INDW vs SAW: ಕಳಪೆ ಫೀಲ್ಡಿಂಗ್, ಬೌಲಿಂಗ್ಗೆ ಸೋಲಿನ ಬೆಲೆ ತೆತ್ತ ಭಾರತ..!
INDW vs SAW: ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮಹಿಳಾ ತಂಡ, ಭಾರತ ವನಿತಾ ಪಡೆಯನ್ನು 12 ರನ್ಗಳಿಂದ ಮಣಿಸುವ ಮೂಲಕ ಟಿ20 ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಇದರೊಂದಿಗೆ ಭಾರತ ಪ್ರವಾಸದಲ್ಲಿ ದಕ್ಷಿಣ ಆಫ್ರಿಕಾ ತಂಡ ಮೊದಲ ಬಾರಿಗೆ ಗೆಲುವಿನ ಖಾತೆ ತೆರೆದಿದೆ.
ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮಹಿಳಾ ತಂಡ, ಭಾರತ ವನಿತಾ ಪಡೆಯನ್ನು 12 ರನ್ಗಳಿಂದ ಮಣಿಸುವ ಮೂಲಕ ಟಿ20 ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಇದರೊಂದಿಗೆ ಭಾರತ ಪ್ರವಾಸದಲ್ಲಿ ದಕ್ಷಿಣ ಆಫ್ರಿಕಾ ತಂಡ ಮೊದಲ ಬಾರಿಗೆ ಗೆಲುವಿನ ಖಾತೆ ತೆರೆದಿದೆ. ಟಿ20 ಸರಣಿಗೂ ಮುನ್ನ ನಡೆದಿದ್ದ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಏಕೈಕ ಟೆಸ್ಟ್ ಪಂದ್ಯವನ್ನು ಭಾರತ ಕ್ಲೀನ್ ಸ್ವೀಪ್ ಮಾಡಿತ್ತು. ಟಿ20 ಸರಣಿಯಲ್ಲೂ ಭಾರತಕ್ಕೆ ಗೆಲುವಿನ ಶುಭಾರಂಭ ಮಾಡುವ ಅವಕಾಶವಿತ್ತು. ಆದರೆ ಕಳಪೆ ಫೀಲ್ಡಿಂಗ್ ಮತ್ತು ಬೌಲಿಂಗ್ನಿಂದಾಗಿ ತಂಡ ಸೋಲಿನ ಬೆಲೆ ತೆರಬೇಕಾಯಿತು.
ಭಾರತದ ಕಳಪೆ ಫೀಲ್ಡಿಂಗ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಉತ್ತಮ ಆರಂಭ ಲಭಿಸಿತು. ಆರಂಭಿಕರಾದ ನಾಯಕಿ ಲಾರಾ ವೊಲ್ವಾರ್ಡ್ಟ್ ಹಾಗೂ ತಜ್ಮಿನ್ ಬ್ರಿಟ್ಸ್ ಮೊದಲ ವಿಕೆಟ್ಗೆ 50 ರನ್ಗಳ ಜೊತೆಯಾಟ ನೀಡಿದರು. ಈ ಜೊತೆಯಾಟಕ್ಕೆ ಶ್ರೇಯಾಂಕ ಕೈಚೆಲ್ಲಿದ ಸುಲಭ ಕ್ಯಾಚ್ ಕೂಡ ಕಾರಣವಾಯಿತು. ವಾಸ್ತವವಾಗಿ 3ನೇ ಓವರ್ನಲ್ಲಿ ತಜ್ಮಿನ್ ಬ್ರಿಟ್ಸ್ ಸುಲಭ ಕ್ಯಾಚ್ ನೀಡಿದ್ದರು. ಆದರೆ ಬ್ಯಾಕ್ವರ್ಡ್ ಪಾಯಿಂಟ್ನಲ್ಲಿ ನಿಂತಿದ್ದ ಶ್ರೇಯಾಂಕ ಸುಲಭ ಕ್ಯಾಚ್ ಚೆಲ್ಲಿದರು. ಜೀವದಾನದ ಲಾಭ ಪಡೆದ ತಜ್ಮಿನ್ ಬ್ರಿಟ್ಸ್ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದರು. 33 ರನ್ಗಳಿಗೆ ನಾಯಕಿ ಲಾರಾ ವಿಕೆಟ್ ಒಪ್ಪಿಸಿದರೆ, ನಂತರ ಬಂದ ಮರಿಜಾನ್ನೆ ಕಪ್ ಕೂಡ 57 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. 10ನೇ ಓವರ್ನಲ್ಲಿ ಸ್ಮೃತಿ ಕೈಚೆಲ್ಲಿದ ಕ್ಯಾಚ್ ಕೂಡ ಮರಿಜಾನ್ನೆ ಕಪ್ ಅರ್ಧಶತಕ ಬಾರಿಸಲು ಸಹಾಯಕವಾಯಿತು.
81 ರನ್ ಚಚ್ಚಿದ ತಜ್ಮಿನ್ ಬ್ರಿಟ್ಸ್
ಇದು ಸಾಲದೆಂಬಂತೆ 16 ನೇ ಓವರ್ನಲ್ಲಿ ತಜ್ಮಿನ್ ಬ್ರಿಟ್ಸ್ ಎರಡನೇ ಬಾರಿಗೆ ನೀಡಿದ ಸುಲಭ ಕ್ಯಾಚ್ ಅನ್ನು ವಿಕೆಟ್ ಕೀಪರ್ ರಿಚಾ ಘೋಷ್ ಕೈಚೆಲ್ಲಿದರು. ಇದು ತಂಡಕ್ಕೆ ತುಂಬಾ ದುಬಾರಿಯಾಯಿತು. ಕೊನೆಯಲ್ಲಿ ಉಗ್ರರೂಪ ತಾಳಿದ ತಜ್ಮಿನ್ ಬ್ರಿಟ್ಸ್ 56 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 81 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಹೀಗಾಗಿ ದಕ್ಷಿಣ ಆಫ್ರಿಕಾ ತಂಡ 20 ಓವರ್ಗಳಲ್ಲಿ ಬರೋಬ್ಬರಿ 189 ರನ್ ಕಲೆಹಾಕಿತು.
A valiant effort from India, but South Africa come out on top to take a lead in the series 👏#INDvSA 📝: https://t.co/81k2o40hzF pic.twitter.com/w7h4ulcaXY
— ICC (@ICC) July 5, 2024
ಭಾರತಕ್ಕೂ ಉತ್ತಮ ಆರಂಭ
ಈ ಗುರಿ ಬೆನ್ನಟ್ಟಿದ ಭಾರತಕ್ಕೂ ಉತ್ತಮ ಆರಂಭ ಸಿಕ್ಕಿತು.ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ವೇಗದ ಆರಂಭ ನೀಡಿದರು. ಆದರೆ ಈ ಜೊತೆಯಾಟ ಶಫಾಲಿ ವಿಕೆಟ್ ಪತನದೊಂದಿಗೆ ಅಂತ್ಯಗೊಂಡಿತು. ಆದರೂ ಈ ಇಬ್ಬರು ಮೊದಲ ವಿಕೆಟ್ಗೆ 56 ರನ್ಗಳ ಜೊತೆಯಾಟ ನೀಡಿದರು. ಮೂರನೇ ಕ್ರಮಾಂಕದಲ್ಲಿ ಬಂದ ಹೇಮಲತಾ 14 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದಲ್ಲದೆ, ಹೆಚ್ಚು ಡಾಟ್ ಬಾಲ್ಗಳನ್ನು ಆಡುವ ಮೂಲಕ ಸ್ಮೃತಿಗೆ ಒತ್ತಡ ಹೆಚ್ಚಿಸಿದರು. ಹೀಗಾಗಿ ಹೊಡೆಯಲೇಬೇಕಾದ ಅನಿವಾರ್ಯತೆಯಿಂದ ಸಿಕ್ಸರ್ ಬಾರಿಸುವ ಯತ್ನದಲ್ಲಿ ಸ್ಮೃತಿ ಸ್ಟಂಪ್ ಔಟ್ ಆದರು. ಈ ವೇಳೆಗೆ ಸ್ಮೃತಿ 30 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಾಯದಿಂದ 47 ರನ್ಗಳ ಕಾಣಿಕೆ ನೀಡಿದರು.
ಗೆಲುವಿಗಾಗಿ ಹೋರಾಟ
ಸ್ಮೃತಿ ವಿಕೆಟ್ ಪತನದ ನಂತರ ಜತೆಯಾದ ನಾಯಕಿ ಹರ್ಮನ್ಪ್ರೀತ್ ಕೌರ್ ಹಾಗೂ ಜಮೀಮಾ ಕೊನೆಯವರೆಗೂ ಗೆಲುವಿಗಾಗಿ ಹೋರಾಡಿದರು. ಆದರೆ ಆಫ್ರಿಕಾ ನೀಡಿದ ಬೃಹತ್ ಮೊತ್ತವನ್ನು ಈ ಇಬ್ಬರಿಗೆ ಸಾಧಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ ಹೋರಾಟದ ಇನ್ನಿಂಗ್ಸ್ ಆಡಿದ ಈ ಇಬ್ಬರು 90 ರನ್ಗಳ ಜೊತೆಯಾಟವನ್ನಾಡಿದರು. ಈ ವೇಳೆ ಜಮೀಮಾ 30 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ 53 ರನ್ ಬಾರಿಸಿದರೆ, ಹರ್ಮನ್ಪ್ರೀತ್ 29 ಎಸೆತಗಳಲ್ಲಿ 35 ರನ್ ಬಾರಿಸಿ ಅಜೇಯರಾಗಿ ಉಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:21 pm, Fri, 5 July 24