Andries Gous: ಸೌತ್ ಆಫ್ರಿಕಾಗೆ ಭಯ ಹುಟ್ಟಿಸಿದ ದಕ್ಷಿಣ ಆಫ್ರಿಕಾ ಮೂಲದ ಕ್ರಿಕೆಟಿಗ..!

|

Updated on: Jun 20, 2024 | 3:00 PM

Andries Gous: ಯುಎಸ್​ಎ ಪರ 10 ಟಿ20 ಪಂದ್ಯಗಳನ್ನಾಡಿರುವ ಆ್ಯಂಡ್ರೀಸ್ ಗೌಸ್ 4 ಅರ್ಧಶತಕಗಳೊಂದಿಗೆ ಒಟ್ಟು 343 ರನ್ ಕಲೆಹಾಕಿದ್ದಾರೆ. ಅದರಲ್ಲೂ ಸೌತ್ ಆಫ್ರಿಕಾ ವಿರುದ್ಧ ಬಾರಿಸಿದ 80 ರನ್​ಗಳು ಅವರ ಗರಿಷ್ಠ ಸ್ಕೋರ್ ಎಂಬುದು ವಿಶೇಷ. ಇದೀಗ ಸೂಪರ್-8 ರ ಮೊದಲ ಪಂದ್ಯದಲ್ಲೇ ಅಬ್ಬರಿಸಿರುವ ಗೌಸ್ ಕಡೆಯಿಂದ ಮುಂಬರುವ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು.

Andries Gous: ಸೌತ್ ಆಫ್ರಿಕಾಗೆ ಭಯ ಹುಟ್ಟಿಸಿದ ದಕ್ಷಿಣ ಆಫ್ರಿಕಾ ಮೂಲದ ಕ್ರಿಕೆಟಿಗ..!
Andries Gous
Follow us on

T20 World Cup 2024: ಟಿ20 ವಿಶ್ವಕಪ್​ನ ಸೂಪರ್-8 ಸುತ್ತಿನ ಮೊದಲ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಏಕಪಕ್ಷೀಯವಾಗಿ ಸಾಗಲಿದೆ ಅಂದುಕೊಂಡಿದ್ದ ಸೌತ್ ಆಫ್ರಿಕಾ ವಿರುದ್ಧದ ಈ ಪಂದ್ಯದಲ್ಲಿ ಯುಎಸ್​ಎ ತಂಡವು ಕೆಚ್ಚೆದೆಯ ಪ್ರದರ್ಶನ ನೀಡಿದೆ. ಸೌತ್ ಆಫ್ರಿಕಾ ವಿರುದ್ಧ ಇಂತಹ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿದ್ದು ದಕ್ಷಿಣ ಆಫ್ರಿಕಾ ಮೂಲದ ಕ್ರಿಕೆಟಿಗ ಆ್ಯಂಡ್ರೀಸ್ ಗೌಸ್ ಎಂಬುದು ವಿಶೇಷ.

ಅಂದರೆ ಸೌತ್ ಆಫ್ರಿಕಾ ಪರ ಅಂಡರ್-19 ವಿಶ್ವಕಪ್ ಆಡಿದ್ದ ಆ್ಯಂಡ್ರೀಸ್ ಗೌಸ್ ಇದೀಗ ಯುಎಸ್​ಎ ಪರ ಕಣಕ್ಕಿಳಿಯುತ್ತಿದ್ದಾರೆ. ಅದರಲ್ಲೂ ಇದೇ ಮೊದಲ ಬಾರಿಗೆ ತವರು ತಂಡದ ವಿರುದ್ಧ ಸಿಕ್ಕ ಅವಕಾಶದಲ್ಲಿ ಗೌಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ಅಂಟಿಗುವಾದ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 194 ರನ್ ಕಲೆಹಾಕಿತು. ಅತ್ತ ಬೃಹತ್ ಮೊತ್ತ ಪೇರಿಸಿದ್ದರಿಂದ ಸೌತ್ ಆಫ್ರಿಕಾ ಸುಲಭವಾಗಿ ಪಂದ್ಯ ಗೆಲ್ಲಲಿದೆ ಎಂದೇ ಎಲ್ಲರೂ ಭಾವಿಸಿದ್ದರು.

ಆದರೆ ಯುಎಸ್​ಎ ಪರ ಆರಂಭಿಕನಾಗಿ ಕಣಕ್ಕಿಳಿದ ಆ್ಯಂಡ್ರೀಸ್ ಗೌಸ್ ಎಲ್ಲರ ಲೆಕ್ಕಚಾರವನ್ನು ತಲೆಕೆಳಗಾಗಿಸಿದರು. ಅಲ್ಲದೆ ಸೌತ್ ಆಫ್ರಿಕಾ ಬೌಲರ್​ಗಳ ಬೆಂಡೆತ್ತುವ ಮೂಲಕ ಪಂದ್ಯವನ್ನು ರೋಚಕಘಟತ್ತ ಸಾಗಿಸಿದರು.

5 ಭರ್ಜರಿ ಸಿಕ್ಸ್ – 5 ಫೋರ್:

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಆ್ಯಂಡ್ರೀಸ್ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ ಸಿಡಿಸಿದರು. ಪರಿಣಾಮ ಕೊನೆಯ 12 ಎಸೆತಗಳಲ್ಲಿ ಯುಎಸ್​ಎ ತಂಡಕ್ಕೆ 28 ರನ್​ಗಳ ಅವಶ್ಯಕತೆಯಿತ್ತು.

ಈ ಹಂತದಲ್ಲಿ ಅನುಭವಿ ವೇಗಿ ಕಗಿಸೊ ರಬಾಡ ಎಸೆದ 19ನೇ ಓವರ್​ನಲ್ಲಿ ಕೇವಲ 2 ರನ್ ನೀಡಿದರು. ಈ ಓವರ್​ನಲ್ಲಿ ಆ್ಯಂಡ್ರೀಸ್ ಗೌಸ್​ಗೆ ಸ್ಟ್ರೈಕ್​ ಕೂಡ ಸಿಗಲಿಲ್ಲ.

ಪರಿಣಾಮ ಕೊನೆಯ ಓವರ್​ನಲ್ಲಿ 26 ರನ್​ಗಳ ಟಾರ್ಗೆಟ್ ಪಡೆಯಿತು. ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ ಆ್ಯಂಡ್ರೀಸ್ ಗೌಸ್ 47 ಎಸೆತಗಳಲ್ಲಿ ಅಜೇಯ 80 ರನ್ ಬಾರಿಸಿದರು. ಈ ಮೂಲಕ ಯುಎಸ್​ಎ ತಂಡ 18 ರನ್​ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ: Phil Salt: 6,6,6,6,6: ಹೊಸ ದಾಖಲೆ ಬರೆದ ಫಿಲ್ ಸಾಲ್ಟ್

ರಬಾಡ-ಗೌಸ್:

ಸೌತ್ ಆಫ್ರಿಕಾ ಮೂಲದವರಾಗಿರುವ ಆ್ಯಂಡ್ರೀಸ್ ಗೌಸ್ ಈ ಹಿಂದೆ ಕಗಿಸೊ ರಬಾಡ, ಲಿಝಾಡ್ ವಿಲಿಯಮ್ಸ್ ಸೇರಿದಂತೆ ಪ್ರಮುಖ ಆಟಗಾರರೊಂದಿಗೆ ಅಂಡರ್-19 ಕ್ರಿಕೆಟ್​ನಲ್ಲಿ ಸೌತ್ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ 30 ವರ್ಷದ ಗೌಸ್ ಯುಎಸ್​ಎ ಪರ ಇನಿಂಗ್ಸ್ ಆರಂಭಿಸುತ್ತಿದ್ದಾರೆ. ಇಲ್ಲಿ ಕಗಿಸೊ ರಬಾಡ ಹಾಗು ಆ್ಯಂಡ್ರೀಸ್ ಗೌಸ್ ಟಿ20 ವಿಶ್ವಕಪ್​ನಲ್ಲಿ ಎದುರಾಳಿಗಳಾಗಿ ಕಣಕ್ಕಿಳಿದಿರುವುದು ವಿಶೇಷ.