ಗೆದ್ದರೂ ಟೀಮ್ ಇಂಡಿಯಾದ ಚಿಂತೆ ಹೆಚ್ಚಿಸಿದ ಕಳಪೆಯಾಟ..!
India vs New Zealand 1st: ನ್ಯೂಝಿಲೆಂಡ್ ವಿರುದ್ಧದ ಮೊದಲ ಟಿ೨೦ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 238 ರನ್ ಕಲೆಹಾಕಿದ್ದರು. ಈ ಕಠಿಣ ಗುರಿ ಬೆನ್ನತ್ತಿದ ನ್ಯೂಝಿಲೆಂಡ್ 20 ಓವರ್‌ಗಳಲ್ಲಿ 190 ರನ್ ಗಳಿಸಿ 48 ರನ್ ಗಳಿಂದ ಸೋಲೊಪ್ಪಿಕೊಂಡಿದೆ.

ಜನವರಿ 21, 2026 ರಂದು ನಡೆದ ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 48 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಹೊರತಾಗಿಯೂ ಟೀಮ್ ಇಂಡಿಯಾಗೆ ಹೊಸ ಚಿಂತೆ ಶುರುವಾಗಿದೆ. ಅದುವೇ ಕಳಪೆ ಫೀಲ್ಡಿಂಗ್. ಏಕೆಂದರೆ ಈ ಪಂದ್ಯದಲ್ಲಿ ಭಾರತೀಯ ಫೀಲ್ಡರ್‌ಗಳು ಹಲವು ಅವಕಾಶಗಳನ್ನು ಕೈಚೆಲ್ಲಿದ್ದಾರೆ.
ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಫೀಲ್ಡರ್‌ಗಳು ಮಾಡಿದ ತಪ್ಪುಗಳಾವುವು ಎಂದು ನೋಡುವುದಾದರೆ,…
- ಭಾರತೀಯ ಫೀಲ್ಡರ್‌ಗಳು ನ್ಯೂಝಿಲೆಂಡ್ ಇನ್ನಿಂಗ್ಸ್‌ನಲ್ಲಿ ಕನಿಷ್ಠ ಮೂರು ಪ್ರಮುಖ ಕ್ಯಾಚ್‌ಗಳನ್ನು ಕೈಬಿಟ್ಟರು.
- ಅರ್ಷದೀಪ್ ಸಿಂಗ್ ಅವರ ಬೌಲಿಂಗ್‌ನಲ್ಲಿ ಇಶಾನ್ ಕಿಶನ್ ಸುಲಭ ಕ್ಯಾಚ್ ಕೈಚೆಲ್ಲಿದ್ದರು.
- ಮಾರ್ಕ್ ಚಾಪ್ಮನ್ ನೀಡಿದ ಸುಲಭ ಕ್ಯಾಚ್ ಹಿಡಿಯುವಲ್ಲಿ ರಿಂಕು ಸಿಂಗ್ ವಿಫಲರಾಗಿದ್ದರು.
- ಅಕ್ಷರ್ ಪಟೇಲ್ ಕೂಡ ಗ್ಲೆನ್ ಫಿಲಿಪ್ಸ್ ನೀಡಿದ ಕ್ಯಾಚ್ ಕೈಚೆಲ್ಲಿದ್ದರು.
ಇದರ ಜೊತೆಗೆ ಸಂಜು ಸ್ಯಾಮ್ಸನ್ ಕಳಪೆ ವಿಕೆಟ್ ಕೀಪಿಂಗ್ ಪ್ರದರ್ಶಿಸಿದ್ದಾರೆ. ಅದರಲ್ಲೂ ಅತ್ಯಂತ ಸುಲಭವಾಗಿ ಮಾಡಬಹುದಾಗಿದ್ದ ರನೌಟ್ ತಪ್ಪಿಸಿಕೊಂಡಿದ್ದು ಅಚ್ಚರಿಗೆ ಕಾರಣವಾಗಿತ್ತು.
- ನ್ಯೂಝಿಲೆಂಡ್ ಇನಿಂಗ್ಸ್ನ 10ನೇ ಓವರ್ನಲ್ಲಿ ಗ್ಲೆನ್ ಫಿಲಿಪ್ಸ್ ಭರ್ಜರಿ ಹೊಡೆತ ಬಾರಿಸಿದ್ದರು. ಅತ್ತ ಬೌಂಡರಿಯಿಂದ ರಿಂಕು ಸಿಂಗ್ ವೇಗವಾಗಿ ಚೆಂಡನ್ನು ವಿಕೆಟ್ ಕೀಪರ್ನತ್ತ ಎಸೆದಿದ್ದರು. ಈ ವೇಳೆ ಎರಡನೇ ರನ್ಗಾಗಿ ಓಡುತ್ತಿದ್ದ ಗ್ಲೆನ್ ಫಿಲಿಪ್ಸ್ ಅವರನ್ನು ರನೌಟ್ ಮಾಡುವ ಅವಕಾಶ ಸಂಜು ಸ್ಯಾಮ್ಸನ್ಗಿತ್ತು. ಆದರೆ ಚೆಂಡು ಹಿಡಿಯಲು ತಡಕಾಡುವ ಮೂಲಕ ಸ್ಯಾಮ್ಸನ್ ಸುಲಭವಾಗಿ ರನೌಟ್ ಮಾಡುವ ಅವಕಾಶವನ್ನು ಕೈಚೆಲ್ಲಿಕೊಂಡರು.
ಹೀಗೆ ನಾಲ್ಕು ಅವಕಾಶಗಳನ್ನು ಕೈಚೆಲ್ಲಿದರ ಪರಿಣಾಯ ನ್ಯೂಝಿಲೆಂಡ್ ತಂಡವು 20 ಓವರ್‌ಗಳಲ್ಲಿ 190 ರನ್ ಗಳಿಸಿತು. ಮುಂಬರುವ ಟಿ20 ವಿಶ್ವಕಪ್ ಹಿನ್ನಲೆಯಲ್ಲಿ ಟೀಮ್ ಇಂಡಿಯಾದ ಈ ಕಳಪೆ ಪ್ರದರ್ಶನವು ಚಿಂತೆಗೆ ಕಾರಣವಾಗಿದೆ.
ಏಕೆಂದರೆ ಈ ಸರಣಿಯ ಬಳಿಕ ಭಾರತ ತಂಡವು ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯಲಿದೆ. ಅದಕ್ಕೂ ಮುನ್ನ ಒಂದೇ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರು 4 ಅವಕಾಶಗಳನ್ನು ಕೈಚೆಲ್ಲಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಅಭಿಷೇಕ್ ಶರ್ಮಾ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್
ಒಟ್ಟಾರೆಯಾಗಿ, ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರೂ, ಫೀಲ್ಡಿಂಗ್‌ನಲ್ಲಿ ಮಾಡಿದ ತಪ್ಪುಗಳು ಭಾರತೀಯ ತಂಡಕ್ಕೆ ಮುಂದಿನ ಪಂದ್ಯಗಳಿಗೆ ಎಚ್ಚರಿಕೆಯ ಗಂಟೆಯಾಗಿವೆ.
