SL vs BAN: ರಣ ರೋಚಕ ಪಂದ್ಯದಲ್ಲಿ ಬಾಂಗ್ಲಾ ಮಣಿಸಿ ಸೂಪರ್- 4 ಹಂತಕ್ಕೆ ಎಂಟ್ರಿಕೊಟ್ಟ ಶ್ರೀಲಂಕಾ

| Updated By: ಪೃಥ್ವಿಶಂಕರ

Updated on: Sep 01, 2022 | 11:58 PM

Asia Cup 2022: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಕೇವಲ 2 ವಿಕೆಟ್‌ಗಳಿಂದ ಸೋಲಿಸಿದ ಶ್ರೀಲಂಕಾ ಸೂಪರ್ ಫೋರ್‌ಗೆ ಪ್ರವೇಶಿಸಿದೆ. ಈ ರೋಚಕ ಪಂದ್ಯ ಕೊನೆಯ ಓವರ್‌ನವರೆಗೂ ಸಾಗಿದ್ದು, ಶ್ರೀಲಂಕಾ ನೋಬಾಲ್‌ನೊಂದಿಗೆ ತನ್ನ ಗೆಲುವಿನ ಖಾತೆಯನ್ನು ತೆರೆಯಿತು.

SL vs BAN: ರಣ ರೋಚಕ ಪಂದ್ಯದಲ್ಲಿ ಬಾಂಗ್ಲಾ ಮಣಿಸಿ ಸೂಪರ್- 4 ಹಂತಕ್ಕೆ ಎಂಟ್ರಿಕೊಟ್ಟ ಶ್ರೀಲಂಕಾ
Sri Lanka Vs Bangladesh
Follow us on

ಏಷ್ಯಾಕಪ್ 2022 (Asia Cup 2022)ರಲ್ಲಿ ಅಂತಿಮವಾಗಿ ಶ್ರೀಲಂಕಾ ತಂಡ ಸೂಪರ್-4 ಹಂತಕ್ಕೆ ಎಂಟ್ರಿಕೊಟ್ಟಿದೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಕೇವಲ 2 ವಿಕೆಟ್‌ಗಳಿಂದ ಸೋಲಿಸಿದ ಶ್ರೀಲಂಕಾ ಸೂಪರ್ ಫೋರ್‌ಗೆ ಪ್ರವೇಶಿಸಿದೆ. ಈ ರೋಚಕ ಪಂದ್ಯ ಕೊನೆಯ ಓವರ್‌ನವರೆಗೂ ಸಾಗಿದ್ದು, ಶ್ರೀಲಂಕಾ ನೋಬಾಲ್‌ನೊಂದಿಗೆ ತನ್ನ ಗೆಲುವಿನ ಖಾತೆಯನ್ನು ತೆರೆಯಿತು. ಪಂದ್ಯಕ್ಕೂ ಮುನ್ನ ಉಭಯ ತಂಡಗಳ ಆಟಗಾರರು, ಕೋಚ್‌ಗಳು ಹಾಗೂ ಮಾಜಿ ಆಟಗಾರರ ನಡುವೆ ತೀವ್ರ ಮಾತಿನ ಸಮರ ಏರ್ಪಟ್ಟಿದ್ದು, ನಂತರ ಮೈದಾನದಲ್ಲಿ ನಡೆದ ಪಂದ್ಯವೂ ಈ ವಾತಾವರಣಕ್ಕೆ ಪುಷ್ಠಿ ನೀಡಿತು. ಉಭಯ ತಂಡಗಳು ಕೂಡ ಹಲವು ತಪ್ಪುಗಳನ್ನು ಮಾಡಿದರೂ, ಉತ್ತಮ ಆಟ ಪ್ರದರ್ಶಿಸಿ ಪ್ರೇಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಒದಗಿಸಿದವು.

ಸೆಪ್ಟೆಂಬರ್ 1ರ ಗುರುವಾರ ದುಬೈನಲ್ಲಿ ನಡೆದ ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿತ್ತು. ಗುಂಪು ಹಂತದ ಮೊದಲ ಪಂದ್ಯಗಳಲ್ಲಿ ಎರಡೂ ತಂಡಗಳು ಅಫ್ಘಾನಿಸ್ತಾನದ ವಿರುದ್ಧ ಸೋಲನ್ನು ಎದುರಿಸಬೇಕಾಯಿತು, ಹೀಗಾಗಿ ಈ ಪಂದ್ಯದಲ್ಲಿ ಗೆಲುವು ಇಬ್ಬರಿಗೂ ಅಗತ್ಯವಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮಧ್ಯಮ ಕ್ರಮಾಂಕ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ನೆರವಿನಿಂದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 183 ರನ್ ಗಳಿಸಿತು.

ಬಾಂಗ್ಲಾದೇಶ ಮೂರನೇ ಓವರ್‌ನಲ್ಲಿ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ ನಾಯಕ ಶಕೀಬ್ ಅಲ್ ಹಸನ್ ಆರಂಭಿಕ ಆಟಗಾರ ಮೆಹದಿ ಹಸನ್ ಮಿರಾಜ್ ಅವರೊಂದಿಗೆ ಮುಂದಿನ 24 ಎಸೆತಗಳಲ್ಲಿ 39 ರನ್ ಸೇರಿಸಿ ವೇಗವನ್ನು ಹೆಚ್ಚಿಸಿದರು. ಆದರೆ, ಮೀರಜ್ ಮತ್ತು ಮುಶ್ಫಿಕರ್ ರಹೀಮ್ ಸತತ ಎರಡು ಓವರ್‌ಗಳಲ್ಲಿ ಔಟಾದರು, ಆದರೆ ಶಕೀಬ್ 11ನೇ ಓವರ್‌ ಆಗುವಷ್ಟರಲ್ಲಿ ತಂಡದ ಮೊತ್ತವನ್ನು 87 ರನ್‌ಗಳತ್ತ ಕೊಂಡೊಯ್ದರು. ಬಳಿಕ ಅಫೀಫ್ ಹೊಸೈನ್, ಮೆಹಮುದುಲ್ಲಾ, ಮೊಸದ್ದಕ್ ಹೊಸೇನ್ ಬಲಿಷ್ಠ ಇನ್ನಿಂಗ್ಸ್ ಕಟ್ಟಿ ತಂಡವನ್ನು 183ರನ್ ಸ್ಕೋರ್​ಗೆ ಕೊಂಡೊಯ್ದರು.ಅಫ್ಘಾನಿಸ್ತಾನ ವಿರುದ್ಧ ಬಿರುಸಿನ ಇನಿಂಗ್ಸ್ ಆಡಿದ ಮೊಸದ್ದಕ್ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿ ಕೇವಲ 9 ಎಸೆತಗಳಲ್ಲಿ 24 ರನ್ ಚಚ್ಚಿದರು. ಶ್ರೀಲಂಕಾ ಪರ ಚಮಿಕಾ ಕರುಣರತ್ನೆ ಮತ್ತು ವನಿಂದು ಹಸರಂಗ ಯಶಸ್ವಿ ಬೌಲರ್‌ಗಳಾಗಿದ್ದರು.

ಇದಕ್ಕುತ್ತರವಾಗಿ ಶ್ರೀಲಂಕಾ ಪರ ಪಾಥುಮ್ ನಿಸಂಕಾ ಮತ್ತು ಕುಸಾಲ್ ಮೆಂಡಿಸ್ ಉತ್ತಮ ಆರಂಭ ನೀಡಿ ಆರನೇ ಓವರ್‌ಗೆ 45 ರನ್ ಸೇರಿಸಿದರು. ಪಂದ್ಯದ ಮೊದಲು, ಶ್ರೀಲಂಕಾದ ನಾಯಕ ದಸುನ್ ಶಾನಕ ಅವರು ಶಕೀಬ್ ಅಲ್ ಹಸನ್ ಮತ್ತು ಮುಸ್ತಫಿಜುರ್ ರೆಹಮಾನ್ ಅವರನ್ನು ಬಾಂಗ್ಲಾ ತಂಡದಲ್ಲಿರುವ ವಿಶ್ವ ದರ್ಜೆಯ ಬೌಲರ್‌ಗಳೆಂದಿದ್ದರು. ಆದರೆ ಮೆಂಡಿಸ್ ಆರಂಭದಲ್ಲಿ ಈ ಇಬ್ಬರ ಓವರ್​ಗಳಲ್ಲಿ ಹೆಚ್ಚು ರನ್ ಗಳಿಸಿದರು. ಕೇವಲ ಶಕೀಬ್ ಅವರ ಓವರ್‌ನಿಂದ 18 ರನ್ ಗಳಿಸಿದರು. ಇದಕ್ಕೆ ವ್ಯತಿರಿಕ್ತವಾಗಿ, ವೇಗದ ಬೌಲರ್ ಇಬಾದತ್ ಹೊಸೈನ್ ಶ್ರೀಲಂಕಾಕ್ಕೆ ತೊಂದರೆಗಳನ್ನು ನೀಡಿ, ಅದೇ ಓವರ್‌ನಲ್ಲಿ ನಿಸಂಕಾ ಮತ್ತು ಚರಿತ್ ಅಸಲಂಕಾ ಅವರ ವಿಕೆಟ್ ಪಡೆದರು. ಬಳಿಕ ಗುಣತಿಲಕ ಕೂಡ ಅವರಿಗೆ ಬಲಿಪಶು ಆದರು.

ಒಂಬತ್ತನೇ ಓವರ್‌ ಆಗುವಷ್ಟರಲ್ಲಿ ಶ್ರೀಲಂಕಾ 77 ರನ್‌ಗಳಿಗೆ ಭಾನುಕಾ ರಾಜಪಕ್ಸೆ ಸೇರಿದಂತೆ 4 ವಿಕೆಟ್ ಕಳೆದುಕೊಂಡಿತು. ಇಂತಹ ಪರಿಸ್ಥಿತಿಯಲ್ಲಿ ನಾಯಕ ಶನಕ ಮತ್ತು ಮೆಂಡಿಸ್ ನಡುವೆ ಬಲಿಷ್ಠ ಜೊತೆಯಾಟ ನಡೆಯಿತು. ಈ ಸಂದರ್ಭದಲ್ಲಿ ಮೆಂಡಿಸ್ 4 ಬಾರಿ ಲೈಫ್ ಲೈನ್ ಪಡೆದರು, ಅದರಲ್ಲಿ ಒಮ್ಮೆ ಬಾಂಗ್ಲಾ ಕ್ಯಾಚ್ ಕೈಚೆಲ್ಲಿದರೆ, ಇನ್ನೊಮ್ಮೆ ನೋ ಬಾಲ್​ ಮೂಲಕ ಅವರಿಗೆ ಜೀವದಾನ ಸಿಕ್ಕಿತು, ಒಂದು ಬಾರಿ ಮನವಿ ಮಾಡಲಿಲ್ಲ ಮತ್ತು ನಂತರ ರನ್ ಔಟ್ ಅವಕಾಶವನ್ನು ಕಳೆದುಕೊಂಡರು. ಮೆಂಡಿಸ್ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು ಮತ್ತು ಶನಕ ಅವರೊಂದಿಗೆ 34 ಎಸೆತಗಳಲ್ಲಿ 45 ರನ್ ಬಾರಿಸಿದರು. ಆದರೆ, ಮುಂದಿನ 20 ಎಸೆತಗಳಲ್ಲಿ ಶ್ರೀಲಂಕಾ ಎರಡೂ ವಿಕೆಟ್ ಕಳೆದುಕೊಂಡಿತು. ಹೀಗಾಗಿ ಶ್ರೀಲಂಕಾಗೆ ಕೊನೆಯ 12 ಎಸೆತಗಳಲ್ಲಿ 25 ರನ್ ಅಗತ್ಯವಿತ್ತು. ಅದರೆ ಆ ವೇಳೆಗೆ ಚಮಿಕಾ ಕರುಣರತ್ನೆ ರನೌಟ್ ಆದರು, ಆದರೆ ಅಸಿತಾ ಫೆರ್ನಾಂಡೋ ಎರಡೂ ಓವರ್‌ಗಳಲ್ಲಿ ತಲಾ ಒಂದು ಬೌಂಡರಿ ಗಳಿಸಿ ತಂಡದ ಗೆಲುವನ್ನು ಖಚಿತಪಡಿಸಿದರು. ಶ್ರೀಲಂಕಾ ಕೊನೆಯ ಓವರ್‌ನ ಮೂರನೇ ಎಸೆತದಲ್ಲಿ ಎರಡು ರನ್ ಗಳಿಸುವ ಮೂಲಕ ಸ್ಕೋರ್ ಅನ್ನು ಸಮಗೊಳಿಸಿತು, ಆದರೆ ಈ ಚೆಂಡು ನೋ ಬಾಲ್ ಆಗಿದ್ದರಿಂದ ಲಂಕಾ ರೋಚಕ ಜಯ ಗಳಿಸಿ ಸೂಪರ್ 4 ಹಂತಕ್ಕೆ ಎಂಟ್ರಿಕೊಟ್ಟಿತು.

Published On - 11:34 pm, Thu, 1 September 22