PAK vs AFG: ಪಾಕಿಸ್ತಾನ್ಗೆ ಮಣ್ಣು ಮುಕ್ಕಿಸಿದ ಅಫ್ಘಾನಿಸ್ತಾನ್
Afghanistan vs Pakistan: ಏಕದಿನ ಕ್ರಿಕೆಟ್ನಲ್ಲಿ ಪಾಕಿಸ್ತಾನ್ ಹಾಗೂ ಅಫ್ಘಾನಿಸ್ತಾನ್ ತಂಡಗಳು 8 ಬಾರಿ ಮುಖಾಮುಖಿಯಾಗಿವೆ. ಈ ವೇಳೆ 7 ಬಾರಿ ಪಾಕಿಸ್ತಾನ್ ತಂಡ ಜಯ ಸಾಧಿಸಿತ್ತು. ಇದೀಗ 8ನೇ ಬಾರಿಯ ಸೆಣಸಾಟದಲ್ಲಿ ಪಾಕ್ ಪಡೆಯನ್ನು ಬಗ್ಗು ಬಡಿದು ಅಫ್ಘಾನ್ ಚೊಚ್ಚಲ ಜಯ ಸಾಧಿಸಿರುವುದು ವಿಶೇಷ.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ನ 22ನೇ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಅಫ್ಘಾನಿಸ್ತಾನ್ ತಂಡ ಐತಿಹಾಸಿಕ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಬಾಬರ್ ಆಝಂ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ತಂಡಕ್ಕೆ ಆರಂಭಿಕರಾದ ಅಬ್ದುಲ್ಲ ಶಫೀಕ್ (58) ಹಾಗೂ ಇಮಾಮ್ ಉಲ್ ಹಕ್ (17) ಉತ್ತಮ ಆರಂಭ ಒದಗಿಸಿದ್ದರು.
ಆ ಬಳಿಕ ಬ್ಯಾಟ್ ಬೀಸಿದ ನಾಯಕ ಬಾಬರ್ ಆಝಂ 92 ಎಸೆತಗಳಲ್ಲಿ 74 ರನ್ ಬಾರಿಸಿದರು. ಇನ್ನು ಸೌದ್ ಶಕೀಲ್ 25 ರನ್ಗಳ ಕೊಡುಗೆ ನೀಡಿದರು. ಅಂತಿಮ ಓವರ್ಗಳ ವೇಳೆ ಅಬ್ಬರಿಸಿದ ಶಾದಾಬ್ ಖಾನ್ 38 ಎಸೆತಗಳಲ್ಲಿ 40 ರನ್ ಬಾರಿಸಿದರೆ, ಇಫ್ತಿಕರ್ ಅಹ್ಮದ್ ಕೇವಲ 27 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 40 ರನ್ ಚಚ್ಚಿದರು. ಪರಿಣಾಮ ನಿಗದಿತ 50 ಓವರ್ಗಳಲ್ಲಿ ಪಾಕಿಸ್ತಾನ್ ತಂಡದ ಮೊತ್ತ 7 ವಿಕೆಟ್ ನಷ್ಟಕ್ಕೆ 282 ಕ್ಕೆ ಬಂದು ನಿಂತಿತು.
283 ರನ್ಗಳ ಸ್ಪರ್ಧಾತ್ಮಕ ಗುರಿ ಪಡೆದ ಅಫ್ಘಾನಿಸ್ತಾನ್ ತಂಡಕ್ಕೆ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 130 ರನ್ಗಳ ಜೊತೆಯಾಟವಾಡಿದ ಬಳಿಕ ಗುರ್ಬಾಝ್ (65) ಔಟಾದರು. ಈ ಹಂತದಲ್ಲಿ ಜೊತೆಗೂಡಿದ ಇಬ್ರಾಹಿಂ ಝದ್ರಾನ್ ಹಾಗೂ ರಹಮತ್ ಶಾ 2ನೇ ವಿಕೆಟ್ಗೆ 60 ರನ್ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ 87 ರನ್ಗಳಿಸಿದ್ದ ಇಬ್ರಾಹಿಂ ಝದ್ರಾನ್ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಹಮತ್ ಶಾ 58 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ತಂಡಕ್ಕೆ ಆಸರೆಯಾದರು. ಪರಿಣಾಮ ಕೊನೆಯ 8 ಓವರ್ಗಳಲ್ಲಿ ಅಫ್ಘಾನಿಸ್ತಾನ್ ತಂಡಕ್ಕೆ ಗೆಲ್ಲಲು 54 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಉತ್ತಮ ಹೊಂದಾಣಿಕೆ ಬ್ಯಾಟಿಂಗ್ ಪ್ರದರ್ಶಿಸಿದ ಹಶ್ಮತ್ ಶಾಹಿದಿ ಹಾಗೂ ರಹಮತ್ ಶಾ ವಿಕೆಟ್ ಬೀಳದಂತೆ ಕಾಪಾಡಿಕೊಂಡರು. ಅದರಂತೆ ಕೊನೆಯ 5 ಓವರ್ಗಳಲ್ಲಿ ಅಫ್ಘಾನ್ ತಂಡಕ್ಕೆ 30 ರನ್ಗಳ ಅವಶ್ಯಕತೆಯಿತ್ತು.
ಈ ಹಂತದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ನೊಂದಿಗೆ ರನ್ ಕಲೆಹಾಕುತ್ತಾ ಸಾಗಿದ ರಹಮತ್ ಶಾ (77) ಹಾಗೂ ಹಶ್ಮತ್ ಶಾಹಿದಿ (48) ತಂಡದ ಗೆಲುವನ್ನು ಖಚಿತಪಡಿಸಿದರು. ಅದರಲ್ಲೂ ಕೊನೆಯ 16 ಎಸೆತಗಳಲ್ಲಿ 11 ರನ್ ಬೇಕಿದ್ದಾಗ ರಹಮತ್ ಶಾ ಭರ್ಜರಿ ಸಿಕ್ಸ್ ಸಿಡಿಸಿದರು. ಅಂತಿಮವಾಗಿ ಅಫ್ಘಾನಿಸ್ತಾನ್ ತಂಡವು 49 ಓವರ್ಗಳಲ್ಲಿ 286 ರನ್ ಬಾರಿಸುವ ಮೂಲಕ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಇದು ಪಾಕಿಸ್ತಾನ್ ವಿರುದ್ಧದ ಅಫ್ಘಾನಿಸ್ತಾನ್ ತಂಡದ ಮೊದಲ ಗೆಲುವು ಎಂಬುದು ವಿಶೇಷ.
ಪಾಕಿಸ್ತಾನ (ಪ್ಲೇಯಿಂಗ್ XI): ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಉಸಾಮಾ ಮಿರ್, ಶಾಹೀನ್ ಅಫ್ರಿದಿ, ಹಸನ್ ಅಲಿ, ಹ್ಯಾರಿಸ್ ರೌಫ್.
ಇದನ್ನೂ ಓದಿ: Virat Kohli: ಕಿಂಗ್ ಕೊಹ್ಲಿಯ ಅಬ್ಬರಕ್ಕೆ ಸಚಿನ್ ವಿಶ್ವ ದಾಖಲೆ ಉಡೀಸ್
ಅಫ್ಘಾನಿಸ್ತಾನ್ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ(ನಾಯಕ), ಅಝ್ಮತುಲ್ಲಾ ಒಮರ್ಜಾಯ್, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ನೂರ್ ಅಹ್ಮದ್.
Published On - 9:59 pm, Mon, 23 October 23