7 ಬ್ಯಾಟ್ಸ್‌ಮನ್‌ಗಳು ಸೊನ್ನೆಗೆ ಔಟ್; 4 ಎಸೆತಗಳಲ್ಲಿ ಪಂದ್ಯ ಗೆದ್ದ ಎದುರಾಳಿ ತಂಡ
ACC U16 East Zone Cup: ಮಲೇಷ್ಯಾದಲ್ಲಿ ನಡೆದ ACC U16 ಪೂರ್ವ ವಲಯ ಕಪ್ ಪಂದ್ಯದಲ್ಲಿ ಹಾಂಗ್ ಕಾಂಗ್-ಚೀನಾ ತಂಡವು ಮಾಲ್ಡೀವ್ಸ್ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಮಾಲ್ಡೀವ್ಸ್ ಕೇವಲ 20 ರನ್ ಗಳಿಸಿದರೆ, ಹಾಂಗ್ ಕಾಂಗ್-ಚೀನಾ ಕೇವಲ 4 ಎಸೆತಗಳಲ್ಲಿ ಗುರಿ ಮುಟ್ಟಿತು.ಮಾಲ್ಡೀವ್ಸ್ ತಂಡದ ಬ್ಯಾಟ್ಸ್‌ಮನ್‌ಗಳ ನಿರಾಶಾದಾಯಕ ಪ್ರದರ್ಶನವೇ ಸೋಲಿಗೆ ಕಾರಣವಾಯ್ತು.

ಮಲೇಷ್ಯಾದಲ್ಲಿ ನಡೆದ ಎಸಿಸಿ ಪುರುಷರ ಅಂಡರ್ 16 ಪೂರ್ವ ವಲಯ ಕಪ್‌ನಲ್ಲಿ ಹಾಂಗ್ ಕಾಂಗ್-ಚೀನಾ ಹಾಗೂ ಮಾಲ್ಡೀವ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಹಾಂಗ್ ಕಾಂಗ್-ಚೀನಾ ತಂಡ ಒಂದೇ ಓವರ್ ಒಳಗೆ ಪಂದ್ಯವನ್ನು ಗೆದ್ದುಕೊಂಡಿತು. ಅಂದರೆ ಮಾಲ್ಡೀವ್ಸ್ ನೀಡಿದ 20 ರನ್ಗಳ ಗುರಿಯನ್ನು ಹಾಂಗ್ ಕಾಂಗ್-ಚೀನಾ ತಂಡ ಕೇವಲ 4 ಎಸೆತಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ಸಾಧಿಸಿತು. ಈ ಪಂದ್ಯದಲ್ಲಿ ಹಾಂಗ್ ಕಾಂಗ್-ಚೀನಾ ತಂಡದ ಎಲ್ಲಾ ಆಟಗಾರರು ಅದ್ಭುತ ಪ್ರದರ್ಶನ ನೀಡಿದರೆ, ಇತ್ತ ಮಾಲ್ಡೀವ್ಸ್ ತಂಡದ 7 ಬ್ಯಾಟ್ಸ್‌ಮನ್‌ಗಳಿಗೆ ತಮ್ಮ ಖಾತೆಯನ್ನು ತೆರೆಯಲು ಸಹ ಸಾಧ್ಯವಾಗಲಿಲ್ಲ.
ಹಾಂಗ್ ಕಾಂಗ್-ಚೀನಾ ತಂಡಕ್ಕೆ ಗೆಲುವು
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮಾಲ್ಡೀವ್ಸ್ ತಂಡ 17 ಓವರ್‌ಗಳ ಕಾಲ ಬ್ಯಾಟಿಂಗ್ ಮಾಡಿ ಕೇವಲ 20 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ನಾಯಕ ಹಮದ್ ಹುಸೇನ್. ಹಮದ್ ಹುಸೇನ್ ತಮ್ಮ ತಂಡದ ಪರ 6 ರನ್ ಗಳಿಸಿದರೆ, ಆರಂಭಿಕ ಸಾದೀಕೀನ್ ಬಾವಾ ಮೊಹಮ್ಮದ್ ಶಿಫಾನ್ ಎರಡು ರನ್ ಗಳಿಸಿ ಔಟಾದರು. ಯೂಸುಫ್ ಫಯಾಲ್ ಫೈಸಲ್ ಒಂದು ರನ್ ಗಳಿಸಿ ಔಟಾದರೆ, ನೆಹಾಲ್ ಮೊಹಮ್ಮದ್ ಅಬ್ದುಲ್ಲಾ ಮೂರು ರನ್ಗಳ ಕಾಣಿಕೆ ನೀಡಿದರು. ತಂಡದ ಪರ ಈ ನಾಲ್ವರು ಆಟಗಾರರು ಖಾತೆ ತೆರೆಯುವಲ್ಲಿ ಯಶಸ್ವಿಯಾದರೆ, ಉಳಿದ 7 ಆಟಗಾರರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ನಾಲ್ಕು ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿದ ಮಾಲ್ಡೀವ್ಸ್ ತಂಡ, ಆ ನಂತರ 8 ರನ್‌ಗಳಿಗೆ ಮತ್ತೇರಡು ವಿಕೆಟ್ ಕಳೆದುಕೊಂಡಿತು. ತಂಡದ ಇನ್ನೆರಡು ವಿಕೆಟ್‌ಗಳು 13 ರನ್‌ಗಳಿಗೆ ಪತನಗೊಂಡರೆ, ತಂಡದ ಸ್ಕೋರ್ 14 ರನ್ ಆಗುವಷ್ಟರಲ್ಲಿ ಇನ್ನಿಬ್ಬರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿಕೊಂಡರು. ಏಳನೇ ಮತ್ತು ಎಂಟನೇ ವಿಕೆಟ್‌ಗಳು 16 ರನ್‌ಗಳಿಗೆ ಪತನವಾದರೆ, ಕೊನೆಯ ಎರಡು ವಿಕೆಟ್‌ಗಳು 20 ರನ್‌ಗಳಿಗೆ ಪತನಗೊಂಡವು. ಇತ್ತ ಹಾಂಗ್ ಕಾಂಗ್-ಚೀನಾ ತಂಡದಿಂದ ಆರವ್ ಖಾಡೇರಿಯಾ 2.5 ಓವರ್‌ಗಳಲ್ಲಿ ಒಂದು ರನ್‌ಗೆ ನಾಲ್ಕು ವಿಕೆಟ್‌ಗಳನ್ನು ಪಡೆದರೆ, ಹರಿಶಂಕರ್ ವೆಂಕಟೇಶ್ ಮತ್ತು ಪ್ರಾಂಶ್ ವಿಮಲ್ ಕಲಾಥಿಯಾ ತಲಾ 3 ವಿಕೆಟ್‌ಗಳನ್ನು ಪಡೆದರು.
ನಾಲ್ಕು ಎಸೆತಗಳಲ್ಲಿ ಪಂದ್ಯ ಅಂತ್ಯ
ಗುರಿಯನ್ನು ಬೆನ್ನಟ್ಟಿದ ಹಾಂಗ್ ಕಾಂಗ್-ಚೀನಾ ತಂಡವು ಕೇವಲ ನಾಲ್ಕು ಎಸೆತಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. ವಿಕೆಟ್ ಕೀಪರ್ ಶ್ರೇಯ್ ನೀಲೇಶ್‌ಕುಮಾರ್ ನಾಲ್ಕು ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 500 ಸ್ಟ್ರೈಕ್ ರೇಟ್‌ನಲ್ಲಿ 20 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಅಂದರೆ ತಂಡದ ಸಹ ಆರಂಭಿಕ ಆಟಗಾರ ಯುವಾನ್ ಟೆನ್‌ಗೆ ಒಂದೇ ಒಂದು ಎಸೆತವನ್ನು ಸಹ ಆಡಲು ಅವಕಾಶ ಸಿಗಲಿಲ್ಲ. ಇತ್ತ ಮಾಲ್ಡೀವ್ಸ್ ಪರ ಮೊದಲ ಓವರ್ ಬೌಲ್ ಮಾಡಿದ ಕ್ಯಾಪ್ಟನ್ ಹಮ್ದ್ ಹುಸೇನ್, ಈ ಓವರ್‌ನಲ್ಲಿ ಎರಡು ವೈಡ್‌ಗಳನ್ನು ಸಹ ಬೌಲ್ ಮಾಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
