SA vs PAK: 478 ರನ್ ಬಾರಿಸಿಯೂ 10 ವಿಕೆಟ್‌ಗಳಿಂದ ಸೋತ ಪಾಕಿಸ್ತಾನ; ಕೈತಪ್ಪಿದ ಸರಣಿ
SA vs PAK: ದಕ್ಷಿಣ ಆಫ್ರಿಕಾ ತಂಡವು ಪಾಕಿಸ್ತಾನವನ್ನು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದಿಂದ ಸೋಲಿಸಿದೆ. ಎರಡನೇ ಪಂದ್ಯದಲ್ಲಿ ಆಫ್ರಿಕಾ ಪಡೆ 10 ವಿಕೆಟ್‌ಗಳಿಂದ ಅದ್ಭುತ ಗೆಲುವು ಸಾಧಿಸಿದೆ. ರಿಕೆಲ್ಟನ್‌ರ ದ್ವಿಶತಕ ಮತ್ತು ಬಾವುಮಾ, ವಾರೆನ್ ಅವರ ಶತಕಗಳು ಆಫ್ರಿಕಾ ತಂಡಕ್ಕೆ ಬೃಹತ್ ಮೊತ್ತ ಗಳಿಸಲು ಸಹಾಯ ಮಾಡಿದವು. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಕೂಡ ಪಡೆದುಕೊಂಡಿದೆ.
ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ಅಂದರೆ 10 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಉಭಯ ತಂಡಗಳ ನಡುವೆ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಸಹ ಆಫ್ರಿಕಾ ತಂಡ ಎರಡು ವಿಕೆಟ್‌ಗಳನ್ನು ಗೆದ್ದುಕೊಂಡಿತ್ತು. ಇದರೊಂದಿಗೆ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನವನ್ನು ಕ್ಲೀನ್ ಸ್ವೀಪ್ ಮಾಡುವಲ್ಲಿ ಬವುಮಾ ಪಡೆ ಯಶಸ್ವಿಯಾಗಿದೆ. ಇದರೊಂದಿಗೆ ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆಯನ್ನು ಪಡೆದುಕೊಂಡಿದೆ.
ಬೃಹತ್ ಮೊತ್ತ ಕಲೆಹಾಕಿದ ಆಫ್ರಿಕಾ
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ರಿಯಾನ್ ರಿಕೆಲ್ಟನ್ ಅವರ ದ್ವಿಶತಕ ಮತ್ತು ಟೆಂಬಾ ಬಾವುಮಾ ಹಾಗೂ ಕೈಲ್ ವಾರೆನ್ ಅವರ ಶತಕದ ಇನ್ನಿಂಗ್ಸ್‌ನ ಆಧಾರದ ಮೇಲೆ ಮೊದಲ ಇನ್ನಿಂಗ್ಸ್‌ನಲ್ಲಿ 615 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 194 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಫಾಲೋ-ಆನ್ ಉಳಿಸಲು ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 416 ರನ್ ಗಳಿಸಬೇಕಾಗಿತ್ತು. ಆದರೆ ಅಷ್ಟು ರನ್ಗಳನ್ನು ಕಲೆಹಾಕಲು ಸಾಧ್ಯವಾಗದ ಕಾರಣ ಪಾಕಿಸ್ತಾನಕ್ಕೆ ಫಾಲೋ ಆನ್ ಹೇರಲಾಯಿತು.
ಪಾಕಿಸ್ತಾನ ತಂಡದ ಪುನರಾಗಮನ ಫಲಿಸಲಿಲ್ಲ
ಮೊದಲ ಇನ್ನಿಂಗ್ಸ್‌ನಲ್ಲಿ 194 ರನ್‌ಗಳಿಗೆ ಆಲೌಟ್ ಆಗಿದ್ದ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮವಾಗಿ ಆಡಿದರು. ನಾಯಕ ಶಾನ್ ಮಸೂದ್ 145 ರನ್ ಗಳ ಇನಿಂಗ್ಸ್ ಆಡಿದರೆ, ಬಾಬರ್ ಆಝಂ ಕೂಡ 81 ರನ್ ಕೊಡುಗೆ ನೀಡಿದರು. ಸಲ್ಮಾನ್ ಅಘಾ ಕೂಡ 48 ರನ್‌ಗಳಿಸುವ ಮೂಲಕ ತಂಡದ ಮೊತ್ತವನ್ನು 478 ರನ್‌ಗಳಿಗೆ ಕೊಂಡೊಯ್ದರು. ಈ ಮೂಲಕ ಪಾಕಿಸ್ತಾನ ತಂಡ ಫಾಲೋ-ಆನ್ ನಂತರ ಅತಿ ದೊಡ್ಡ ಸ್ಕೋರ್ ಕಲೆಹಾಕಿದ ದಾಖಲೆಯನ್ನು ಬರೆಯಿತು. ಇದರ ಜೊತೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಯಾವುದೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನವು ಮೊದಲ ಬಾರಿಗೆ ಇಷ್ಟು ದೊಡ್ಡ ಸ್ಕೋರ್ ಕಲೆಹಾಕಿದ ಸಾಧನೆ ಮಾಡಿತು. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಕಲೆಹಾಕಿದ್ದ ಆಫ್ರಿಕಾ ಪಡೆಗೆ ಅಂತಿಮವಾಗಿ ಗೆಲುವಿಗೆ ಸಿಕ್ಕಿದ್ದು 58 ರನ್‌ಗಳ ಗುರಿ ಮಾತ್ರ.
South Africa complete a comprehensive win in Cape Town to take the series 2-0 👏#WTC25 #SAvPAK 📝: https://t.co/L7gnQUIBxW pic.twitter.com/AP8ME53iOT
— ICC (@ICC) January 6, 2025
ಆಫ್ರಿಕಾ- ಆಸೀಸ್ ನಡುವೆ ಫೈನಲ್
ಈ ಗುರಿಯನ್ನು ದಕ್ಷಿಣ ಆಫ್ರಿಕಾ ಸುಲಭವಾಗಿ ಸಾಧಿಸಿ 10 ವಿಕೆಟ್‌ಗಳಿಂದ ಜಯಗಳಿಸಿತು. ಇದರೊಂದಿಗೆ 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತು. ಮೇಲೆ ಹೇಳಿದಂತೆ ಈ ಬಾರಿ ದಕ್ಷಿಣ ಆಫ್ರಿಕಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಟಿಕೆಟ್ ಪಡೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ಈ ಗೆಲುವು ದಕ್ಷಿಣ ಆಫ್ರಿಕಾ ಆಟಗಾರರ ಮನೋಬಲವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ. ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು ಹಾಲಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ