ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ನ 20ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೌತ್ ಆಫ್ರಿಕಾ ಅಮೋಘ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡ ಉತ್ತಮ ಆರಂಭ ಪಡೆದಿರಲಿಲ್ಲ.
ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ (4) ಮೊದಲ ಓವರ್ನಲ್ಲೇ ವಿಕೆಟ್ ಒಪ್ಪಿಸಿದರು. ಆ ಬಳಿಕ ಉತ್ತಮ ಜೊತೆಯಾಟವಾಡಿದ ರೀಝ ಹೆಂಡ್ರಿಕ್ಸ್ (85) ಹಾಗೂ ರಾಸ್ಸಿ ವಂಡರ್ ಡಸ್ಸೆನ್ (60) ಅರ್ಧಶತಕ ಬಾರಿಸಿ ಮಿಂಚಿದರು. ನಾಯಕ ಐಡೆನ್ ಮಾರ್ಕ್ರಮ್ 42 ರನ್ಗಳ ಕೊಡುಗೆ ನೀಡಿದರು.
ಇನ್ನು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹೆನ್ರಿಕ್ ಕ್ಲಾಸೆನ್ ಸ್ಪೋಟಕ ಇನಿಂಗ್ಸ್ ಆಡಿದರು. ಆರಂಭದಿಂದಲೇ ಇಂಗ್ಲೆಂಡ್ ಬೌಲರ್ಗಳ ಬೆಂಡೆತ್ತಿದ ಕ್ಲಾಸೆನ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಪರಿಣಾಮ ಕೇವಲ 61 ಎಸೆತಗಳಲ್ಲಿ ಭರ್ಜರಿ ಶತಕ ಮೂಡಿಬಂತು.
ಅಂತಿಮವಾಗಿ 67 ಎಸೆತಗಳನ್ನು ಎದುರಿಸಿದ ಹೆನ್ರಿಕ್ ಕ್ಲಾಸೆನ್ 4 ಭರ್ಜರಿ ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ 107 ರನ್ ಬಾರಿಸಿ ಔಟಾದರು. ಇನ್ನು ಕೊನೆಯ ಓವರ್ಗಳ ವೇಳೆ ಮಾರ್ಕೊ ಯಾನ್ಸೆನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 42 ಎಸೆತಗಳನ್ನು ಎದುರಿಸಿದ ಯಾನ್ಸೆನ್ 6 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅಜೇಯ 75 ರನ್ ಬಾರಿಸಿದರು. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದಾಗಿ ಸೌತ್ ಆಫ್ರಿಕಾ ತಂಡವು 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 399 ರನ್ ಕಲೆಹಾಕಿತು.
400 ರನ್ಗಳ ಕಠಿಣ ಗುರಿ ಪಡೆದ ಇಂಗ್ಲೆಂಡ್ ತಂಡಕ್ಕೆ ಸೌತ್ ಆಫ್ರಿಕಾ ಬೌಲರ್ಗಳು ಆರಂಭಿಕ ಆಘಾತ ನೀಡಿದರು. ತಂಡದ ಮೊತ್ತ 24 ರನ್ ಆಗುವಷ್ಟರಲ್ಲಿ ಜಾನಿ ಬೈರ್‌ಸ್ಟೋವ್ (10), ಜೋ ರೂಟ್ (2) ಹಾಗೂ ಡೇವಿಡ್ ಮಲಾನ್ (6) ಪೆವಿಲಿಯನ್ ಸೇರಿದ್ದರು.
ಆ ಬಳಿಕ ಬಂದ ಬೆನ್ ಸ್ಟೋಕ್ಸ್ (2), ಹ್ಯಾರಿ ಬ್ರೂಕ್ (17), ಜೋಸ್ ಬಟ್ಲರ್ (15) ಬೇಗನೆ ವಿಕೆಟ್ ಒಪ್ಪಿಸಿದ್ದರು. ಇನ್ನು ಡೇವಿಡ್ ವಿಲ್ಲಿ 12 ರನ್ಗಳಿಸಿದರೆ, ಆದಿಲ್ ರಶೀದ್ 10 ರನ್ ಬಾರಿಸಿದರು. ಅಲ್ಲಿಗೆ 100 ರನ್ಗಳಿಗೆ ಇಂಗ್ಲೆಂಡ್ 8 ವಿಕೆಟ್ ಕಳೆದುಕೊಂಡಿತು.
ಈ ಹಂತದಲ್ಲಿ ಜೊತೆಗೂಡಿದ ಮಾರ್ಕ್ ವುಡ್ ಹಾಗೂ ಗಸ್ ಅಟ್ಕಿನ್ಸನ್ 9ನೇ ವಿಕೆಟ್ಗೆ 70 ರನ್ಗಳ ಜೊತೆಯಾಟವಾಡಿದರು. ಕೇವಲ 21 ಎಸೆತಗಳಲ್ಲಿ ಗಸ್ 35 ರನ್ ಬಾರಿಸಿದರೆ, ಮಾರ್ಕ್ ವುಡ್ 17 ಎಸೆತಗಳಲ್ಲಿ 5 ಸಿಕ್ಸ್ಗಳೊಂದಿಗೆ ಅಜೇಯ 43 ರನ್ ಸಿಡಿಸಿದರು.
ಈ ವೇಳೆ ದಾಳಿಗಿಳಿದ ಕೇಶವ್ ಮಹಾರಾಜ್ ಗಸ್ ಅಟ್ಕಿನ್ಸನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಇನ್ನು ಕೊನೆಯ ವಿಕೆಟ್ ಆಗಿದ್ದ ರೀಸ್ ಟೋಪ್ಲಿ ಗಾಯದ ಕಾರಣ ಬ್ಯಾಟಿಂಗ್ಗೆ ಇಳಿದಿರಲಿಲ್ಲ. ಈ ಮೂಲಕ ಇಂಗ್ಲೆಂಡ್ 170 ರನ್ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿತು. ಇದರೊಂದಿಗೆ ಸೌತ್ ಆಫ್ರಿಕಾ ತಂಡವು 229 ರನ್ಗಳ ಅಮೋಘ ಗೆಲುವು ದಾಖಲಿಸಿತು.
ಇಂಗ್ಲೆಂಡ್ (ಪ್ಲೇಯಿಂಗ್ XI): ಜಾನಿ ಬೈರ್‌ಸ್ಟೋವ್, ಡೇವಿಡ್ ಮಲನ್, ಜೋ ರೂಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಡೇವಿಡ್ ವಿಲ್ಲಿ, ಆದಿಲ್ ರಶೀದ್, ಗಸ್ ಅಟ್ಕಿನ್ಸನ್, ಮಾರ್ಕ್ ವುಡ್, ರೀಸ್ ಟೋಪ್ಲಿ.
ಇದನ್ನೂ ಓದಿ: ಭರ್ಜರಿ ಸೆಂಚುರಿ ಸಿಡಿಸಿ ಮತ್ತೊಂದು ವಿಶ್ವ ದಾಖಲೆ ಬರೆದ ಕಿಂಗ್ ಕೊಹ್ಲಿ
ಸೌತ್ ಆಫ್ರಿಕಾ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸೆನ್, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್ಗಿಡಿ.