
ಭಾರತ ಟೆಸ್ಟ್ ತಂಡದ ನಾಯಕತ್ವವಹಿಸಿಕೊಂಡ ಬಳಿಕ ಶುಭ್ಮನ್ ಗಿಲ್ (Shubman Gill) ಅವರ ಬ್ಯಾಟ್ ಘರ್ಜಿಸಲು ಶುರು ಮಾಡಿದೆ. ನಾಯಕನಾಗಿ ಮೊದಲ ಟೆಸ್ಟ್ ಪಂದ್ಯವನ್ನು ಶುಭ್ಮನ್ ಗಿಲ್ ಸೋತಿರಬಹುದು ಆದರೆ ಆಟಗಾರನಾಗಿ ಅವರ ಪ್ರದರ್ಶನ ಅಮೋಘವಾಗಿತ್ತು. ಇದೀಗ ತಮ್ಮ ನಾಯಕತ್ವದಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಗಿಲ್, ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಆರಂಭದಿಂದಲೂ ತಾಳ್ಮೆಯ ಆಟಕ್ಕೆ ಮುಂದಾಗಿರುವ ಗಿಲ್ ಬರೋಬ್ಬರಿ 199 ಎಸೆತಗಳನ್ನು ಎದುರಿಸಿ 11 ಬೌಂಡರಿಗಳ ಸಹಿತ ತಮ್ಮ ಶತಕ ಪೂರೈಸಿದರು. ಗಿಲ್ ಸತತ 2 ಬೌಂಡರಿಗಳನ್ನು ಬಾರಿಸುವುದರೊಂದಿಗೆ ತಮ್ಮ ಶತಕವನ್ನು ಪೂರೈಸಿದ್ದು ವಿಶೇಷವಾಗಿತ್ತು.
ಎಡ್ಜ್‌ಬಾಸ್ಟನ್ ಟೆಸ್ಟ್‌ನ ಮೊದಲ ದಿನದಂದು, ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಆದರೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಹೀಗಾಗಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ನಾಯಕ ಗಿಲ್ ಬಲವಾದ ಇನ್ನಿಂಗ್ಸ್ ಆಡಿದರು. 125 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದ ಗಿಲ್ ಇದುವರೆಗೆ ಆಡಿರುವ ಮೂರು ಇನ್ನಿಂಗ್ಸ್‌ಗಳಲ್ಲಿ ಎರಡು ಬಾರಿ 50 ರನ್‌ಗಳ ಗಡಿ ದಾಟಿ ತಮಗೆ ನೀಡಿರುವ ಜವಾಬ್ದಾರಿಯನ್ನು ಬಹಳ ಚೆನ್ನಾಗಿ ನಿಭಾಯಿಸಿದ್ದಾರೆ.
ಮೇಲೆ ಹೇಳಿದಂತೆ ಶುಭ್ಮನ್ ಗಿಲ್ ಎಡ್ಜ್‌ಬಾಸ್ಟನ್ ಟೆಸ್ಟ್‌ಗೂ ಮೊದಲು ಲೀಡ್ಸ್ ಟೆಸ್ಟ್‌ನಲ್ಲಿ ನಾಯಕತ್ವದ ಇನ್ನಿಂಗ್ಸ್ ಆಡಿದ್ದರು. ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 147 ರನ್‌ಗಳ ಇನ್ನಿಂಗ್ಸ್ ಆಡಿದ್ದ ಗಿಲ್, ತಮ್ಮ ತಮ್ಮ ಇನ್ನಿಂಗ್ಸ್‌ನಲ್ಲಿ 227 ಎಸೆತಗಳನ್ನು ಎದುರಿಸಿ 19 ಬೌಂಡರಿಗಳು ಮತ್ತು 1 ಸಿಕ್ಸರ್ ಸಹ ಬಾರಿಸಿದರು. ಇದೀಗ ಗಿಲ್, ಎಡ್ಜ್‌ಬಾಸ್ಟನ್‌ನಲ್ಲಿಯೂ ಇದೇ ರೀತಿಯ ಪ್ರದರ್ಶನ ನೀಡಿದ್ದಾರೆ. ಇದು ಗಿಲ್ ಅವರ ಟೆಸ್ಟ್ ವೃತ್ತಿಜೀವನದ 7 ನೇ ಶತಕವಾಗಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಿಡಿದ 16ನೇ ಶತಕವಾಗಿದೆ.
IND vs ENG: ಗಿಲ್ ಪಡೆಗೆ ಮತ್ತೊಂದು ಆಘಾತ; ಬುಮ್ರಾ 2ನೇ ಟೆಸ್ಟ್ ಆಡುವುದು ಡೌಟ್ ಎಂದ ಮಾಜಿ ಕೋಚ್
ಈ ಶತಕದೊಂದಿಗೆ, ಶುಭ್ಮನ್ ಗಿಲ್ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸಹ ಸರಿಗಟ್ಟಿದ್ದಾರೆ. ವಾಸ್ತವವಾಗಿ, ಗಿಲ್ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಭಾರತೀಯ ನಾಯಕನಾಗಿ ಶತಕ ಗಳಿಸಿದ ಎರಡನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು, ವಿರಾಟ್ ಕೊಹ್ಲಿ ಮಾತ್ರ ಈ ಸಾಧನೆ ಮಾಡಿದ್ದರು. 2018 ರಲ್ಲಿ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಾಯಕನಾಗಿ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:49 pm, Wed, 2 July 25