ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಇಂದು ನಡೆಯಲಿರುವ 23ನೇ ಪಂದ್ಯದಲ್ಲಿ ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ಹಾಗೂ ಶಕಿಬ್ ಅಹ್ ಹಸನ್ ನೇತೃತ್ವದ ಬಾಂಗ್ಲಾದೇಶ (South Africa vs Bangladesh) ತಂಡಗಳು ಸೆಣೆಸಾಟ ನಡೆಸಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಈ ಹೈವೋಲ್ಟೇಜ್ ಪಂದ್ಯವನ್ನು ಏರ್ಪಡಿಸಲಾಗಿದೆ. ಉಭಯ ತಂಡಗಳು ಇದುವರೆಗೆ ಒಟ್ಟು ನಾಲ್ಕು ಪಂದ್ಯಗಳನ್ನು ಆಡಿದೆ. ಇದರಲ್ಲಿ ಆಫ್ರಿಕಾ ಮೂರು ಜಯ, ಒಂದು ಸೋಲಿನೊಂದಿಗೆ 6 ಅಂಕ ಪಡೆದು ಮೂರನೇ ಸ್ಥಾನದಲ್ಲಿದ್ದರೆ, ಬಾಂಗ್ಲಾ ಮೂರು ಸೋಲುಂಡು ಆರನೇ ಸ್ಥಾನದಲ್ಲಿದೆ. ಆಫ್ರಿಕಾ ಇಂದಿನ ಪಂದ್ಯ ಗೆದ್ದರೆ ಟಾಪ್ 2ಗೆ ಏರಲಿದೆ.
ಹರಿಣಗಳ ಪಡೆ ಅಚ್ಚರಿ ಎಂಬಂತೆ ನೆದರ್ಲೆಂಡ್ಸ್ ವಿರುದ್ಧ ಸೋತಿದ್ದು ಬಿಟ್ಟರೆ ಉಳಿದ ತಂಡಗಳ ವಿರುದ್ಧ ಡೊಡ್ಡ ಅಂತರದ ಜಯ ಕಂಡಿದೆ. ಅದರಲ್ಲೂ ಹಿಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ದಾಖಲೆಯ 229 ರನ್ಗಳಿಂದ ಗೆದ್ದು ಬೀಗಿತ್ತು. ಲುಂಗಿ ಎನ್ಗಿಡಿ, ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೊಯೆಟ್ಜಿ, ಕಗಿಸೊ ರಬಾಡ ಬೌಲಿಂಗ್ನಲ್ಲಿ ಫಾರ್ಮ್ಗೆ ಬಂದಿರುವುದು ತಂಡದ ದೊಡ್ಡ ಪ್ಲಸ್ ಪಾಯಿಂಟ್. ಬ್ಯಾಟಿಂಗ್ನಲ್ಲಿ ಉತ್ತಮ ಆರಂಭ ಪಡೆದುಕೊಳ್ಳದಿದ್ದರೂ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಪ್ರತಿ ಪಂದ್ಯದಲ್ಲಿ ನೆರವಾಗುತ್ತಿದ್ದಾರೆ.
ಇತ್ತ ಬಾಂಗ್ಲಾ ತಂಡ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಆದರೆ, ಸಂಘಟಿತ ಪ್ರದರ್ಶನ ನೀಡುವಲ್ಲಿ ಎಡವುತ್ತಿದೆ. ಬ್ಯಾಟರ್ಗಳು ಸ್ಕೋರ್ ಮಾಡಿದರೆ ಬೌಲರ್ಗಳು ಕಮಾಲ್ ಮಾಡುತ್ತಿಲ್ಲ. ನಾಯಕ ಶಕಿಬ್ ಹಾಗೂ ಅನುಭವಿ ಮುಶ್ಫಿಕರ್ ರಹೀಮ್ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಮೊಹಮ್ಮದುಲ್ಲ ಕೊನೆಯ ಹಂತದಲ್ಲಿ ರನ್ ಕಲೆಹಾಕುತ್ತಿದ್ದಾರೆ. ಉಳಿದ ಬ್ಯಾಟರ್ಗಳಿಂದ ನಿರೀಕ್ಷೆಗೆ ತಕ್ಕ ಪ್ರದರ್ಶನ ಬರುತ್ತಿಲ್ಲ. ಬೌಲಿಂಗ್ನಲ್ಲೂ ಟಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರೆಹ್ಮಾನ್, ಮೆಹ್ದಿ ಹಸನ್ ಮಿಂಚುತ್ತಿಲ್ಲ.
ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದ ಬ್ಯಾಟ್ಸ್‌ಮನ್‌ಗಳಿಗೆ ಸ್ವರ್ಗ ಎಂದು ಹೇಳಬಹುದು. ಬೌಂಡರಿಗಳು ತುಂಬಾ ಚಿಕ್ಕದಿರುವ ಕಾರಣ ರನ್ ಬರುತ್ತದೆ. ಆದಾಗ್ಯೂ, ಬೌಲಿಂಗ್ ದೃಷ್ಟಿಕೋನದಿಂದ, ಪಿಚ್ ಸ್ಪಿನ್ನರ್‌ಗಳಿಗೆ ಸ್ವಲ್ಪ ಸಹಾಯ ಮಾಡುತ್ತದೆ. ಇಬ್ಬನಿಯ ಅಂಶವನ್ನು ಗಮನದಲ್ಲಿಟ್ಟುಕೊಂಡು ಟಾಸ್ ಗೆದ್ದ ನಂತರ ನಾಯಕರು ಮೊದಲು ಫೀಲ್ಡಿಂಗ್ ಮಾಡುವ ಸಾಧ್ಯತೆಯಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಪುರುಷರ ODIಗಳಲ್ಲಿ ತಂಡವೊಂದು ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 245 ಆಗಿದೆ. ಇಲ್ಲಿ ಆಡಿದ 29 ODI ಪಂದ್ಯಗಳಲ್ಲಿ 16 ಬಾರಿ ಎರಡನೇ ಬ್ಯಾಟಿಂಗ್ ಮಾಡುವ ತಂಡಗಳು ಗೆದ್ದಿವೆ. ಆದ್ದರಿಂದ ಟಾಸ್ ದೊಡ್ಡ ವ್ಯತ್ಯಾಸ ಉಂಟುಮಾಡುವ ಸಾಧ್ಯತೆಯಿಲ್ಲ.
ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್, ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡುಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ, ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೊಯೆಟ್ಜಿ ಕಗಿಸೊ ರಬಾಡ, ಲಿಜಾಡ್ ವಿಲಿಯಮ್ಸ್ ಹೆಂಡ್ರಿಕ್ಸ್, ಆಂಡಿಲೆ ಫೆಹ್ಲುಕ್ವಾಯೊ, ತಬ್ರೈಜ್ ಶಮ್ಸಿ.
ಬಾಂಗ್ಲಾದೇಶ ತಂಡ: ಲಿಟ್ಟನ್ ದಾಸ್, ತಂಜಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಮೆಹಿದಿ ಹಸನ್ ಮಿರಾಜ್, ಶಕಿಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ತೌಹಿದ್ ಹೃದೊಯ್, ಮಹೇದಿ ಹಸನ್, ಟಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರೆಹ್ಮಾನ್, ತನ್ಝಿಮ್ ಹಸನ್ ಸಾಕಿಬ್, ನಸುಮ್ ಅಹ್ಮದ್, ಮಹಮ್ಮದುಲ್ಲಾ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ