IND A vs SA A: ಸೌತ್ ಆಫ್ರಿಕಾ ವಿರುದ್ಧ ಭರ್ಜರಿ ಶತಕ ಸಿಡಿಸಿದ ಪ್ರದೋಶ್

| Updated By: ಝಾಹಿರ್ ಯೂಸುಫ್

Updated on: Dec 13, 2023 | 9:32 PM

South Africa A vs India A: ಈ ಹಂತದಲ್ಲಿ ಜೊತೆಗೂಡಿದ ಪ್ರದೋಶ್ ಪೌಲ್ ಹಾಗೂ ಸರ್ಫರಾಝ್ ಖಾನ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. 3ನೇ ವಿಕೆಟ್​ಗೆ ಶತಕದ ಜೊತೆಯಾಟವಾಡಿದ ಈ ಜೋಡಿಯು 40 ಓವರ್​ಗಳಲ್ಲಿ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು.

IND A vs SA A: ಸೌತ್ ಆಫ್ರಿಕಾ ವಿರುದ್ಧ ಭರ್ಜರಿ ಶತಕ ಸಿಡಿಸಿದ ಪ್ರದೋಶ್
pradosh paul
Follow us on

ಪೊಟ್ಚೆಫ್‌ಸ್ಟ್ರೂಮ್​ನ ಸೆನ್ವೆಸ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ಎ (South Africa A) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಎ (India A) ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಎ ತಂಡದ ನಾಯಕ ಶ್ರೀಕರ್ ಭರತ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.

ಆರಂಭಿಕ ಆಟಗಾರ ಶೆಕ್ಲೆಟನ್ (0) ಅವರನ್ನು 2ನೇ ಓವರ್​ನಲ್ಲಿ ಔಟ್ ಮಾಡುವ ಮೂಲಕ ವಿಧ್ವತ್ ಕಾವೇರಪ್ಪ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಸೌರಭ್ ಕುಮಾರ್ ಎಸೆತದಲ್ಲಿ ಯಾಸೀನ್ ವಲ್ಲಿ (16) ಕ್ಲೀನ್ ಬೌಲ್ಡ್ ಆದರು.

ಈ ಹಂತದಲ್ಲಿ ಜೊತೆಗೂಡಿದ ರೂಬಿನ್ ಹರ್ಮನ್ ಹಾಗೂ ಜೀನ್ ಡುಪ್ಲೆಸಿಸ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 146 ಎಸೆತಗಳನ್ನು ಎದುರಿಸಿದ ಹರ್ಮನ್​ 95 ರನ್​ಗಳಿಸಿ ಸೌರಭ್​ಗೆ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿದ ಜೀನ್ ಡುಪ್ಲೆಸಿಸ್ 213 ಎಸೆತಗಳಲ್ಲಿ 8 ಫೋರ್ ಹಾಗೂ 1 ಸಿಕ್ಸ್​ನೊಂದಿಗೆ 106 ರನ್ ಬಾರಿಸಿದರು. ಈ ಹಂತದಲ್ಲಿ ದಾಳಿಗಿಳಿದ ಪ್ರಸಿದ್ಧ್ ಕೃಷ್ಣ ಡುಪ್ಲೆಸಿಸ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಅಷ್ಟೇ ಅಲ್ಲದೆ ಕೊನೆಯ ನಾಲ್ವರು ಆಟಗಾರರ ವಿಕೆಟ್ ಕಬಳಿಸಿ ಪ್ರಸಿದ್ಧ್ ಕೃಷ್ಣ ಐದು ವಿಕೆಟ್​ಗಳ ಸಾಧನೆ ಮಾಡಿದರು. ಇದರೊಂದಿಗೆ ಸೌತ್ ಆಫ್ರಿಕಾ ತಂಡವು 319 ರನ್​ಗಳಿಸಿ ಆಲೌಟ್ ಆಯಿತು. ಭಾರತ ಎ ತಂಡದ ಪರ ಪ್ರಸಿದ್ಧ್ ಕೃಷ್ಣ ಕೇವಲ 43 ರನ್​ಗಳಿಗೆ 5 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು.

ಇದಾದ ಬಳಿಕ ಇನಿಂಗ್ಸ್​ ಆರಂಭಿಸಿದ ಭಾರತ ಎ ತಂಡ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಎಡಗೈ ಆರಂಭಿಕ ಸಾಯಿ ಸುದರ್ಶನ್ ಕೇವಲ 14 ರನ್​ಗಳಿಸಿ ವಿಕೆಟ್ ಒಪ್ಪಿಸಿದರೆ, ದೇವದತ್ ಪಡಿಕ್ಕಲ್ 30 ರನ್ ಬಾರಿಸಿ ಔಟಾದರು.

ಈ ಹಂತದಲ್ಲಿ ಜೊತೆಗೂಡಿದ ಪ್ರದೋಶ್ ಪೌಲ್ ಹಾಗೂ ಸರ್ಫರಾಝ್ ಖಾನ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. 3ನೇ ವಿಕೆಟ್​ಗೆ ಶತಕದ ಜೊತೆಯಾಟವಾಡಿದ ಈ ಜೋಡಿಯು 40 ಓವರ್​ಗಳಲ್ಲಿ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು.

ಅಷ್ಟೇ ಅಲ್ಲದೆ 85 ಎಸೆತಗಳಲ್ಲಿ 68 ರನ್ ಬಾರಿಸಿ ಸರ್ಫರಾಝ್ ಖಾನ್ ಔಟಾದರು. ಇದಾಗ್ಯೂ ಪ್ರದೋಶ್ ಪೌಲ್ ಅಬ್ಬರ ಮಾತ್ರ ನಿಲ್ಲಲಿಲ್ಲ. ಸೌತ್ ಆಫ್ರಿಕಾ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದ 22ರ ಹರೆಯದ ಪ್ರದೋಶ್ 141 ಎಸೆತಗಳಲ್ಲಿ​ ಭರ್ಜರಿ ಶತಕ ಪೂರೈಸಿದರು.

ಸೆಂಚುರಿ ಬಳಿಕ ಉತ್ತಮ ಬ್ಯಾಟಿಂಗ್ ಮುಂದುವರೆಸಿದ ಪ್ರದೋಶ್ 209 ಎಸೆತಗಳಲ್ಲಿ 23 ಫೋರ್​ ಹಾಗೂ 1 ಭರ್ಜರಿ ಸಿಕ್ಸ್​ನೊಂದಿಗೆ 163 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.  ಮತ್ತೊಂದೆಡೆ ಶಾರ್ದೂಲ್ ಠಾಕೂರ್ 70 ರನ್​ಗಳ ಕೊಡುಗೆ ನೀಡುವ ಮೂಲಕ ಟೀಮ್ ಇಂಡಿಯಾ ಮೊತ್ತವನ್ನು 350 ರ ಗಡಿದಾಟಿಸಿದರು.

ಅದರಂತೆ ಮೂರನೇ ದಿನದಾಟದ ಮುಕ್ತಾಯದ ವೇಳೆಗೆ ಭಾರತ ಎ ತಂಡವು 6 ವಿಕೆಟ್ ಕಳೆದುಕೊಂಡು 377 ರನ್​ ಕಲೆಹಾಕಿದೆ. ಈ ಮೂಲಕ 58 ರನ್​ಗಳ ಅಲ್ಪ ಮುನ್ನಡೆ ಸಾಧಿಸಿದೆ.

ಸೌತ್ ಆಫ್ರಿಕಾ ಎ ಪ್ಲೇಯಿಂಗ್ ಇಲೆವೆನ್: ಕ್ಯಾಮರೂನ್ ಶೆಕ್ಲೆಟನ್ , ಯಾಸೀನ್ ವಲ್ಲಿ , ರೂಬಿನ್ ಹರ್ಮನ್ , ಜೀನ್ ಡು ಪ್ಲೆಸಿಸ್ , ಬ್ರೈಸ್ ಪಾರ್ಸನ್ಸ್ (ನಾಯಕ) , ಕಾನರ್ ಎಸ್ಟರ್ಹ್ಯೂಜೆನ್ (ವಿಕೆಟ್ ಕೀಪರ್) , ಇವಾನ್ ಜೋನ್ಸ್ , ಈಥನ್ ಬಾಷ್ , ಕರ್ಟ್ಲಿನ್ ಮನ್ನಿಕಮ್ , ಸಿಯಾ ಪ್ಲಾಟ್ಜಿ , ಒಡಿರಿಲ್ ಮೊಡಿಮೊಕೋನೆ.

ಇದನ್ನೂ ಓದಿ: ಧೋನಿ ದಾಖಲೆ ಮುರಿದ ಸೂರ್ಯಕುಮಾರ್ ಯಾದವ್

ಭಾರತ ಎ ಪ್ಲೇಯಿಂಗ್ ಇಲೆವೆನ್: ಸಾಯಿ ಸುದರ್ಶನ್ , ದೇವದತ್ ಪಡಿಕ್ಕಲ್ , ಶ್ರೀಕರ್ ಭರತ್ (ನಾಯಕ) , ಪ್ರದೋಶ್ ಪೌಲ್ , ಸರ್ಫರಾಝ್ ಖಾನ್ , ಧ್ರುವ ಜುರೆಲ್ , ಶಾರ್ದೂಲ್ ಠಾಕೂರ್ , ಸೌರಭ್ ಕುಮಾರ್ , ತುಷಾರ್ ದೇಶಪಾಂಡೆ , ಪ್ರಸಿದ್ಧ್ ಕೃಷ್ಣ , ವಿಧ್ವತ್ ಕಾವೇರಪ್ಪ.