ಮಂಗಳೂರು ಡ್ರಾಗನ್ಸ್ ತಂಡವನ್ನು ಗೆಲುವಿನ ದಡ ಸೇರಿಸಿ ಜಯದ ರೂವಾರಿ ಎನಿಸಿಕೊಂಡರು.

ಮೈಸೂರು ವಾರಿಯರ್ಸ್ ಪ್ಲೇಯಿಂಗ್ 11: ರವಿಕುಮಾರ್ ಸಮರ್ಥ್ , ಕೋದಂಡ ಅಜಿತ್ ಕಾರ್ತಿಕ್ , ಕರುಣ್ ನಾಯರ್ (ನಾಯಕ) , ರಾಹುಲ್ ರಾವತ್ , ತುಷಾರ್ ಸಿಂಗ್ , ಶಿವಕುಮಾರ್ ರಕ್ಷಿತ್ (ವಿಕೆಟ್ ಕೀಪರ್) , ಮನೋಜ್ ಭಾಂಡಗೆ , ಜಗದೀಶ ಸುಚಿತ್ , ಶ್ರೀಶ ಆಚಾರ್ , ಮುರಳೀಧರ ವೆಂಕಟೇಶ್ , ಮೋನಿಶ್ ರೆಡ್ಡಿ.

ಇದನ್ನೂ ಓದಿ: Suryakumar Yadav: 50 ಇನಿಂಗ್ಸ್​ ಬಳಿಕ ಟಾಪ್-5 ಗೆ ಸೂರ್ಯನ ಎಂಟ್ರಿ..!

ಮಂಗಳೂರು ಡ್ರಾಗನ್ಸ್ ಪ್ಲೇಯಿಂಗ್ 11: ನಿಕಿನ್ ಜೋಸ್ , ಶರತ್ ಬಿಆರ್ (ವಿಕೆಟ್ ಕೀಪರ್) , ಕೃಷ್ಣಮೂರ್ತಿ ಸಿದ್ಧಾರ್ಥ್ , ಅನಿರುದ್ಧ್ ಜೋಶಿ , ಧೀರಜ್ ಜೆ ಗೌಡ , ಕೃಷ್ಣಪ್ಪ ಗೌತಮ್ (ನಾಯಕ) , ಆನಂದ್ ದೊಡ್ಡಮನಿ , ಅನೀಶ್ವರ್ ಗೌತಮ್ , ಆದಿತ್ಯ ಗೋಯಲ್ , ಪ್ರತೀಕ್ ಜೈನ್ , ನವೀನ್ ಎಂಜಿ.