IND vs AUS: ಹೆಡ್ ಕ್ಯಾಚ್ ಹಿಡಿದ ಗಿಲ್​ಗೆ ಎಚ್ಚರಿಕೆ ನೀಡಿದ ಅಂಪೈರ್​..! ನಡೆದಿದ್ದೇನು?

Shubman Gill's Stunning Catch: ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ 264 ರನ್‌ಗಳಿಗೆ ಆಲೌಟ್ ಆಯಿತು.39 ರನ್‌ಗಳ ಸ್ಫೋಟಕ ಇನಿಂಗ್ಸ್ ಆಡಿದ್ದ ಟ್ರಾವಿಸ್ ಹೆಡ್ ಅವರನ್ನು ವರುಣ್ ಚಕ್ರವರ್ತಿ ಔಟ್ ಮಾಡಿದರು. ಶುಭ್‌ಮನ್ ಗಿಲ್ ಅದ್ಭುತ ಕ್ಯಾಚ್‌ ಪಡೆದರೂ, ಚೆಂಡನ್ನು ಹಿಡಿದ ನಂತರ ತಕ್ಷಣವೇ ಚೆಂಡನ್ನು ನೆಲಕ್ಕೆ ಎಸೆದ ಕಾರಣ ಅಂಪೈರ್ ಎಚ್ಚರಿಕೆ ನೀಡಿದರು.

IND vs AUS: ಹೆಡ್ ಕ್ಯಾಚ್ ಹಿಡಿದ ಗಿಲ್​ಗೆ ಎಚ್ಚರಿಕೆ ನೀಡಿದ ಅಂಪೈರ್​..! ನಡೆದಿದ್ದೇನು?
Shubman Gill

Updated on: Mar 04, 2025 | 6:55 PM

ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 264 ರನ್​ಗಳಿಗೆ ಆಲೌಟ್ ಆಗಿದೆ. ಆಸೀಸ್ ಪರ ನಾಯಕ ಸ್ಮಿತ್ ಹಾಗೂ ಅಲೆಕ್ಸ್ ಕ್ಯಾರಿ ಅರ್ಧಶತಕದ ಇನ್ನಿಂಗ್ಸ್ ಆಡಿದರೆ, ಆರಂಭಿಕ ಟ್ರಾವಿಸ್ ಹೆಡ್ ಕೂಡ 39 ರನ್​​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಆರಂಭದಿಂದಲೂ ಹೊಡಿಬಡಿ ಆಟಕ್ಕೆ ಮುಂದಾಗಿ ಭಾರತಕ್ಕೆ ಅಪಾಯಕಾರಿಯಾಗಿ ಕಾಣುತ್ತಿದ್ದ ಹೆಡ್​ ಅವರ ವಿಕೆಟ್ ಅನ್ನು ವರುಣ್ ಚಕ್ರವರ್ತಿ ಉರುಳಿಸಿದರು. ವರುಣ್ ಬೌಲ್ ಮಾಡಿದ ಮೊದಲ ಓವರ್​ನಲ್ಲೇ ಹೆಡ್, ತಾನು ಎದುರಿಸಿದ ಮೊದಲ ಎಸೆತದಲ್ಲೇ ಲಾಂಗ್ ಆಫ್​​ನಲ್ಲಿ ನಿಂತಿದ್ದ ಶುಭ್​ಮನ್ ಗಿಲ್​ಗೆ ಕ್ಯಾಚಿತ್ತು ಔಟಾದರು. ಹೆಡ್ ಔಟಾಗುತ್ತಿದ್ದಂತೆ, ಟೀಂ ಇಂಡಿಯಾ ಆಟಗಾರರು ನಿಟ್ಟುಸಿರು ಬಿಟ್ಟರಾದರೂ, ಗಿಲ್​ಗೆ ಆನ್-ಫೀಲ್ಡ್ ಅಂಪೈರ್ ರಿಚರ್ಡ್ ಇಲ್ಲಿಂಗ್ವರ್ತ್ ಅವರಿಂದ ಎಚ್ಚರಿಕೆ ಸಿಕ್ಕಿತು.

ಇಲ್ಲಿಂಗ್‌ವರ್ತ್ ಎಚ್ಚರಿಕೆ ನೀಡಿದ್ದು ಏಕೆ?

ಮೇಲೆ ಹೇಳಿದಂತೆ ಆರಂಭದಿಂದಲೂ ಟ್ರಾವಿಸ್ ಹೆಡ್ ಅಪಾಯಕಾರಿಯಾಗಿ ಕಾಣುತ್ತಿದ್ದರು. ಅವರು ಎರಡು ಸಿಕ್ಸರ್ ಮತ್ತು ಐದು ಬೌಂಡರಿಗಳ ಸಹಾಯದಿಂದ 39 ರನ್ ಗಳಿಸಿದ್ದರು. ಈ ಹಂತದಲ್ಲಿ ರೋಹಿತ್ ಶರ್ಮಾ 9 ನೇ ಓವರ್‌ನಲ್ಲಿ ಚೆಂಡನ್ನು ವರುಣ್ ಚಕ್ರವರ್ತಿಗೆ ಹಸ್ತಾಂತರಿಸಿದರು. ವರುಣ್ ತಮ್ಮ ಎರಡನೇ ಎಸೆತದಲ್ಲೇ ಹೆಡ್​ರನ್ನು ತಮ್ಮ ಬಲೆಗೆ ಕೇಡವಿದರು. ಸಿಕ್ಸರ್ ಹೊಡೆಯಲು ಪ್ರಯತ್ನಿಸಿದ ಹೆಡ್, ಲಾಂಗ್ ಆಫ್ ಕಡೆಗೆ ಶಾಟ್ ಆಡಿದರು. ಆದರೆ ಅಲ್ಲೇ ನಿಂತಿದ್ದ ಶುಭಮನ್ ಗಿಲ್ ಅದ್ಭುತ ರನ್ನಿಂಗ್ ಕ್ಯಾಚ್ ಪಡೆದರು. ಆದರೆ ಗಿಲ್ ಚೆಂಡನ್ನು ಹಿಡಿದ ತಕ್ಷಣವೇ ಕೈಯಿಂದ ಎಸೆದರು.

ಇದನ್ನು ಗಮನಿಸಿದ ಅಂಪೈರ್ ರಿಚರ್ಡ್ ಇಲ್ಲಿಂಗ್‌ವರ್ತ್, ಗಿಲ್​ರನ್ನು ತಮ್ಮ ಬಳಿಗೆ ಕರೆದು ಎಚ್ಚರಿಕೆ ನೀಡಿದರು. ವಾಸ್ತವವಾಗಿ, ಆಟದ ನಿಯಮಗಳ ಪ್ರಕಾರ, ಚೆಂಡನ್ನು ಹಿಡಿದ ನಂತರ ಅದರ ಮೇಲೆ ಸಂಪೂರ್ಣ ನಿಯಂತ್ರಣವಿರಬೇಕು. ಅಂಪೈರ್ ಇದನ್ನು ಗಿಲ್‌ಗೆ ವಿವರಿಸಿದರು. ಅಂಪೈರ್ ರಿಚರ್ಡ್ ಇಲ್ಲಿಂಗ್‌ವರ್ತ್ ಅವರ ಮಾತುಗಳನ್ನು ಎಚ್ಚರಿಕೆಯಿಂದ ಆಲಿಸಿದ ಗಿಲ್ ಅಲ್ಲಿಂದ ನಡೆದರು.

ವೀಕ್ಷಕ ವಿವರಣೆಕಾರರು ಹೇಳಿದ್ದೇನು?

ಪಂದ್ಯದ ವೇಳೆ ವೀಕ್ಷಕ ವಿವರಣೆ ನೀಡುತ್ತಿದ್ದ ಇಂಗ್ಲೆಂಡ್‌ನ ದಂತಕಥೆಯ ಕ್ರಿಕೆಟಿಗ ಮೈಕೆಲ್, ಶುಭ್​ಮನ್ ಗಿಲ್ ಚೆಂಡಿನ ಮೇಲೆ ಸಂಪೂರ್ಣವಾಗಿ ಹಿಡಿತ ಸಾಧಿಸಿದ್ದರು. ಹೀಗಾಗಿ ಈ ಕ್ಯಾಚ್​ನಲ್ಲಿ ಯಾವುದೇ ದೋಷ ಇರಲಿಲ್ಲ ಎಂದರು. ಮತ್ತೊಬ್ಬ ವೀಕ್ಷಕ ವಿವರಣೆಗಾರ ಆಸ್ಟ್ರೇಲಿಯಾದ ದಂತಕಥೆ ಮ್ಯಾಥ್ಯೂ ಹೇಡನ್, ಗಿಲ್ ಸುಮಾರು 3 ಸೆಕೆಂಡುಗಳ ಕಾಲ ಚೆಂಡನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡಿದ್ದರು. ಹೀಗಾಗಿ ಈ ಕ್ಯಾಚ್​ನಲ್ಲಿ ಯಾವುದೇ ತೊಂದರೆ ಇಲ್ಲ ಎಂದರು. ಆದಾಗ್ಯೂ ಅವರು ಅಂಪೈರ್ ಎಚ್ಚರಿಕೆಯನ್ನು ಶ್ಲಾಘಿಸಿದರು. ಅದೇ ಸಮಯದಲ್ಲಿ, ಅಂಪೈರ್ ಅವರ ಮಾತನ್ನು ಗಂಭೀರವಾಗಿ ಆಲಿಸಿದ್ದಕ್ಕಾಗಿ ಹರ್ಷ ಭೋಗ್ಲೆ, ಗಿಲ್ ಅವರನ್ನು ಶ್ಲಾಘಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ