
ಭಾರತದಲ್ಲಿ ಪ್ರಧಾನಿ ಹುದ್ದೆಯ ನಂತರ ಅತ್ಯಂತ ಕಷ್ಟಕರ ಕೆಲಸವನ್ನು ನಿರ್ವಹಿಸುತ್ತಿರುವುದು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್. ಹೀಗೆ ಹೇಳಿರುವುದು ಮತ್ಯಾರೂ ಅಲ್ಲ, ಕಾಂಗ್ರೆಸ್ ಸಂಸದ ಶಶಿ ತರೂರ್. ನಾಗಪುರದಲ್ಲಿ ಗೌತಮ್ ಗಂಭೀರ್ ಅವರನ್ನು ಭೇಟಿಯಾದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಶಶಿ ತರೂರ್ ಟೀಮ್ ಇಂಡಿಯಾ ಕೋಚ್ ಅನ್ನು ಹಾಡಿ ಹೊಗಳಿದ್ದಾರೆ.
ನನ್ನ ಹಳೆಯ ಗೆಳೆಯ ಗೌತಮ್ ಗಂಭೀರ್ ಅವರನ್ನು ನಾಗಪುರದಲ್ಲಿ ಭೇಟಿಯಾದೆ. ಅವರೊಂದಿಗಿನ ಒಳ್ಳೆಯ ಮತ್ತು ಮುಕ್ತ ಚರ್ಚೆಯನ್ನು ಆನಂದಿಸಿದೆ. ಪ್ರಧಾನಿ ಹುದ್ದೆಯ ನಂತರ ಭಾರತದಲ್ಲಿ ಅತ್ಯಂತ ಕಠಿಣ ಕೆಲಸ ಮಾಡುವ ವ್ಯಕ್ತಿ ಗೌತಮ್ ಗಂಭೀರ್.
ಪ್ರತಿದಿನ ಲಕ್ಷಾಂತರ ಜನರು ಅವರ ನಿರ್ಧಾರಗಳನ್ನು ಪ್ರಶ್ನಿಸುತ್ತಾರೆ. ಆದರೆ, ಅವರು ಸಂಪೂರ್ಣ ಶಾಂತತೆ ಮತ್ತು ದೃಢನಿಶ್ಚಯದಿಂದ, ಹಿಂಜರಿಯದೆ ಮುಂದುವರಿಯುತ್ತಿದ್ದಾರೆ. ಅವರ ಶಾಂತ ಸಂಕಲ್ಪ ಮತ್ತು ಸಮರ್ಥ ನಾಯಕತ್ವವನ್ನು ಶ್ಲಾಘಿಸಬೇಕು. ಮುಂದಿನ ಸವಾಲುಗಳಿಗೆ ಅವರು ಅವರಿಗೆ ಶುಭ ಹಾರೈಸುತ್ತೇನೆ ಎಂದು ಶಶಿ ತರೂರ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಶಶಿ ತರೂರ್ ಅವರ ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಗೌತಮ್ ಗಂಭೀರ್, ಧನ್ಯವಾದಗಳು… ಎಲ್ಲಾ ಗದ್ದಲ ಮತ್ತು ಟೀಕೆಗಳು ಕಡಿಮೆಯಾದಾಗ, ತರಬೇತುದಾರರ ಅಪರಿಮಿತ ಶಕ್ತಿಯ ಹಿಂದಿನ ಸತ್ಯ ಮತ್ತು ತರ್ಕವು ಸ್ಪಷ್ಟವಾಗುತ್ತದೆ.ಅಲ್ಲಿಯವರೆಗೆ, ಅತ್ಯುತ್ತಮವಾಗಿರುವ ನನ್ನವರ ವಿರುದ್ಧವೇ ನನ್ನನ್ನು ಎತ್ತಿಕಟ್ಟುತ್ತಿರುವುದನ್ನು ನೋಡುವುದೇ ಕುತೂಹಲಕಾರಿ ಎಂದು ಗಂಭೀರ್ ಬರೆದುಕೊಂಡಿದ್ದಾರೆ.
ಅಂದಹಾಗೆ ಶಶಿ ತರೂರ್ ಅವರು ಗೌತಮ್ ಗಂಭೀರ್ ಅವರು ಕಷ್ಟಕರ ಹುದ್ದೆಯಲ್ಲಿದ್ದಾರೆ ಎಂದು ಹೇಳಲು ಮುಖ್ಯ ಕಾರಣ ಟೀಮ್ ಇಂಡಿಯಾ ಕೋಚ್ ವಿರುದ್ಧ ಕೇಳಿ ಬರುತ್ತಿರುವ ಟೀಕೆ ಟಿಪ್ಪಣಿಗಳು. ಗಂಭೀರ್ ಕೋಚಿಂಗ್ನಲ್ಲಿ ಭಾರತ ಟೆಸ್ಟ್ ತಂಡವು ಅಧಃಪತನದತ್ತ ಸಾಗಿದೆ.
ಅಷ್ಟೇ ಅಲ್ಲದೆ ಇತ್ತೀಚೆಗೆ ನಡೆದ ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದಿಂದ ಸೋಲನುಭವಿಸಿದೆ. ಈ ಮೂಲಕ ನ್ಯೂಝಿಲೆಂಡ್ ತಂಡವು ಇದೇ ಮೊದಲ ಬಾರಿಗೆ ಭಾರತದಲ್ಲಿ ಏಕದಿನ ಸರಣಿ ಗೆದ್ದುಕೊಂಡಿದೆ.
ಇದನ್ನೂ ಓದಿ: ಗೆದ್ದರೂ ಟೀಮ್ ಇಂಡಿಯಾದ ಚಿಂತೆ ಹೆಚ್ಚಿಸಿದ ಕಳಪೆಯಾಟ..!
ಅಂದರೆ ಕಳೆದ 37 ವರ್ಷಗಳಲ್ಲಿ ನ್ಯೂಝಿಲೆಂಡ್ ಒಮ್ಮೆಯೂ ಭಾರತದಲ್ಲಿ ಏಕದಿನ ಸರಣಿ ಗೆದ್ದಿರಲಿಲ್ಲ. ಹೀಗಾಗಿಯೇ ಭಾರತ ತಂಡದ ಸೋಲಿಗೆ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರನ್ನು ಟೀಕಿಸಲಾಗಿತ್ತು. ಅವರ ಕಾರ್ಯ ವೈಖರಿಗಳ ಬಗ್ಗೆ ಪ್ರಶ್ನೆಗಳನ್ನೆತ್ತಲಾಗಿತ್ತು. ಹೀಗಾಗಿಯೇ ಶಶಿ ತರೂರ್ ಅವರು ಭಾರತದಲ್ಲಿ ಪ್ರಧಾನಿ ಹುದ್ದೆಯ ನಂತರ ಅತ್ಯಂತ ಕಷ್ಟಕರ ಕಷ್ಟಕರ ಕೆಲಸವನ್ನು ನಿರ್ವಹಿಸುತ್ತಿರುವುದು ಗಂಭೀರ್ ಎಂದಿದ್ದಾರೆ.