ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ 2022ರಲ್ಲಿ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ. ಲಖನೌ ಸೂಪರ್ ಜೇಂಟ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ಸೋಲುವ ಮೂಲಕ ಕೆಕೆಆರ್ (KKR vs LSG) ಪ್ಲೇ ಆಫ್ ರೇಸ್ನಿಂದ ಹೊರಬಿತ್ತು. ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಪಡೆ ಸೋಲುಂಡಿತಾದರೂ ಎದುರಾಳಿಗೆ ನೀಡಿದ ಕಠಿಣ ಪೈಪೋಟಿಗೆ ಮೆಚ್ಚುಗೆ ಕೇಳಿಬರುತ್ತಿದೆ. 200+ ರನ್ಗಳ ಬೆಟ್ಟದಂತಹ ಟಾರ್ಗೆಟ್ ಇದ್ದರೂ ಗೆಲುವಿನ ಹತ್ತಿರ ಬಂದು ಮೂರು ರನ್ಗಳಿಂದ ಸೋಲು ಕಂಡಿತು. ನಾಯಕ ಶ್ರೇಯಸ್, ರಿಂಕು ಸಿಂಗ್ (Rinku Singh), ನಿತೀಶ್ ರಾಣ ತಂಡದ ಗೆಲುವಿಗೆ ಹೋರಾಟ ನಡೆಸಿದರು. ಇದೇ ಕಾರಣಕ್ಕೆ ಪಂದ್ಯ ಮುಗಿದ ಬಳಿಕ ಮಾತನಾಡಿದ ಕೋಲ್ಕತ್ತಾ ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer), ಈ ಸೋಲಿನಿಂದ ನಮಗೆ ಯಾವುದೇ ಬೆಸರವಾಗಿಲ್ಲ ಎಂದು ನೇರವಾಗಿ ನುಡಿದಿದ್ದಾರೆ. ತಾವು ಆಡಿದ ಅತ್ಯುತ್ತಮ ಪಂದ್ಯಗಳಲ್ಲಿ ಇದು ಒಂದಾಗಿದೆ. ಹಾಗಾಗಿ ಈ ಸೋಲಿನಿಂದ ತಮಗೆ ಯಾವುದೇ ಬೆಸರವಿಲ್ಲ ಎಂದು ಹೇಳಿದರು.
“ನಿಜವಾಗಿ ಹೇಳಬೇಕೆಂದರೆ ನನ್ನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಆಡಿದ ಅತ್ಯುತ್ತಮ ಪಂದ್ಯಗಳಲ್ಲಿ ಇದು ಕೂಡ ಒಂದು. ಈ ಕಾರಣಕ್ಕೆ ಈ ಪಂದ್ಯದಲ್ಲಿ ಸೋಲು ಕಂಡಿದ್ದು ನನಗೆ ಯಾವುದೇ ಬೇಸರವಿಲ್ಲ. ತಂಡದ ಪ್ರದರ್ಶನ, ಪಂದ್ಯದಲ್ಲಿನ ನಮ್ಮ ಪಾತ್ರ ಹಾಗೂ ವರ್ತನೆ ಎಲ್ಲವೂ ಅದ್ಭುತವಾಗಿತ್ತು. ಅಂತಿಮ ಹಂತದಲ್ಲಿ ರಿಂಕು ಸಿಂಗ್ ತಂಡವನ್ನು ಕೊಡೊಯ್ದ ಹಾದಿಯನ್ನು ನಾನು ಇಷ್ಟಪಟ್ಟಿದ್ದೇನೆ. ಆದರೆ, ಇನ್ನೂ ಎರಡು ಎಸೆತಗಳು ಬಾಕಿ ಇರುವಾಗ ಸಮಯ ನಮ್ಮದಾಗಿರಲಿಲ್ಲ. ಅವರು ಪಂದ್ಯವನ್ನು ಮುಗಿಸಲಿದ್ದಾರೆಂದು ನಮಗೆ ನಿರೀಕ್ಷೆ ಇತ್ತು. ಆ ಮೂಲಕ ಅವರು ನಮ್ಮ ಹೀರೋ ಆಗಬಹುದಾಗಿತ್ತು. ಇಷ್ಟು ಸನಿಹ ಬಂದು ಸೋತಿದ್ದರಿಂದ ಅವರು ತುಂಬಾ ಬೇಸರದಲ್ಲಿದ್ದಾರೆ. ಆದರೆ, ಅವರ ಆಟ ಅತ್ಯುತ್ತಮವಾಗಿತ್ತು, ಅವರ ಆಟದಿಂದ ನನಗೆ ಸಂತಸವಾಗಿದೆ,” ಎಂದು ಹೇಳಿದ್ದಾರೆ.
Rinku Singh: ಇಡೀ ಪಂದ್ಯದ ಗತಿಯನ್ನೇ ಬದಲಿಸಿತು ಎವಿನ್ ಲೆವಿಸ್ ಹಿಡಿದ ಆ ಒಂದು ಕ್ಯಾಚ್: ವಿಡಿಯೋ
ಇನ್ನು ಗೆದ್ದ ತಂಡದ ನಾಯಕ ಕೆಎಲ್ ರಾಹುಲ್ ಮಾತನಾಡಿ, “ಗೆಲುವಿನ ತಂಡವಾಗಿರುವುದಕ್ಕೆ ಖುಷಿಯಾಗುತ್ತಿದೆ. ಈರೀತಿಯ ಪಂದ್ಯಗಳನ್ನು ನಾವು ಹೆಚ್ಚಾಗಿ ಆಡಬೇಕು. ಪ್ರಸಕ್ತ ಆವೃತ್ತಿಯಲ್ಲಿ ಇಂಥಾ ಪಂದ್ಯಗಳನ್ನು ನಾವು ತುಂಬಾ ಮಿಸ್ ಮಾಡಿಕೊಂಡಿದ್ದೇವೆ. ಚೇಸಿಂಗ್ ಮಾಡುವಾಗ 20 ಓವರ್ ವರೆಗೆ ಯಾವುದೇ ಪಂದ್ಯಗಳು ಹೆಚ್ಚಾಗಿ ಹೋಗುವುದಿಲ್ಲ. ಸುಲಭವಾಗಿ ಸೋಲುವ ತಂಡವಾಗಬಹುದು ಹಾಗೂ ಮನೆಗೆ ಮರಳಿ ಕಳಪೆ ಕ್ರಿಕೆಟ್ ಆಡಿದ ಬಗ್ಗೆ ಯೋಚನೆ ಮಾಡಬಹುದು. ಟೂರ್ನಿಯ ಕೊನೆಯ ಲೀಗ್ ಪಂದ್ಯವನ್ನು ಅತ್ಯುತ್ತಮವಾಗಿ ಮುಗಿಸಿರುವುದಕ್ಕೆ ತುಂಬಾ ಖುಷಿಯಾಗುತ್ತದೆ. ಇಂಥಾ ಅದ್ಭುತ ಪಂದ್ಯವಾಡಿದ ಶ್ರೇಯ ಎರಡೂ ತಂಡಗಳಿಗೆ ಸಲ್ಲಬೇಕು. ಈ ಆವೃತ್ತಿಯುದ್ದಕ್ಕೂ ಕ್ವಿಂಟನ್ ಡಿ ಕಾಕ್ ಅದ್ಭುತವಾಗಿ ಬ್ಯಾಟ್ ಮಾಡುತ್ತಿದ್ದಾರೆ. ಈ ಪಂದ್ಯದಲ್ಲಿ ಅವರ ತೋರಿದ ಬ್ಯಾಟಿಂಗ್ ಪ್ರದರ್ಶನ ಅತ್ಯುತ್ತಮವಾಗಿತ್ತು,” ಎಂಬುದು ರಾಹುಲ್ ಮಾತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಯಾವುದೇ ವಿಕೆಟ್ ಕಳೆದುಕೊಳ್ಳದೇ 20 ಓವರ್‌ಗಳಲ್ಲಿ ಬರೋಬ್ಬರಿ 210 ರನ್ ಬಾರಿಸಿತು. ಇದು ಐಪಿಎಲ್ನಲ್ಲಿ ನೂತನ ದಾಖಲೆ ಕೂಡ ಆಯಿತು. ಡಿ ಕಾಕ್ ಕೇವಲ 70 ಎಸೆತಗಳಲ್ಲಿ ಅಜೇಯ 140 ರನ್ ಬಾರಿಸಿದರೆ, ಕೆಎಲ್ ರಾಹುಲ್ 51 ಎಸೆತಗಳಲ್ಲಿ 68 ರನ್ ಕಲೆಹಾಕಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನೂತನ ಇತಿಹಾಸ ಬರೆದರು. ಬೃಹತ್ ಮೊತ್ತ ಬೆನ್ನಟ್ಟಿದ ಕೆಕೆಆರ್ ಆರಂಭ ಉತ್ತಮವಾಗಿರಲಿಲ್ಲ. ತಂಡವು 9 ರನ್ ಗಳಿಸುವುದರೆಡೆಗೆ ಆರಂಭಿಕರಾದ ವೆಂಕಟೇಶ್ ಅಯ್ಯರ್ (0) ಹಾಗೂ ಅಭಿಜಿತ್ ತೋಮರ್ (4) ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಗೂಡಿದ ನಾಯಕ ಶ್ರೇಯಸ್ ಅಯ್ಯರ್ (50) ಹಾಗೂ ನಿತೀಶ್ ರಾಣಾ (42) ಆಕ್ರಮಣಕಾರಿ ಆಟವಾಡುವ ಮೂಲಕ ತಿರುಗೇಟು ನೀಡಿದರು. ಕೊನೆಯ ಹಂತದಲ್ಲಿ ರಿಂಕು ಸಿಂಗ್ (15 ಬಾಲ್, 40 ರನ್) ಹಾಗೂ ಸುನಿಲ್ ನಾರಾಯಣ್ (ಅಜೇಯ 21) ಗಳಿಸಿದರೂ ಗೆಲ್ಲಲು ಸಾಧ್ಯವಾಗಲಿಲ್ಲ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:33 pm, Thu, 19 May 22