USA ತಂಡವನ್ನು ಅಮಾನತುಗೊಳಿಸಿದ ICC
USA Cricket Board Suspended: ಕ್ರಿಕೆಟ್ ಅಂಗಳದಲ್ಲಿ ಅಂಬೆಗಾಲಿಡುತ್ತಿರುವ ಯುನೈಟೆಡ್ ಸ್ಟೇಟ್ಸ್ ಆಫ್ (ಯುಎಸ್ಎ) ತಂಡವು ಕಳೆದ ಟಿ20 ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನದೊಂದಿಗೆ ಗಮನ ಸೆಳೆದಿದ್ದರು. ಈ ಪ್ರದರ್ಶನದೊಂದಿಗೆ ಸೂಪರ್-8 ಹಂತಕ್ಕೇರಿದ್ದ ಯುಎಸ್ಎ 2026 ರಲ್ಲಿ ನಡೆಯುವ ಟಿ20 ವಿಶ್ವಕಪ್ಗೆ ನೇರ ಅರ್ಹತೆ ಪಡೆದುಕೊಂಡಿದ್ದರು.

2024ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧದ ಭರ್ಜರಿ ಜಯದೊಂದಿಗೆ ಅಭಿಯಾನವನ್ನು ಆರಂಭಿಸಿದ್ದ ಯುಎಸ್ಎ ತಂಡಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಘಾತ ನೀಡಿದೆ. ಯುಎಸ್ಎ ಮಂಡಳಿಯ ಸದಸ್ಯತ್ವವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಐಸಿಸಿ ಅಮಾನತುಗೊಳಿಸಿದೆ. ಸೆಪ್ಟೆಂಬರ್ 23 ರಂದು ನಡೆದ ವರ್ಚುವಲ್ ಮಂಡಳಿ ಸಭೆಯಲ್ಲಿ ಐಸಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಕ್ರಮದ ಹೊರತಾಗಿಯೂ, ತಂಡವು ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಬಹುದು ಎಂದು ಐಸಿಸಿ ತಿಳಿಸಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನ ಈ ನಿರ್ಧಾರವು ಯುಎಸ್ಎ ಕ್ರಿಕೆಟ್‌ನಲ್ಲಿ ಪ್ರಮುಖ ಬದಲಾವಣೆಗಳಿಗೆ ಕಾರಣವಾಗಬಹುದು.
ಐಸಿಸಿ ಕ್ರಮ ಕೈಗೊಂಡಿದ್ದೇಕೆ?
ವರದಿಗಳ ಪ್ರಕಾರ, ಐಸಿಸಿ ಸದಸ್ಯನಾಗಿ ತನ್ನ ಬಾಧ್ಯತೆಗಳನ್ನು ಪದೇ ಪದೇ ಉಲ್ಲಂಘಿಸಿದ್ದಕ್ಕಾಗಿ ಯುಎಸ್ಎ ಕ್ರಿಕೆಟ್ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಈ ಕ್ರಮ ಕೈಗೊಂಡಿದೆ . ಆದಾಗ್ಯೂ, ಐಸಿಸಿ ಯುಎಸ್ಎ ತಂಡಕ್ಕೆ ತನ್ನ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಅವಕಾಶ ನೀಡಿದೆ.
ಐಸಿಸಿ ಕೆಲವು ಸಮಯದಿಂದ ಯುಎಸ್ಎ ಕ್ರಿಕೆಟ್ ಬಗ್ಗೆ ಹಲವಾರು ದೂರುಗಳನ್ನು ಸ್ವೀಕರಿಸುತ್ತಿದೆ. ಕಳೆದ ವರ್ಷ ಶ್ರೀಲಂಕಾದಲ್ಲಿ ನಡೆದ ವಾರ್ಷಿಕ ಸಮ್ಮೇಳನದಲ್ಲಿ ಐಸಿಸಿ ಯುಎಸ್ಎ ಕ್ರಿಕೆಟ್ ಮಂಡಳಿಗೆ ನೋಟಿಸ್ ಕಳುಹಿಸಿದಾಗ ಈ ವಿಷಯ ಬಹಿರಂಗಗೊಂಡಿತ್ತು.
ಈ ವರ್ಷ ಸಿಂಗಾಪುರದಲ್ಲಿ ನಡೆದ ಸಭೆಯಲ್ಲಿ, ಐಸಿಸಿ ಯುಎಸ್ಎ ಕ್ರಿಕೆಟ್‌ಗೆ ಸರಿಯಾದ ರಚನೆಯನ್ನು ಸ್ಥಾಪಿಸಲು ಮೂರು ತಿಂಗಳ ಕಾಲಾವಕಾಶ ನೀಡಿತು. ಇದಾಗ್ಯೂ ಯುಎಸ್ಎ ಕ್ರಿಕೆಟ್ ಬೋರ್ಡ್ನಿಂದ ಸೂಕ್ತ ಉತ್ತರ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಯುಎಸ್ಎ ತಂಡವನ್ನು ಅಮಾನತುಗೊಳಿಸಲು ಐಸಿಸಿ ನಿರ್ಧರಿಸಿದೆ.
ಅಮಾನತು ಏಕೆ?
ಯುಎಸ್ಎ ಕ್ರಿಕೆಟ್ ದೀರ್ಘಕಾಲದ ಆಡಳಿತಾತ್ಮಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ನಾಯಕತ್ವ ಬದಲಾವಣೆಗೆ ಒತ್ತಾಯಿಸಿದ ಐಸಿಸಿ ಮತ್ತು ಯುನೈಟೆಡ್ ಸ್ಟೇಟ್ಸ್ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಸಮಿತಿ (USOPC) ಎರಡರ ನಿರ್ದೇಶನಗಳನ್ನು ಮಂಡಳಿಯ ಅಧ್ಯಕ್ಷ ವೇಣು ಪಿಸಿಕೆ ವಿರೋಧಿಸಿದರು. ಟಿ20 ವಿಶ್ವಕಪ್ ನಂತರ ಕಳೆದ ವರ್ಷ ಜುಲೈನಲ್ಲಿ ಯುಎಸ್ಎ ಕ್ರಿಕೆಟ್ ಮಂಡಳಿಗೆ ಈ ಕುರಿತು ನೋಟಿಸ್ ಕಳುಹಿಸಲಾಗಿತ್ತು .
ಒಂದು ವರ್ಷದೊಳಗೆ ಸುಧಾರಣೆಗಳನ್ನು ಮಾಡಬೇಕೆಂದು ಐಸಿಸಿ ಯುಎಸ್ಎ ಕ್ರಿಕೆಟ್ ಮಂಡಳಿಯನ್ನು ಕೇಳಿಕೊಂಡಿತ್ತು, ಆದರೆ ಗಡುವಿನ ನಂತರವೂ ಯುಎಸ್ಎ ಕ್ರಿಕೆಟ್ ಯಾವುದೇ ಸುಧಾರಣೆಯನ್ನು ತೋರಿಸಲಿಲ್ಲ. ಪರಿಣಾಮವಾಗಿ, ಐಸಿಸಿ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.
ಜುಲೈ 19 ರಂದು ಸಿಂಗಾಪುರದಲ್ಲಿ ನಡೆದ ಐಸಿಸಿ ಮಂಡಳಿಯ ಸಭೆಯಲ್ಲಿ, ಯುಎಸ್ಎ ಕ್ರಿಕೆಟ್‌ಗೆ ಇನ್ನೂ ಮೂರು ತಿಂಗಳುಗಳ ಕಾಲಾವಕಾಶ ನೀಡಲಾಯಿತು. ಆದರೆ ಯುಎಸ್ಎ ಕ್ರಿಕೆಟ್ ಮಂಡಳಿಯು ತನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಹೀಗಾಗಿ ಯುಎಸ್ಎ ಕ್ರಿಕೆಟ್ ಬೋರ್ಡ್ ವಿರುದ್ಧ ಐಸಿಸಿ ಕ್ರಮ ಕೈಗೊಂಡಿದೆ.
ಕಣಕ್ಕಿಳಿಯಲು ಅವಕಾಶ:
ಯುಎಸ್ಎ ಕ್ರಿಕೆಟ್ ಬೋರ್ಡ್ನ ಬಿಕ್ಕಟ್ಟಿನ ಹೊರತಾಗಿಯೂ ಯುಎಸ್ಎ ತಂಡಕ್ಕೆ ಮುಂದಿನ ಟಿ20 ವಿಶ್ವಕಪ್ ಆಡಲು ಐಸಿಸಿ ಅವಕಾಶ ನೀಡಿದೆ. ಈ ಸಮಸ್ಯೆ ಎದುರಾಗುವ ಮುನ್ನ ಯುಎಸ್ಎ ತಂಡ ಟಿ20 ವಿಶ್ವಕಪ್ಗೆ ಅರ್ಹತೆ ಪಡೆದಿರುವ ಕಾರಣ ಅಮಾನತಿನ ಹೊರತಾಗಿಯೂ ಐಸಿಸಿ ಟೂರ್ನಿಯಲ್ಲಿ ಕಣಕ್ಕಿಳಿಯುವ ಅವಕಾಶವನ್ನು ಮುಂದುವರೆಸಿದೆ.
ಇದನ್ನೂ ಓದಿ: ಬರೋಬ್ಬರಿ 1.06 ಕೋಟಿ ರೂ. ಮೂಲ ಬೆಲೆ ಘೋಷಿಸಿದ ಅಶ್ವಿನ್
ಒಂದು ವೇಳೆ ಐಸಿಸಿ ಅಮಾನತಿನ ಹೊರತಾಗಿಯೂ ಯುಎಸ್ಎ ಕ್ರಿಕೆಟ್ ಬೋರ್ಡ್ನಲ್ಲಿ ಸುಧಾರಣೆ ಕಂಡು ಬರದಿದ್ದರೆ, ಅಂತಾರಾಷ್ಟ್ರೀಯ ಪಂದ್ಯಗಳಿಂದ ಯುಎಸ್ಎ ತಂಡ ಬ್ಯಾನ್ ಆಗುವ ಸಾಧ್ಯತೆಯಿದೆ.
Published On - 9:30 am, Wed, 24 September 25
