ಕೊಹ್ಲಿ, ದ್ರಾವಿಡ್ ಅಲ್ಲ! ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್​ನ ಹೆಸರಿಸಿದ ಅಖ್ತರ್!

ವಿರಾಟ್ ಕೊಹ್ಲಿ ಅಲ್ಲವೇ ಅಲ್ಲ! ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಯಾರು ಎಂಬ ಚರ್ಚೆಗೆ ಪಾಕಿಸ್ತಾನದ ಮಾಜಿ ರಾವಲ್ಪಿಂಡಿ ಎಕ್ಸ್‌ಪ್ರೆಸ್ ಶೊಯೆಬ್ ಅಖ್ತರ್ ಕೊನೆಗೂ ಫುಲ್‌ಸ್ಟಾಪ್ ಇಟ್ಟಿದ್ದಾರೆ. ಸದ್ಯ ಜಗತ್ತಿನಾದ್ಯಂತ ವಿರಾಟ್ ಕೊಹ್ಲಿ ಅವರದ್ದೇ ಹವಾ ಇದ್ದರೂ, ಅಖ್ತರ್ ಮಾತ್ರ ಮಾಜಿ ಬ್ಯಾಟರ್​ನನ್ನು ಕ್ರಿಕೆಟ್ ಹಿಸ್ಟರಿಯ ನಂಬರ್ 1 ಬ್ಯಾಟ್ಸ್‌ಮನ್ ಎಂದು ಘೋಷಿಸಿದ್ದಾರೆ.

ಕೊಹ್ಲಿ, ದ್ರಾವಿಡ್ ಅಲ್ಲ! ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್​ನ ಹೆಸರಿಸಿದ ಅಖ್ತರ್!
Shoaib Akhtar
Image Credit source: GettyImages

Updated on: Aug 16, 2026 | 9:58 AM

ಕ್ರಿಕೆಟ್ ಜಗತ್ತಿನಲ್ಲಿ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ (GOAT) ಯಾರು ಎಂಬ ಚರ್ಚೆ ಇನ್ನೂ ಮುಂದುವರಿದಿದೆ. ಈ ಚರ್ಚೆಯ ನಡುವೆ ಪಾಕಿಸ್ತಾನದ ಮಾಜಿ ವೇಗಿ, ‘ರಾವಲ್ಪಿಂಡಿ ಎಕ್ಸ್‌ಪ್ರೆಸ್’ ಖ್ಯಾತಿಯ ಶೊಯೆಬ್ ಅಖ್ತರ್ “ಸರ್ವ ಶ್ರೇಷ್ಠ ಬ್ಯಾಟ್ಸ್‌ಮನ್” ಯಾರೆಂಬುದನ್ನು ತಿಳಿಸಿದ್ದಾರೆ.

ಶೊಯೆಬ್ ಅಖ್ತರ್ ಅವರ ಪ್ರಕಾರ, ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರೇ ಕ್ರಿಕೆಟ್ ಜಗತ್ತು ಕಂಡ ಗ್ರೇಟೆಸ್ಟ್​ ಬ್ಯಾಟ್ಸ್​ಮನ್. ಹೀಗಾಗಿಯೇ ಸಚಿನ್ ತೆಂಡೂಲ್ಕರ್ ಅವರನ್ನು ಅಖ್ತರ್ ಗ್ರೇಟೆಸ್ಟ್​ ಆಫ್ ಆಲ್ ಟೈಮ್ (GOAT) ಎಂದು ಬಣ್ಣಿಸಿದ್ದಾರೆ.

ಕೊಹ್ಲಿಗಿಂತ ಸಚಿನ್ ಯಾಕೆ ಶ್ರೇಷ್ಠ?

ವಿರಾಟ್ ಕೊಹ್ಲಿ ಅವರ ಆಟ, ಫಿಟ್‌ನೆಸ್ ಹಾಗೂ ಆಕ್ರಮಣಕಾರಿ ಶೈಲಿಯನ್ನು ಶೊಯೆಬ್ ಅಖ್ತರ್ ಸದಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಆದರೆ, ಸಚಿನ್ ತೆಂಡೂಲ್ಕರ್ ಅವರ ಸ್ಥಾನವನ್ನು ಯಾರೂ ತಲುಪಲು ಸಾಧ್ಯವಿಲ್ಲ ಎನ್ನುವುದಕ್ಕೆ ಅಖ್ತರ್ ಕೆಲವು ಪ್ರಮುಖ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ.

ಸಚಿನ್ ತೆಂಡೂಲ್ಕರ್ ತಮ್ಮ 24 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಶೊಯೆಬ್ ಅಖ್ತರ್, ವಾಸಿಂ ಅಕ್ರಮ್, ಗ್ಲೆನ್ ಮೆಕ್‌ಗ್ರಾತ್, ಶೇನ್ ವಾರ್ನ್ ಮತ್ತು ಕರ್ಟ್ಲಿ ಆಂಬ್ರೋಸ್ ಅವರಂತಹ ಜಗತ್ತಿನ ಅತ್ಯಂತ ಭೀಕರ ಹಾಗೂ ಮಾರಕ ಬೌಲರ್‌ಗಳನ್ನು ಎದುರಿಸಿ ರನ್ ಗಳಿಸಿದ್ದಾರೆ. ಆದರೆ ಇಂದಿನ ಯುಗದಲ್ಲಿ ಅಂತಹ ಗುಣಮಟ್ಟದ ಬೌಲಿಂಗ್ ಕೊರತೆಯಿದೆ ಎಂದು ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.

ಹಾಗೆಯೇ  ಸಚಿನ್ ಆಡುತ್ತಿದ್ದ ಕಾಲದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಒಂದೇ ಚೆಂಡನ್ನು ಬಳಸಲಾಗುತ್ತಿತ್ತು. ಇದರಿಂದ ಬೌಲರ್‌ಗಳಿಗೆ ರಿವರ್ಸ್ ಸ್ವಿಂಗ್ ಮಾಡಲು ಸುಲಭವಾಗುತ್ತಿತ್ತು ಮತ್ತು ಬೌಂಡರಿ ಗೆರೆಗಳು ದೊಡ್ಡದಾಗಿದ್ದವು. ಆದರೆ ಇಂದಿನ ನಿಯಮಗಳು ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಪೂರಕವಾಗಿವೆ (ಎರಡು ಹೊಸ ಚೆಂಡುಗಳು, ಪವರ್‌ಪ್ಲೇ ನಿಯಮಗಳು). ಹೀಗಾಗಿ ಇಂದಿನ ಕಾಲದಲ್ಲಿ ರನ್ ಗಳಿಸುವುದು ಸಚಿನ್ ಕಾಲಕ್ಕಿಂತ ಸುಲಭವಾಗಿದೆ ಎಂಬುದು ಅಖ್ತರ್ ವಾದ.

ಇನ್ನು ಭಾರತದಲ್ಲಿ ಕ್ರಿಕೆಟ್ ಅನ್ನು ಧರ್ಮದಂತೆ ನೋಡುವ ಕಾಲದಲ್ಲಿ, ನೂರು ಕೋಟಿಗೂ ಅಧಿಕ ಜನರ ನಿರೀಕ್ಷೆಯ ಭಾರವನ್ನು ಹೆಗಲ ಮೇಲೆ ಹೊತ್ತು ಸಚಿನ್ 100 ಅಂತರರಾಷ್ಟ್ರೀಯ ಶತಕಗಳನ್ನು ಹಾಗೂ 34,000ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ. ಈ ಸಾಧನೆ ನಿಜಕ್ಕೂ ಅಪ್ರತಿಮ ಎನ್ನುತ್ತಾರೆ ಶೊಯೆಬ್ ಅಖ್ತರ್.

ಈ ಎಲ್ಲಾ ಕಾರಣಗಳಿಂದಾಗಿಯೇ ವಿರಾಟ್ ಕೊಹ್ಲಿಗಿಂತ ಸಚಿನ್ ತೆಂಡೂಲ್ಕರ್ ಶ್ರೇಷ್ಠ. ಹೀಗಾಗಿಯೇ ನಾನು ಸಚಿನ್ ತೆಂಡೂಲ್ಕರ್ ಅವರನ್ನು ಅಖ್ತರ್ ಗ್ರೇಟೆಸ್ಟ್​ ಆಫ್ ಆಲ್ ಟೈಮ್ (GOAT) ಎಂದು ಪರಿಗಣಿಸುತ್ತೇನೆ ಎಂದು ಶೊಯೆಬ್ ಅಖ್ತರ್ ತಿಳಿಸಿದ್ದಾರೆ.

ಕೊಹ್ಲಿಗೂ ಗೌರವ!

ಸಚಿನ್ ಅವರನ್ನು ಮೊದಲ ಸ್ಥಾನದಲ್ಲಿರಿಸಿದರೂ, ವಿರಾಟ್ ಕೊಹ್ಲಿ ಸಾಧನೆಯನ್ನು ಅಖ್ತರ್ ಎಲ್ಲೂ ಕಡೆಗಣಿಸಿಲ್ಲ. ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡು ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾಗಲೂ ಅಖ್ತರ್ ಅವರ ಬೆನ್ನಿಗೆ ನಿಂತಿದ್ದರು. ಅಷ್ಟೇ ಅಲ್ಲದೆ, ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನ ಮುಗಿಸುವ ಮುನ್ನ ಸಚಿನ್ ತೆಂಡೂಲ್ಕರ್ ಅವರ 100 ಶತಕಗಳ ದಾಖಲೆಯನ್ನು ಮುರಿಯಬೇಕು ಎಂಬುದು ತನ್ನ ಆಸೆ ಎಂದು ಅಖ್ತರ್ ಹೇಳಿದ್ದಾರೆ.

ಇದನ್ನೂ ಓದಿ: ದ್ರಾವಿಡ್ ‘ಗೋಡೆ’ಗೆ ಹೊಸ ವಾರಸುದಾರ: ಗಾಲೆಯಲ್ಲಿ ಪಡಿಕ್ಕಲ್ ಹೊಸ ಇತಿಹಾಸ!

ಒಟ್ಟಾರೆಯಾಗಿ ಹೇಳುವುದಾದರೆ, ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ತಮ್ಮದೇ ಆದ ಯುಗದಲ್ಲಿ ಕ್ರಿಕೆಟ್ ಜಗತ್ತನ್ನು ಆಳಿದ ಧ್ರುವತಾರೆಗಳು. ಬದಲಾದ ನಿಯಮಗಳು ಮತ್ತು ಇಂದಿನ ಬ್ಯಾಟಿಂಗ್ ಸ್ನೇಹಿ ಪಿಚ್‌ಗಳ ನಡುವೆಯೂ ಕೊಹ್ಲಿ ದಾಖಲೆಗಳ ಶಿಖರ ಏರುತ್ತಿದ್ದಾರೆ. ಆದರೆ, ಶೊಯೆಬ್ ಅಖ್ತರ್ ಸೇರಿದಂತೆ ಹಲವು ಮಾಜಿ ದಂತಕಥೆಗಳ ಪ್ರಕಾರ, ಕಠಿಣ ಪರಿಸ್ಥಿತಿ ಹಾಗೂ ಮಾರಕ ಬೌಲಿಂಗ್‌ ಎದುರಿಸಿ ಅಧಿಪತ್ಯ ಸ್ಥಾಪಿಸಿದ ಸಚಿನ್ ಅವರೇ ಎಂದಿಗೂ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್​ಮನ್.

 

Loading...
Unable to load recommendations.
Follow Us