Breaking: ಶಿಖರ್, ಋತುರಾಜ್, ಶ್ರೇಯಸ್ ಸೇರಿ 8 ಮಂದಿಗೆ ಕೊವಿಡ್ ಪಾಸಿಟಿವ್; ವೆಸ್ಟ್ ಇಂಡೀಸ್ ಸರಣಿಯ ಭವಿಷ್ಯವೇನು?
Ruturaj Gaikwad | Shreyas Iyer: ಭಾರತ ತಂಡದ 8 ಮಂದಿಗೆ ಕೊರೊನಾ ಪಾಸಿಟಿವ್ ಆಗಿದೆ. ಇದರಲ್ಲಿ ಭಾರತ ತಂಡದ ಅನುಭವಿ ಆಟಗಾರ ಶಿಖರ್ ಧವನ್ ಕೂಡ ಸೇರಿದ್ದಾರೆ.

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಕ್ರಿಕೆಟ್ ಸರಣಿ ಮುಂದೂಡಲ್ಪಡುವ ಆತಂಕ ಎದುರಾಗಿದೆ. ಕಾರಣ, ಭಾರತ ತಂಡದ ಬ್ಯಾಟರ್ಗಳಾದ ಶಿಖರ್ ಧವನ್ (Shikhar Dhawan), ಋತುರಾಜ್ ಗಾಯಕ್ವಾಡ್ (Ruturaj Gaikwad) ಹಾಗೂ ಶ್ರೇಯಸ್ ಐಯ್ಯರ್ (Shreyas Iyer) ಕೊವಿಡ್ ಸೋಂಕಿಗೆ ತುತ್ತಾಗಿದ್ದಾರೆ. ತಂಡದ ಒಟ್ಟು 8 ಮಂದಿಗೆ ಕೊವಿಡ್ ಸೋಂಕು ತಗುಲಿದೆ. ಈ ಕುರಿತು ಸ್ಪೋರ್ಟ್ಸ್ಸ್ಟಾರ್ ವರದಿ ಮಾಡಿದೆ. ಪ್ರಸ್ತುತ ಗುಜರಾತ್ನ ಅಹಮದಾಬಾದ್‌ನಲ್ಲಿ ಟೀಂ ಇಂಡಿಯಾ ಆಟಗಾರರಿದ್ದಾರೆ. ಭಾರತ ತಂಡದ ಆಟಗಾರರು ಸೋಮವಾರ ಮೂರು ಏಕದಿನ ಪಂದ್ಯಗಳಲ್ಲಿ ಭಾಗವಹಿಸಲು ಅಹಮದಾಬಾದ್‌ಗೆ ತಲುಪಿದ್ದರು. ಆಗಮನದ ನಂತರ ಕೊವಿಡ್ ಪರೀಕ್ಷೆ ನಡೆಸಲಾಗಿದ್ದು, ಕೆಲ ಆಟಗಾರರಿಗೆ ಸೋಂಕು ಕಾಣಿಸಿಕೊಂಡಿದೆ. ಬಿಸಿಸಿಐ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ಶೀಘ್ರದಲ್ಲೇ ಬದಲಿ ಆಟಗಾರರನ್ನು ಪ್ರಕಟಿಸಲಿದೆ. ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಮತ್ತು 3 ಟಿ20 ಪಂದ್ಯ ಆಡಲಿದೆ. ಫೆ.6ರಂದು ಅಹಮದಾಬಾದ್‌ನಲ್ಲಿ ಏಕದಿನ ಸರಣಿ ಆರಂಭವಾಗಲಿದೆ. ಇದೀಗ ಕೊರೊನಾ ಕಾಣಿಸಿಕೊಂಡಿರುವುದರಿಂದ ಸರಣಿಯ ದಿನಾಂಕದ ಬಗ್ಗೆ ಬಿಸಿಸಿಐ ಅಧಿಕೃತ ಸ್ಪಷ್ಟನೆ ನೀಡಬೇಕಿದೆ.
ಆಟಗಾರರಿಗೆ ಕೊವಿಡ್ ಕಾಣಿಸಿಕೊಂಡ ಕುರಿತು ಬಿಸಿಸಿಐ ಎಎನ್ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದು, ‘ಕೆಲವು ಆಟಗಾರರು ಹಾಗೂ ತಂಡದ ಸಹಾಯಕ ಸಿಬ್ಬಂದಿಗಳಿಗೆ ಕೊರೊನಾ ದೃಢಪಟ್ಟಿದೆ. ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ’ ಎಂದು ತಿಳಿಸಿದೆ. ಈ ಕುರಿತು ಬಿಸಿಸಿಐ ಖಜಾಂಚಿ ಅರುಣ್ ಕುಮಾರ್ ಧಮಾಲ್ ಹೇಳಿಕೆ ನೀಡಿದ್ದಾರೆ.
ಎಎನ್ಐ ಹಂಚಿಕೊಂಡ ಟ್ವೀಟ್ ಇಲ್ಲಿದೆ:
It has been brought to the notice that some players and some support staff have tested positive for #COVID19…BCCI is watching the situation: Arun Kumar Dhumal, BCCI Treasurer to ANI
— ANI (@ANI) February 2, 2022
ಈ ಹಿಂದೆ ಫೆಬ್ರವರಿ 6ರಂದು ಏಕದಿನ ಸರಣಿಯ ಆರಂಭ ಹಾಗೂ ಫೆಬ್ರವರಿ 16ರಂದು ಟಿ20 ರಣಿಯ ಆರಂಭ ಎಂದು ಘೋಷಿಸಲಾಗಿತ್ತು. ಇದೀಗ ಬದಲಾದ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಬದಲಿ ಆಟಗಾರರನ್ನು ಕಣಕ್ಕಿಳಿಸಲಿದೆಯೇ ಅಥವಾ ಸರಣಿಯನ್ನು ಕೆಲ ದಿನ ಮುಂದೂಡಲಿದೆಯೇ ಎಂಬುದರ ಕುರಿತು ಇನ್ನಷ್ಟೇ ಅಧಿಕೃತ ಮಾಹಿತಿ ಬರಬೇಕಿದೆ.
ಇದನ್ನೂ ಓದಿ:
IND vs WI: ಈ ಬಾರಿ ಟೀಮ್ ಇಂಡಿಯಾಗೆ ಕಠಿಣ ಸವಾಲು: ವೆಸ್ಟ್ ಇಂಡೀಸ್ ಈ ಹಿಂದಿಗಿಂತಲೂ ಡೇಂಜರಸ್..!
ವೆಸ್ಟ್ ಇಂಡೀಸ್ ತಂಡದಲ್ಲಿ ಒಡಕು: ಟೀಮ್ ಇಂಡಿಯಾ ಸರಣಿಗೂ ಮುನ್ನ ಹೊಸ ಚಿಂತೆ ಶುರು
Published On - 9:39 pm, Wed, 2 February 22