ಏಷ್ಯಾಕಪ್ 2022 (Asia Cup 2022) ಟೂರ್ನಿಯ ಲೀಗ್ ಹಂತದ ಎಲ್ಲ ಪಂದ್ಯಗಳು ಮುಕ್ತಾಯಗೊಂಡಿದ್ದು, ಇಂದಿನಿಂದ ಸೂಪರ್ 4 ಕದನ ಶುರುವಾಗಲಿದೆ. ಭಾರತ, ಪಾಕಿಸ್ತಾನ (India vs Pakistan), ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಸೂಪರ್ 4 ಹಂತಕ್ಕೆ ತೇರ್ಗಡೆಯಾಗಿದೆ. ಇಲ್ಲಿ ಅಗ್ರ ಸ್ಥಾನ ಪಡೆಯುವ ಮೊದಲ ಎರಡು ತಂಡ ಫೈನಲ್ನಲ್ಲಿ ಸೆಣೆಸಾಟ ನಡೆಸಲಿದೆ. ಇಂದು ಸೂಪರ್ 4 ಹಂತದ ಮೊದಲ ಪಂದ್ಯ ನಡೆಯಲಿದ್ದು ದಸನ್ ಶನಕಾ ನಾಯಕತ್ವದ ಶ್ರೀಲಂಕಾ ಹಾಗೂ ಮೊಹಮ್ಮದ್ ನಬಿ ನೇತೃತ್ವದ ಅಫ್ಘಾನಿಸ್ತಾನ (Sri Lanka vs Afghanistan) ತಂಡ ಮುಖಾಮುಖಿ ಆಗಲಿದೆ.
ಲೀಗ್ನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಭರ್ಜರಿ ಜಯ ಕಂಡಿರುವ ಅಫ್ಘಾನ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಇತ್ತ ಬಾಂಗ್ಲಾ ವಿರುದ್ಧ ರೋಚಕ ಗೆಲುವು ಸಾಧಿಸಿ ಸೂಪರ್ 4 ಗೆ ಲಗ್ಗೆಯಿಟ್ಟಿರುವ ಸಿಂಹಳೀಯರು ಯಾವುದೇ ಕ್ಷಣದಲ್ಲಿ ಪುಟಿದೇಳುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.
ಲೀಗ್ ಹಂತದಲ್ಲಿ ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ಮೂಖಾಮುಖಿ ಆಗಿತ್ತು. ಇದರಲ್ಲಿ ಅಫ್ಘಾನ್ ತಂಡ ಬರೋಬ್ಬರಿ 8 ವಿಕೆಟ್ಗಳ ಅಮೋಘ ಗೆಲುವು ಕಂಡಿತ್ತು. ಬೌಲಿಂಗ್–ಬ್ಯಾಟಿಂಗ್ನಲ್ಲಿ ಭರ್ಜರಿ ಆಟವಾಡಿದ್ದ ಅಫ್ಘಾನಿಸ್ತಾನ ಶ್ರೀಲಂಕಾವನ್ನು 105 ರನ್ನಿಗೆ ಆಲೌಟ್ ಮಾಡಿತ್ತು. ನಬಿ ಪಡೆ ಕೇವಲ 2 ವಿಕೆಟಿಗೆ 106 ರನ್ ಗಳಿಸಿ ಗೆಲುವು ದಾಖಲಿಸಿತ್ತು.
ಅಫ್ಘಾನ್ ತಂಡಕ್ಕೆ ಮುಜೀಬ್ ಉರ್ ರೆಹ್ಮಾನ್ ಹಾಗೂ ರಶೀದ್ ಖಾನ್ ಬೌಲಿಂಗ್ ವಿಭಾಗದಲ್ಲಿ ದೊಡ್ಡ ಆಸ್ತಿ. ಬ್ಯಾಟಿಂಗ್ನಲ್ಲೂ ರಶೀದ್ ಅಬ್ಬರಿಸಬಲ್ಲರು. ಹಜರತುಲ್ಲಾ ಝಜೈ ಹಾಗೂ ರಹಮಾನುಲ್ಲಾ ಗುರ್ಬಾಜ್ ಬೊಂಬಾಟ್ ಫಾರ್ಮ್ನಲ್ಲಿದ್ದು ಸ್ಫೋಟಕ ಆರಂಭ ಒದಗಿಸುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಇಬ್ರಾಹಿಂ ಝದ್ರಾನ್, ನಜೀಬುಲ್ಲಾ ಝದ್ರಾನ್, ಕರೀಮ್ ಜನತ್, ಮೊಹಮ್ಮದ್ ನಬಿ ಅವರಿದ್ದು ಬಲಿಷ್ಠವಾಗಿದೆ.
ಇತ್ತ ಏಷ್ಯಾಕಪ್ ಟೂರ್ನಿಯಲ್ಲಿ ಐದು ಬಾರಿ ಟ್ರೋಫಿ ಗೆದ್ದು ಎರಡನೇ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಶ್ರೀಲಂಕಾದಲ್ಲಿ ಈಗ ಮೊದಲಿನ ಖದರ್ ಇಲ್ಲ ಎಂಬುದು ಸರಿಯಾಗಿ ಗೋಚರಿಸುತ್ತಿದೆ. ಆದರೆ, ಕಳೆದ ಪಂದ್ಯದಲ್ಲಿ ಕಂಡ ಗೆಲುವು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಭನುಕಾ ರಾಜಪಕ್ಷ ಹಾಗೂ ನಾಯಕ ದಸುನ್ ಶನಕ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದಾರೆ. ಪತುಮ್ ನಿಸಂಕ, ವಾನಿಂದು ಹಸರಂಗ, ಮಹೀಶ ತೀಕ್ಷಣ ರಂತಹ ಸ್ಟಾರ್ ಆಟಗಾರರು ಇಂದು ಮಿಂಚಲೇ ಬೇಕಾದ ಒತ್ತಡದಲ್ಲಿದ್ದಾರೆ.
ಸಂಭಾವ್ಯ ಪ್ಲೇಯಿಂಗ್ XI:
ಅಫ್ಘಾನಿಸ್ತಾನ: ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ನಜೀಬುಲ್ಲಾ ಝದ್ರಾನ್, ಕರೀಮ್ ಜನತ್, ಮೊಹಮ್ಮದ್ ನಬಿ (ನಾಯಕ), ರಶೀದ್ ಖಾನ್, ಅಜ್ಮತುಲ್ಲಾ ಒಮರ್ಝೈ, ನವೀನ್–ಉಲ್–ಹಕ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಕಿ.
ಶ್ರೀಲಂಕಾ: ದನುಷ್ಕ ಗುಣತಿಲಕ, ಪತುಮ್ ನಿಸಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕಾ, ಭನುಕಾ ರಾಜಪಕ್ಷ, ದಸುನ್ ಶನಕ (ನಾಯಕ), ವಾನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ ತೀಕ್ಷಣ, ದಿಲ್ಶನ್ ಮಧುಶಂಕ, ಮತೀಶ ಪತಿರಣ.
Published On - 9:42 am, Sat, 3 September 22