IND vs SA 2nd T20I: ರೋಹಿತ್-ರಹಾನೆಯ ಕೆಟ್ಟ ದಾಖಲೆ ಪಟ್ಟಿಗೆ ಗಿಲ್-ಜೈಸ್ವಾಲ್
India vs South Africa: ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಹಾಗೂ ಶುಭ್ಮನ್ ಗಿಲ್ ಖಾತೆ ತೆರೆಯದೇ ವಿಕೆಟ್ ಒಪ್ಪಿಸಿದ್ದರು. ಇದರೊಂದಿಗೆ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ಭಾರತದ 2ನೇ ಆರಂಭಿಕ ಜೋಡಿ ಎನಿಸಿಕೊಂಡಿದ್ದಾರೆ.
ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯವು ಮಳೆಗೆ ಅಹುತಿಯಾದರೆ, 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಸೋಲನುಭವಿಸಿದೆ. ಗೆಬ್ಬಾಗದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಪರ ನಾಯಕ ಸೂರ್ಯಕುಮಾರ್ ಯಾದವ್ (56) ಹಾಗೂ ರಿಂಕು ಸಿಂಗ್ (68) ಅರ್ಧಶತಕ ಬಾರಿಸಿ ಮಿಂಚಿದ್ದರು.
ಈ ಅರ್ಧಶತಕಗಳ ನೆರವಿನಿಂದ ಟೀಮ್ ಇಂಡಿಯಾ 19.3 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 180 ರನ್ ಕಲೆಹಾಕಿತು. ಈ ವೇಳೆ ಮಳೆ ಬಂದಿದ್ದರಿಂದ ಟೀಮ್ ಇಂಡಿಯಾ ಇನಿಂಗ್ಸ್ ಅನ್ನು ಕೊನೆಗೊಳಿಸಲಾಯಿತು. ಅಷ್ಟೇ ಅಲ್ಲದೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಸೌತ್ ಆಫ್ರಿಕಾ ತಂಡಕ್ಕೆ 15 ಓವರ್ಗಳಲ್ಲಿ 152 ರನ್ಗಳ ಗುರಿ ನೀಡಲಾಯಿತು. ಈ ಗುರಿಯನ್ನು ಕೇವಲ 13.5 ಓವರ್ಗಳಲ್ಲಿ ಚೇಸ್ ಮಾಡಿ ಸೌತ್ ಆಫ್ರಿಕಾ ತಂಡ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ರೋಹಿತ್-ರಹಾನೆ ದಾಖಲೆ ಸರಿಗಟ್ಟಿದ ಗಿಲ್-ಜೈಸ್ವಾಲ್:
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಹಾಗೂ ಶುಭ್ಮನ್ ಗಿಲ್ ಖಾತೆ ತೆರೆಯದೇ ವಿಕೆಟ್ ಒಪ್ಪಿಸಿದ್ದರು. ಇದರೊಂದಿಗೆ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ಭಾರತದ 2ನೇ ಆರಂಭಿಕ ಜೋಡಿ ಎನಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ರೋಹಿತ್ ಶರ್ಮಾ ಹಾಗೂ ಅಜಿಂಕ್ಯ ರಹಾನೆ ಇಂತಹದೊಂದು ಅನಗತ್ಯ ದಾಖಲೆಯನ್ನು ಬರೆದಿದ್ದರು. 2016 ರಲ್ಲಿ ಮಿರ್‌ಪುರದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಅಜಿಂಕ್ಯ ರಹಾನೆ ಇನಿಂಗ್ಸ್ ಆರಂಭಿಸಿದ್ದರು. ಆದರೆ ಈ ಇಬ್ಬರು ಆಟಗಾರರು ಶೂನ್ಯಕ್ಕೆ ಔಟಾಗುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಭಾರತದ ಆರಂಭಿಕ ಜೋಡಿ ಎನಿಸಿಕೊಂಡಿದ್ದರು.
ಇದೀಗ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಶುಭ್ಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ, ರೋಹಿತ್ ಶರ್ಮಾ ಹಾಗೂ ಅಜಿಂಕ್ಯ ರಹಾನೆ ಹೆಸರಿನಲ್ಲಿದ್ದ ಅನಗತ್ಯ ದಾಖಲೆಯ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಸೌತ್ ಆಫ್ರಿಕಾ (ಪ್ಲೇಯಿಂಗ್ XI): ಮ್ಯಾಥ್ಯೂ ಬ್ರೀಟ್ಝ್ಕೆ, ರೀಝ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಆಂಡಿಲ್ ಫೆಹ್ಲುಕ್ವಾಯೊ, ಜೆರಾಲ್ಡ್ ಕೊಯೆಟ್ಜಿ, ಲಿಜಾಡ್ ವಿಲಿಯಮ್ಸ್, ತಬ್ರೇಝ್ ಶಮ್ಸಿ.
ಇದನ್ನೂ ಓದಿ: ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ ಸೂರ್ಯಕುಮಾರ್ ಯಾದವ್
ಭಾರತ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಮುಕೇಶ್ ಕುಮಾರ್.