
ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಮತ್ತು ಸ್ಟಾರ್ ಓಪನರ್ ಸ್ಮೃತಿ ಮಂಧಾನ (Smriti Mandhana) ಬ್ಯಾಟ್ ಹಿಡಿದು ಮೈದಾನಕ್ಕೆ ಕಾಲಿಟ್ಟಾಗಲೆಲ್ಲಾ, ಒಂದಲ್ಲ ಒಂದು ಹೊಸ ದಾಖಲೆ ಸೃಷ್ಟಿಸುತ್ತಾರೆ. ಇದೀಗ ನಡೆಯುತ್ತಿರುವ ಐಸಿಸಿ ಮಹಿಳಾ ವಿಶ್ವಕಪ್‌ನ (Women’s ODI World Cup 2025) ಮೊದಲ ಮೂರು ಪಂದ್ಯಗಳಲ್ಲಿ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿದ್ದ ಮಂಧಾನ, ಇದೀಗ ಆಸ್ಟ್ರೇಲಿಯಾ ವಿರುದ್ಧ ಅಬ್ಬರಿಸುವ ಮೂಲಕ ತಮ್ಮ ಹಳೆಯ ಲಯಕ್ಕೆ ಮರಳಿದ್ದಾರೆ. ಅಲ್ಲದೆ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಈ ದಾಖಲೆಗಳ ಪಟ್ಟಿಯಲ್ಲಿ, ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ಸಂಭವಿಸದ ಅದ್ಭುತ ಸಾಧನೆಯನ್ನು ಸ್ಮೃತಿ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ 80 ರನ್‌ಗಳ ಇನ್ನಿಂಗ್ಸ್ ಅಡಿದ ಸ್ಮೃತಿ, ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ಒಂದು ಸಾವಿರ ರನ್ ಪೂರೈಸಿದರು. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಅಕ್ಟೋಬರ್ 12, ಭಾನುವಾರ ವಿಶಾಖಪಟ್ಟಣದಲ್ಲಿ ನಡೆದ ಈ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿತು. ಈ ಪಂದ್ಯದಲ್ಲಿ ಮಂಧಾನ ಅವರ ಮೇಲೆ ಎಲ್ಲರ ಗಮನವಿತ್ತು, ಏಕೆಂದರೆ ಅವರು ಹಿಂದಿನ ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಉತ್ತಮ ಆರಂಭ ಪಡೆದಿದ್ದರೂ ಅದನ್ನು ಬಿಗ್ ಇನ್ನಿಂಗ್ಸ್ ಅಗಿ ಪರಿವರ್ತಿಸುವಲ್ಲಿ ವಿಫಲರಾಗಿದ್ದರು. ಆದರೆ ಆಸ್ಟ್ರೇಲಿಯಾ ವಿರುದ್ಧ ಲಯ ಕಂಡುಕೊಂಡ ಮಂಧಾನ ರನ್‌ಗಳ ಮಳೆ ಹರಿಸಿದರು.
ಹಿಂದಿನ ಪಂದ್ಯದಲ್ಲಿಯೇ ಮಂಧಾನ ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಏಕದಿನ ರನ್ ಗಳಿಸಿದ ದಾಖಲೆಯನ್ನು ನಿರ್ಮಿಸಿದ್ದರು. ಆದರೆ ಈ ಪಂದ್ಯದಲ್ಲಿ, ಕ್ಯಾಲೆಂಡರ್ ವರ್ಷದಲ್ಲಿ 1,000 ಏಕದಿನ ರನ್ ಗಳಿಸಿದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ವರ್ಷ ಕೇವಲ 18 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಮಂಧಾನ ನಾಲ್ಕು ಶತಕಗಳು ಮತ್ತು ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದಾರೆ.
ಈ ಪಂದ್ಯದಲ್ಲಿ ಕೇವಲ 46 ಎಸೆತಗಳಲ್ಲಿ ವಿಶ್ವಕಪ್‌ನ ಮೊದಲ ಅರ್ಧಶತಕ ಪೂರೈಸಿದ ಮಂದಾನ, 58 ರನ್‌ಗಳ ಗಡಿ ದಾಟುತ್ತಿದ್ದಂತೆ ಏಕದಿನ ಕ್ರಿಕೆಟ್‌ನಲ್ಲಿ 5,000 ರನ್‌ಗಳನ್ನು ಪೂರೈಸಿದರು. ಕೇವಲ 29 ವರ್ಷ ಮತ್ತು 86 ದಿನಗಳಲ್ಲಿ 5,000 ರನ್ ಪೂರೈಸಿದ ಮಂಧಾನ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಮಹಿಳಾ ಕ್ರಿಕೆಟರ್ ಎಂಬ ದಾಖಲೆ ಬರೆದಿದ್ದಾರೆ. ಇದಲ್ಲದೆ, ಕೇವಲ112 ಇನ್ನಿಂಗ್ಸ್‌ಗಳು ಮತ್ತು 5,569 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ ಅತ್ಯಂತ ವೇಗದ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಮೂಲಕ ವೆಸ್ಟ್ ಇಂಡೀಸ್‌ನ ಸ್ಟೆಫಾನಿ ಟೇಲರ್ (129 ಇನ್ನಿಂಗ್ಸ್) ಮತ್ತು ನ್ಯೂಜಿಲೆಂಡ್‌ನ ಸುಜಿ ಬೇಟ್ಸ್ (6,182 ಎಸೆತಗಳು) ಅವರ ದಾಖಲೆಗಳನ್ನು ಮುರಿದರು.
World Cup 2025: ಏಕದಿನ ಕ್ರಿಕೆಟ್‌ನಲ್ಲಿ 28 ವರ್ಷಗಳ ಹಳೆಯ ದಾಖಲೆ ಮುರಿದ ಸ್ಮೃತಿ ಮಂಧಾನ
ಆದಾಗ್ಯೂ, ಮಂಧಾನ ಆಸ್ಟ್ರೇಲಿಯಾ ವಿರುದ್ಧ ಮತ್ತೊಂದು ಶತಕ ಬಾರಿಸುವ ಅವಕಾಶದಿಂದ ವಂಚಿತರಾದರು. 66 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ಗಳಿದ್ದ 80 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿ ಔಟಾದರು. ಈ ಮೂಲಕ ಕೇವಲ 4 ರನ್ಗಳಿಂದ ಆಸ್ಟ್ರೇಲಿಯಾ ವಿರುದ್ಧ 1000 ಏಕದಿನ ರನ್ ಪೂರೈಸುವ ಅವಕಾಶದಿಂದ ವಂಚಿತರಾದರು. ಪ್ರಸ್ತುತ, ಮಂಧಾನ 20 ಇನ್ನಿಂಗ್ಸ್‌ಗಳಲ್ಲಿ 4 ಶತಕ ಮತ್ತು 6 ಅರ್ಧಶತಕಗಳನ್ನು ಒಳಗೊಂಡಂತೆ 996 ರನ್ ಕಲೆಹಾಕಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:54 pm, Sun, 12 October 25