Sri Lanka vs Pakistan, 2nd Test: ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಶ್ರೀಲಂಕಾ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ್ (Pakistan) ತಂಡವು ಅಮೋಘ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ಮೊದಲ ಇನಿಂಗ್ಸ್ನಲ್ಲಿ ಕೇವಲ 166 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ನಲ್ಲಿ ಬ್ಯಾಟ್ ಬೀಸಿದ ಪಾಕಿಸ್ತಾನ್ ಪರ ಆರಂಭಿಕ ಆಟಗಾರ ಅಬ್ದುಲ್ಲಾ ಶಫೀಕ್ (201) ದ್ವಿಶತಕ ಸಿಡಿಸಿದರೆ, ಅಘಾ ಸಲ್ಮಾನ್ ಅಜೇಯ 132 ರನ್ ಬಾರಿಸಿದ್ದರು. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ್ ತಂಡವು 5 ವಿಕೆಟ್ಗೆ 576 ರನ್ಗಳಿಸಿ ಡಿಕ್ಲೇರ್ ಘೋಷಿಸಿತು.
410 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಮತ್ತೊಮ್ಮೆ ಕೈ ಕೊಟ್ಟರು. ಇದಾಗ್ಯೂ ಏಂಜಲೊ ಮ್ಯಾಥ್ಯೂಸ್ ಅಜೇಯ 63 ರನ್ ಬಾರಿಸಿ ಕ್ರೀಸ್ ಕಚ್ಚಿ ನಿಂತಿದ್ದರು.
ಆದರೆ ಹಿರಿಯ ಎಡಗೈ ಸ್ಪಿನ್ನರ್ ನೌಮಾನ್ ಅಲಿ ಅವರ ಸ್ಪಿನ್ ಮೋಡಿಗೆ ಲಂಕಾ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ ಶ್ರೀಲಂಕಾ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 188 ರನ್ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಪಾಕಿಸ್ತಾನ್ ತಂಡವು ಇನಿಂಗ್ಸ್ ಹಾಗೂ 222 ರನ್ಗಳ ಅಮೋಘ ಗೆಲುವು ತನ್ನದಾಗಿಸಿಕೊಂಡಿತು.
ಪಾಕಿಸ್ತಾನ್ ಪರ ಮೊದಲ ಇನಿಂಗ್ಸ್ನಲ್ಲಿ ಅಬ್ರಾರ್ ಅಹ್ಮದ್ 4 ವಿಕೆಟ್ ಪಡೆದರೆ, ದ್ವಿತೀಯ ಇನಿಂಗ್ಸ್ನಲ್ಲಿ ನೌಮಾನ್ ಅಲಿ 70 ರನ್ ನೀಡಿ 7 ವಿಕೆಟ್ ಕಬಳಿಸಿ ಮಿಂಚಿದರು.
ಶ್ರೀಲಂಕಾ ತಂಡವನ್ನು ಇನಿಂಗ್ಸ್ ಹಾಗೂ 222 ರನ್ಗಳಿಂದ ಸೋಲಿಸುವ ಮೂಲಕ ಪಾಕಿಸ್ತಾನ್ ತಂಡವು ಐತಿಹಾಸಿಕ ಗೆಲುವನ್ನು ತನ್ನದಾಗಿಸಿಕೊಂಡಿದೆ. ಅಂದರೆ ಶ್ರೀಲಂಕಾ ತಂಡವನ್ನು ತವರಿನಲ್ಲಿ ಅತ್ಯಂತ ಹೀನಾಯವಾಗಿ ಸೋಲಿಸಿದ ಕೀರ್ತಿ ಇದೀಗ ಪಾಕಿಸ್ತಾನ್ ತಂಡಕ್ಕೆ ಸಂದಿದೆ. ಲಂಕಾ ತಂಡ ತವರಿನಲ್ಲಿ ಇದುವರೆಗೆ ಇಂತಹ ಹೀನಾಯ ಸೋಲು ಅನುಭವಿಸಿರಲಿಲ್ಲ.
2 ಪಂದ್ಯಗಳ ಟೆಸ್ಟ್ ಸರಣಿಯ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಪಾಕಿಸ್ತಾನ್ ತಂಡವು 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. ಇದಕ್ಕೂ ಮುನ್ನ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ 4 ವಿಕೆಟ್ಗಳಿಂದ ಸೋಲುಣಿಸಿತ್ತು. ಇದೀಗ 2ನೇ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 222 ರನ್ಗಳಿಂದ ಗೆಲ್ಲುವ ಮೂಲಕ ಪಾಕಿಸ್ತಾನ್ ತಂಡವು ಶ್ರೀಲಂಕಾ ವಿರುದ್ಧ ಸರಣಿ ಗೆದ್ದಿದೆ.
ಶ್ರೀಲಂಕಾ ಪ್ಲೇಯಿಂಗ್ 11: ನಿಶಾನ್ ಮದುಷ್ಕ , ದಿಮುತ್ ಕರುಣಾರತ್ನೆ (ನಾಯಕ) , ಕುಸಾಲ್ ಮೆಂಡಿಸ್ , ಏಂಜೆಲೊ ಮ್ಯಾಥ್ಯೂಸ್ , ದಿನೇಶ್ ಚಂಡಿಮಲ್ , ಧನಂಜಯ ಡಿ ಸಿಲ್ವಾ , ಸದೀರ ಸಮರವಿಕ್ರಮ (ವಿಕೆಟ್ ಕೀಪರ್) , ರಮೇಶ್ ಮೆಂಡಿಸ್ , ಪ್ರಭಾತ್ ಜಯಸೂರ್ಯ , ಅಸಿತ ಫೆರ್ನಾಂಡೋ , ದಿಲ್ಶನ್ ಮಧುಶಂಕ.
ಇದನ್ನೂ ಓದಿ: Zimbabwe: ಝಿಂಬಾಬ್ವೆ ಅಬ್ಬರಕ್ಕೆ ಪಾಕಿಸ್ತಾನ್ ದಾಖಲೆ ಧೂಳೀಪಟ
ಪಾಕಿಸ್ತಾನ್ ಪ್ಲೇಯಿಂಗ್ 11: ಅಬ್ದುಲ್ಲಾ ಶಫೀಕ್ , ಇಮಾಮ್-ಉಲ್-ಹಕ್ , ಶಾನ್ ಮಸೂದ್ , ಬಾಬರ್ ಆಝಂ (ನಾಯಕ) ಸೌದ್ ಶಕೀಲ್ , ಸರ್ಫರಾಜ್ ಅಹ್ಮದ್ (ವಿಕೆಟ್ ಕೀಪರ್) , ಅಘಾ ಸಲ್ಮಾನ್ , ನೌಮಾನ್ ಅಲಿ , ಶಾಹೀನ್ ಅಫ್ರಿದಿ , ನಸೀಮ್ ಶಾ , ಅಬ್ರಾರ್ ಅಹ್ಮದ್.