SL vs NZ: ಕಿವೀಸ್ ಕಿವಿ ಹಿಂಡಿದ ಜಯಸೂರ್ಯ: ಕೇವಲ 88 ರನ್ಗಳಿಗೆ ನ್ಯೂಝಿಲೆಂಡ್ ಆಲೌಟ್
Sri Lanka vs New Zealand, 2nd Test: ಪ್ರಥಮ ಇನಿಂಗ್ಸ್ನಲ್ಲಿ 514 ರನ್ಗಳ ಹಿನ್ನಡೆ ಹೊಂದಿರುವ ನ್ಯೂಝಿಲೆಂಡ್ ತಂಡಕ್ಕೆ ಶ್ರೀಲಂಕಾ ಫಾಲೋಆನ್ ಹೇರಿದೆ. ಅದರಂತೆ ಕಿವೀಸ್ ಪಡೆ ದ್ವಿತೀಯ ಇನಿಂಗ್ಸ್ ಆರಂಭಿಸಿದೆ. ಆದರೆ ಇಲ್ಲಿ ನ್ಯೂಝಿಲೆಂಡ್ ತಂಡದ ಸ್ಕೋರ್ ಲೆಕ್ಕಾಚಾರ ಶುರುವಾಗಲಿರುವುದು 514 ರನ್ಗಳ ಬಳಿಕ ಎಂಬುದು ವಿಶೇಷ.
ಗಾಲೆ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವು ಕೇವಲ 88 ರನ್ಗಳಿಗೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಧನಂಜಯ ಡಿಸಿಲ್ವಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಪ್ರಥಮ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಪಾತುಮ್ ನಿಸ್ಸಂಕಾ ಕೇವಲ 1 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇನ್ನು ದಿಮುತ್ ಕರುಣರತ್ನೆ 46 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದ್ದರು.
ಈ ಹಂತದಲ್ಲಿ ಜೊತೆಗೂಡಿದ ದಿನೇಶ್ ಚಂಡಿಮಲ್ ಹಾಗೂ ಏಂಜೆಲೊ ಮ್ಯಾಥ್ಯೂಸ್ ಅದ್ಭುತ ಇನಿಂಗ್ಸ್ ಆಡಿದರು. ಇದರ ನಡುವೆ 88 ರನ್ಗಳಿಸಿ ಮ್ಯಾಥ್ಯೂಸ್ ಔಟಾದರೆ, ದಿನೇಶ್ ಚಂಡಿಮಲ್ (116) ಶತಕ ಸಿಡಿಸಿ ಮಿಂಚಿದರು.
ಇನ್ನು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಮಿಂದು ಮೆಂಡಿಸ್ ಎಂದಿನಂತೆ ಈ ಪಂದ್ಯದಲ್ಲೂ ಅತ್ಯಾಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದರು. ಕ್ರೀಸ್ ಕಚ್ಚಿ ನಿಂತು ಇನಿಂಗ್ಸ್ ಕಟ್ಟಿದ ಕಮಿಂದು 250 ಎಸೆತಗಳಲ್ಲಿ 16 ಫೋರ್ ಹಾಗೂ 4 ಸಿಕ್ಸ್ಗಳೊಂದಿಗೆ ಅಜೇಯ 182 ರನ್ ಬಾರಿಸಿದರು.
ಹಾಗೆಯೇ ವಿಕೆಟ್ ಕೀಪರ್ ಬ್ಯಾಟರ್ ಕುಸಾಲ್ ಮೆಂಡಿಸ್ 109 ಎಸೆತಗಳಲ್ಲಿ 106 ರನ್ ಕಲೆಹಾಕಿದರು. ಈ ಮೂಲಕ ಶ್ರೀಲಂಕಾ ತಂಡವು ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ ನಷ್ಟಕ್ಕೆ 602 ರನ್ ಕಲೆಹಾಕಿ ಡಿಕ್ಲೇರ್ ಘೋಷಿಸಿತು.
ಕಿವೀಸ್ ಕಿವಿ ಹಿಂಡಿದ ಜಯಸೂರ್ಯ:
602 ರನ್ಗಳ ಪ್ರಥಮ ಇನಿಂಗ್ಸ್ಗೆ ಉತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ನ್ಯೂಝಿಲೆಂಡ್ ತಂಡವು ಯಾವುದೇ ಹಂತದಲ್ಲೂ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಆರಂಭಿಕರಾದ ಟಾಮ್ ಲಾಥಮ್ (2) ಹಾಗೂ ಡೆವೊನ್ ಕಾನ್ವೆ (9) ಬೇಗನೆ ವಿಕೆಟ್ ಒಪ್ಪಿಸಿದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೇನ್ ವಿಲಿಯಮ್ಸನ್ 7 ರನ್ಗಳಿಸಿ ಔಟಾದರು.
ಇದರ ಬೆನ್ನಲ್ಲೇ ಅಜಾಝ್ ಪಟೇಲ್ (8) ಹಾಗೂ ರಚಿನ್ ರವೀಂದ್ರ (10) ಕೂಡ ವಿಕೆಟ್ ಕೈಚೆಲ್ಲಿದರು. ಇನ್ನು ಡೇರಿಲ್ ಮಿಚೆಲ್ (13), ಟಾಮ್ ಬ್ಲಂಡೆಲ್ (1) ಹಾಗೂ ಗ್ಲೆನ್ ಫಿಲಿಪ್ಸ್ (0) ವಿಕೆಟ್ ಕಬಳಿಸುವ ಮೂಲಕ ಪ್ರಭಾತ್ ಜಯಸೂರ್ಯ 5 ವಿಕೆಟ್ಗಳ ಸಾಧನೆ ಮಾಡಿದರು.
ಈ ಹಂತದಲ್ಲಿ ಮಿಚೆಲ್ ಸ್ಯಾಂಟ್ನರ್ 51 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 29 ರನ್ ಬಾರಿಸಿದರು. ಆದರೆ ಮತ್ತೊಂದೆಡೆ ಪ್ರಭಾತ್ ಜಯಸೂರ್ಯ ಸ್ಪಿನ್ ಮೋಡಿಯೊಂದಿಗೆ ಟಿಮ್ ಸೌಥಿ (2) ಗೆ ಪೆವಿಲಿಯನ್ ಹಾದಿ ತೋರಿಸಿದರು.
ಈ ಮೂಲಕ ಶ್ರೀಲಂಕಾ ನ್ಯೂಝಿಲೆಂಡ್ ತಂಡವನ್ನು ಪ್ರಥಮ ಇನಿಂಗ್ಸ್ನಲ್ಲಿ ಕೇವಲ 88 ರನ್ಗಳಿಗೆ ಆಲೌಟ್ ಮಾಡಿದೆ. ಶ್ರೀಲಂಕಾ ಪರ 18 ಓವರ್ಗಳನ್ನು ಎಸೆದ ಪ್ರಭಾತ್ ಜಯಸೂರ್ಯ 6 ಮೇಡನ್ಗಳೊಂದಿಗೆ ಕೇವಲ 42 ರನ್ ನೀಡಿ 6 ವಿಕೆಟ್ ಕಬಳಿಸಿ ಮಿಂಚಿದರು.
ಫಾಲೋಆನ್ ಹೇರಿದ ಶ್ರೀಲಂಕಾ:
ಪ್ರಥಮ ಇನಿಂಗ್ಸ್ನಲ್ಲಿ 514 ರನ್ಗಳ ಹಿನ್ನಡೆ ಹೊಂದಿರುವ ನ್ಯೂಝಿಲೆಂಡ್ ತಂಡಕ್ಕೆ ಶ್ರೀಲಂಕಾ ಫಾಲೋಆನ್ ಹೇರಿದೆ. ಅದರಂತೆ ಕಿವೀಸ್ ಪಡೆ ದ್ವಿತೀಯ ಇನಿಂಗ್ಸ್ ಆರಂಭಿಸಿದೆ. ಆದರೆ ಇಲ್ಲಿ ನ್ಯೂಝಿಲೆಂಡ್ ತಂಡದ ಸ್ಕೋರ್ ಲೆಕ್ಕಾಚಾರ ಶುರುವಾಗಲಿರುವುದು 514 ರನ್ಗಳ ಬಳಿಕ ಎಂಬುದು ವಿಶೇಷ.
ಅಂದರೆ ಪ್ರಥಮ ಇನಿಂಗ್ಸ್ನಲ್ಲಿ ಹಿನ್ನಡೆಯನ್ನು ಪೂರ್ತಿಗೊಳಿಸಿದ ಬಳಿಕವಷ್ಟೇ ದ್ವಿತೀಯ ಇನಿಂಗ್ಸ್ನಲ್ಲಿ ಶ್ರೀಲಂಕಾ ತಂಡಕ್ಕೆ ಗೆಲುವಿನ ಗುರಿ ನೀಡಲು ಸಾಧ್ಯವಾಗುತ್ತದೆ. ಇನ್ನು 514 ರನ್ಗಳ ಒಳಗೆ ನ್ಯೂಝಿಲೆಂಡ್ ತಂಡವನ್ನು ಶ್ರೀಲಂಕಾ ಆಲೌಟ್ ಮಾಡಿದರೆ, ಇನಿಂಗ್ಸ್ ಹಾಗೂ ರನ್ಗಳ ಅಂತರದಿಂದ ಜಯ ಸಾಧಿಸಲಿದೆ.
ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ , ದಿಮುತ್ ಕರುಣಾರತ್ನೆ , ದಿನೇಶ್ ಚಂಡಿಮಲ್ , ಏಂಜೆಲೊ ಮ್ಯಾಥ್ಯೂಸ್ , ಕಮಿಂದು ಮೆಂಡಿಸ್ , ಧನಂಜಯ ಡಿ ಸಿಲ್ವ (ನಾಯಕ) , ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್) , ಮಿಲನ್ ಪ್ರಿಯನಾಥ್ ರಥನಾಯಕೆ , ಪ್ರಭಾತ್ ಜಯಸೂರ್ಯ , ನಿಶಾನ್ ಪೀರಿಸ್ , ಅಸಿತ ಫೆರ್ನಾಂಡೋ.
ಇದನ್ನೂ ಓದಿ: IPL 2025 ರಲ್ಲಿ ಎಷ್ಟು ಪಂದ್ಯಗಳನ್ನಾಡಲಾಗುತ್ತದೆ? ಇಲ್ಲಿದೆ ಮಾಹಿತಿ
ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಾಮ್ ಲಾಥಮ್ , ಡೆವೊನ್ ಕಾನ್ವೇ , ಕೇನ್ ವಿಲಿಯಮ್ಸನ್ , ರಚಿನ್ ರವೀಂದ್ರ , ಡೇರಿಲ್ ಮಿಚೆಲ್ , ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್) , ಗ್ಲೆನ್ ಫಿಲಿಪ್ಸ್ , ಮಿಚೆಲ್ ಸ್ಯಾಂಟ್ನರ್ , ಟಿಮ್ ಸೌಥಿ (ನಾಯಕ) , ಅಜಾಝ್ ಪಟೇಲ್ , ವಿಲಿಯಂ ಒರೂರ್ಕೆ.