IND vs ENG: ಸತತ 3 ಇನ್ನಿಂಗ್ಸ್‌ಗಳಲ್ಲಿ ಮುಗ್ಗರಿಸಿದ ಕರುಣ್ ನಾಯರ್; ಮುಂದಿನ ಇನ್ನಿಂಗ್ಸ್ ನಿರ್ಣಾಯಕ
Karun Nair's England Test Performance: ಕರುಣ್ ನಾಯರ್ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ. ಮೂರು ಇನ್ನಿಂಗ್ಸ್‌ಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಲು ಅವರು ವಿಫಲರಾಗಿದ್ದಾರೆ. ಹೀಗಾಗಿ ತಂಡದಲ್ಲಿ ಅವರ ಸ್ಥಾನ ಭದ್ರವಾಗಿಲ್ಲ. ಮುಂದಿನ ಪಂದ್ಯಕ್ಕೆ ಅವರ ಆಯ್ಕೆ ಅನುಮಾನಾಸ್ಪದವಾಗಿದೆ. ಹೀಗಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವುದು ಅವರಿಗೆ ಅತ್ಯಗತ್ಯವಾಗಿದೆ.

ತಿಂಗಳ ಹಿಂದೆ ಇಂಗ್ಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾವನ್ನು (Team India) ಪ್ರಕಟಿಸಿದಾಗ ತಂಡದಲ್ಲಿ ಕನ್ನಡಿಗ ಕರುಣ್ ನಾಯರ್ (Karun Nair) ಅವರನ್ನು ನೋಡಿ ಎಲ್ಲರೂ ಸಂತೋಷಪಟ್ಟಿದ್ದರು. ಬರೋಬ್ಬರಿ 7 ವರ್ಷಗಳ ನಂತರ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದ ಕರುಣ್, ದೇಶೀಯ ಕ್ರಿಕೆಟ್‌ನಲ್ಲಿ ನೀಡಿದ ಉತ್ತಮ ಪ್ರದರ್ಶನಕ್ಕೆ ಪ್ರತಿಫಲ ಪಡೆದಿದ್ದರು. ಇದಲ್ಲದೆ ನಾಯರ್, ಇಂಗ್ಲೆಂಡ್ ಲಯನ್ಸ್ ವಿರುದ್ಧ ದ್ವಿಶತಕ ಬಾರಿಸುವ ಮೂಲಕ ಆಯ್ಕೆಗಾರರಲ್ಲೂ ಭರವಸೆ ಮೂಡಿಸಿದ್ದರು. ಆದರೆ ಸರಣಿ ಆರಂಭವಾದ ಬಳಿಕ ಕರುಣ್ ಮತ್ತದೆ ಕಳಪೆ ಫಾರ್ಮ್ಗೆ ಪದೇ ಪದೇ ಬಲಿಯಾಗುತ್ತಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಇಲ್ಲಿಯವರೆಗೆ 3 ಇನ್ನಿಂಗ್ಸ್ಗಳನ್ನು ಆಡಿರುವ ಕರುಣ್ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಮುಂದಿನ ಪಂದ್ಯಕ್ಕೆ ನಾಯರ್ ತಂಡದಲ್ಲಿರುತ್ತಾರಾ ಎಂಬ ಪ್ರಶ್ನೆ ಉದ್ಭವಿಸುತ್ತಿದೆ.
3 ಇನ್ನಿಂಗ್ಸ್‌ಗಳಲ್ಲಿ ಫೇಲ್
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 6 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದಿದ್ದ ಕರುಣ್ ನಾಯರ್ಗೆ ತಮ್ಮ ಖಾತೆಯನ್ನು ತೆರೆಯಲು ಸಹ ಸಾಧ್ಯವಾಗಲಿಲ್ಲ. ಆದಾಗ್ಯೂ ಎರಡನೇ ಇನ್ನಿಂಗ್ಸ್‌ನಲ್ಲಿ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಎರಡನೇ ಇನ್ನಿಂಗ್ಸ್ನಲ್ಲೂ ನಿರಾಶೆ ಮೂಡಿಸಿದ ಕರುಣ್ ಕೇವಲ 20 ರನ್ಗಳಿಗೆ ಸುಸ್ತಾದರು. ದುರಾದೃಷ್ಟವೆಂಬಂತೆ ಮೊದಲ ಪಂದ್ಯದಲ್ಲಿ ಭಾರತ ಸೋಲನುಭವಿಸಬೇಕಾಯಿತು. ಹೀಗಾಗಿ ಎರಡನೇ ಟೆಸ್ಟ್ನಿಂದ ಕರುಣ್ಗೆ ಗೇಟ್ಪಾಸ್ ಎಂಬ ಮಾತುಗಳಿದ್ದವು. ಆದಾಗ್ಯೂ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿತ್ತು.
ಉಭಯ ತಂಡಗಳ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಮುಂಬಡ್ತಿ ಪಡೆದು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಕರುಣ್ ನಾಯರ್ ಉತ್ತಮ ಆರಂಭ ಪಡೆದರು. ಅಲ್ಲದೆ ಯಶಸ್ವಿ ಜೈಸ್ವಾಲ್ ಜೊತೆಗೆ ಉತ್ತಮ ಜೊತೆಯಾಟವನ್ನು ಕಟ್ಟಿದರು. ಇತ್ತ ತಾವು ಸಹ 30 ರನ್ಗಳ ಗಡಿ ದಾಟಿದರು. ಕರುಣ್ ಅವರ ಬ್ಯಾಟಿಂಗ್ ನೋಡಿದವರಿಂದ ಅವರಿಂದ ದೊಡ್ಡ ಇನ್ನಿಂಗ್ಸ್ ಮೂಡುವ ನಿರೀಕ್ಷೆಯಲ್ಲಿದ್ದರು. ಆದರೆ ಈ ವೇಳೆಗೆ ಎಡವಿದ ಕರುಣ್ ತಮ್ಮ ವಿಕೆಟ್ ಕೈಚೆಲ್ಲಿದರು.
IND vs ENG: ಪೋಪ್ ಹಿಡಿದ ಅದ್ಭುತ ಕ್ಯಾಚ್ಗೆ ಕಮರಿದ ಕರುಣ್ ಕನಸು; ವಿಡಿಯೋ ನೋಡಿ
2ನೇ ಇನ್ನಿಂಗ್ಸ್‌ನಲ್ಲಿ ಆಡಲೇಬೇಕಾದ ಒತ್ತಡ
ಮೂರನೇ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಬೇಕಾದರೆ, ಬರ್ಮಿಂಗ್ಹ್ಯಾಮ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ದೊಡ್ಡ ಇನ್ನಿಂಗ್ಸ್ ಆಡಬೇಕಾಗುತ್ತದೆ. ಎರಡನೇ ಇನ್ನಿಂಗ್ಸ್‌ನಲ್ಲಿ ದೊಡ್ಡ ಸ್ಕೋರ್ ಕಲೆಹಾಕುವ ಮೂಲಕ ನಾಯರ್ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಬಹುದಾಗಿದೆ. ಅಲ್ಲದೆ ಟೀಂ ಇಂಡಿಯಾ ಬಹಳ ದಿನಗಳಿಂದ 3ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ಗಾಗಿ ಹುಡುಕುತ್ತಿದೆ. ಹೀಗಾಗಿ ನಾಯರ್ ಈ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಅವಕಾಶವನ್ನು ಹೊಂದಿದ್ದಾರೆ. ಕರುಣ್ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದರಿಂದಾಗಿ ನಾಯಕ ಶುಭಮನ್ ಗಿಲ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಈ ಆಟಗಾರನ ಮೇಲೆ ವಿಶ್ವಾಸ ತೋರಿಸುತ್ತಿದ್ದಾರೆ. ಅದರಂತೆ ಕರುಣ್ ತಮಗೆ ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ. ಇಲ್ಲದಿದ್ದರೆ, ಕರುಣ್ಗೆ ಇದೇ ಕೊನೆಯ ಪ್ರವಾಸವಾದರೂ ಅಚ್ಚರಿಪಡಬೇಕಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:05 pm, Wed, 2 July 25
