ಬುದ್ಧಿನೇ ಇಲ್ಲ… ಯಾರಪ್ಪ ಇವರನ್ನ ಕೋಚ್ ಮಾಡಿದ್ದು? ಶೊಯೆಬ್ ಅಖ್ತರ್ ವಾಗ್ದಾಳಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಿರ್ದೇಶಕ ಮೈಕ್ ಹೆಸ್ಸನ್ ಪ್ರಸ್ತುತ ಪಾಕಿಸ್ತಾನ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಹೆಸ್ಸನ್ ಮುಂದಾಳತ್ವದಲ್ಲಿ ಏಷ್ಯಾಕಪ್ನಲ್ಲಿ ಕಣಕ್ಕಿಳಿದಿರುವ ಪಾಕಿಸ್ತಾನ್ ತಂಡವು ಕಳಪೆ ಪ್ರದರ್ಶನ ನೀಡಿದೆ. ಹೀಗಾಗಿಯೇ ಇದೀಗ ಮೈಕ್ ಹೆಸ್ಸನ್ ವಿರುದ್ಧ ಆಕ್ರೋಶಗಳು ಕೇಳಿ ಬರುತ್ತಿದೆ.

ಏಷ್ಯಾಕಪ್ 2025 ರಲ್ಲಿ ಪಾಕಿಸ್ತಾನ್ ತಂಡವು ಎರಡು ಬಾರಿ ಭಾರತದ ವಿರುದ್ಧ ಸೋತಿದೆ. ಈ ಎರಡೂ ಪಂದ್ಯಗಳನ್ನು ಟೀಮ್ ಇಂಡಿಯಾ ಏಕಪಕ್ಷೀಯವಾಗಿ ಗೆದ್ದುಕೊಂಡಿದೆ. ಈ ಗೆಲುವುಗಳ ಬೆನ್ನಲ್ಲೇ ಇದೀಗ ಪಾಕಿಸ್ತಾನ್ ತಂಡದ ಕೋಚ್ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಪಾಕ್ ತಂಡದ ಮಾಜಿ ವೇಗಿ ಶೊಯೆಬ್ ಅಖ್ತರ್ ಲೈವ್ ಚರ್ಚೆಯಲ್ಲೇ ಪಾಕಿಸ್ತಾನ್ ತಂಡದ ಕೋಚ್ ಮೈಕ್ ಹೆಸ್ಸನ್ ವಿರುದ್ಧ ಹರಿಹಾಯ್ದಿದ್ದಾರೆ.
ಟೀಮ್ ಇಂಡಿಯಾ ವಿರುದ್ಧದ ಸೋಲುಗಳನ್ನು ವಿಶ್ಲೇಷಿಸಿದ ಶೊಯೆಬ್ ಅಖ್ತರ್, ಪಾಕ್ ತಂಡದ ಕೋಚ್ ಮೈಕ್ ಹೆಸ್ಸನ್ ಅತೀ ದೊಡ್ಡ ಅವಿವೇಕಿ ಎಂದು ಜರಿದಿದ್ದಾರೆ. ಅವರಿಗೆ ಯಾರನ್ನು ಆಡಿಸಬೇಕು? ಯಾವಾಗ ಕಣಕ್ಕಿಳಿಸಬೇಕು ಎಂಬುದೇ ಗೊತ್ತಿಲ್ಲ.
ಏಕೆಂದರೆ ಭಾರತದಂತಹ ಪ್ರಮುಖ ತಂಡದ ವಿರುದ್ಧ ಅನಾನುಭವಿ ಹುಸೈನ್ ತಲಾತ್ ಅವರನ್ನು ಕಣಕ್ಕಿಳಿಸಬೇಕಾದ ಅಗತ್ಯವಿತ್ತೇ? ಅವರಿಗೆ ಅಷ್ಟೂ ಸಹ ಬುದ್ದಿ ಇಲ್ವಾ? ಇದು ಅರ್ಥಹೀನ ಆಯ್ಕೆ. ಅಲ್ಲದೆ ಮೈಕ್ ಹೆಸ್ಸನ್ ಅರ್ಥಹೀನ ತರಬೇತಿ ನೀಡುತ್ತಿದ್ದಾರೆ ಎಂದು ಶೊಯೆಬ್ ಅಖ್ತರ್ ಕಟುವಾಗಿ ಟೀಕಿಸಿದ್ದಾರೆ.
ಇಲ್ಲಿ ನಾಯಕ ಕೂಡ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು. ಆದರೆ ನಾಯಕನ ಹಿಂದಿರುವುದು ಮೈಕ್ ಹೆಸ್ಸನ್. ಯಾರಪ್ಪ ಇವರನ್ನ ಕೋಚ್ ಮಾಡಿದ್ದು? ಏನು ನೋಡಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹೆಸ್ಸನ್ ಅವರನ್ನು ಮುಖ್ಯ ಕೋಚ್ ಆಗಿ ಆಯ್ಕೆ ಮಾಡಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಶೊಯೆಬ್ ಅಖ್ತರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫೈನಲ್ ರೇಸ್ನಲ್ಲಿ ಪಾಕ್ ಪಡೆ:
ಟೀಮ್ ಇಂಡಿಯಾ ವಿರುದ್ಧದ ಸೋಲಿನ ಹೊರತಾಗಿಯೂ ಪಾಕಿಸ್ತಾನ್ ತಂಡ ಏಷ್ಯಾಕಪ್ ಫೈನಲ್ ರೇಸ್ನಲ್ಲಿ ಉಳಿದುಕೊಂಡಿದೆ. ಶ್ರೀಲಂಕಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ 5 ವಿಕೆಟ್ಗಳ ಗೆಲುವು ದಾಖಲಿಸುವ ಮೂಲಕ ಪಾಕಿಸ್ತಾನ್ ತಂಡ ಸೂಪರ್-4 ಪಾಯಿಂಟ್ಸ್ ಟೇಬಲ್ನಲ್ಲಿ ಅಂಕಗಳ ಖಾತೆ ತೆರೆದಿದೆ.
ಅಲ್ಲದೆ ಇದೀಗ ಪಾಯಿಂಟ್ಸ್ ಟೇಬಲ್ನಲ್ಲಿ ದ್ವಿತೀಯ ಸ್ಥಾನದಲ್ಲಿರುವ ಪಾಕಿಸ್ತಾನ್ ತಂಡವು ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವನ್ನು ಸೋಲಿಸಿದರೆ ಫೈನಲ್ಗೆ ಎಂಟ್ರಿ ಕೊಡಬಹುದು.
ಇದನ್ನೂ ಓದಿ: ಬರೋಬ್ಬರಿ 1.06 ಕೋಟಿ ರೂ. ಮೂಲ ಬೆಲೆ ಘೋಷಿಸಿದ ಅಶ್ವಿನ್
ಏಕೆಂದರೆ ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಬಹುತೇಕ ನಿಶ್ಚಿತ. ಅದರಂತೆ ತನ್ನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ಗೆದ್ದರೆ ಪಾಕಿಸ್ತಾನ್ ತಂಡವು 4 ಅಂಕಗಳೊಂದಿಗೆ ಫೈನಲ್ಗೆ ಅರ್ಹತೆ ಪಡೆಯಲಿದೆ. ಹೀಗಾದಲ್ಲಿ ಸೆಪ್ಟೆಂಬರ್ 28 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗುವ ಸಾಧ್ಯತೆಯಿದೆ.
Published On - 10:54 am, Wed, 24 September 25
